More

    ಅಕ್ರಮ ಗ್ಯಾಸ್ ಫಿಲ್ಲಿಂಗ್‌ಗೆ ಬಿತ್ತು ಬ್ರೇಕ್..!

    ವಿಜಯಪುರ: ವಿಜಯವಾಣಿ-ದಿಗ್ವಿಜಯ ನ್ಯೂಸ್ ಮಾಡಿದ ಕುಟುಕು ಕಾರ್ಯಾಚರಣೆಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಸೋಮವಾರ ಬೆಳಗ್ಗೆ ಗುಮ್ಮಟನಗರದ ನಗರದ ಗಲ್ಲಿ ಗಲ್ಲಿ ಜಾಲಾಡಿ ಅಕ್ರಮ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ ಆರು ಅಡ್ಡೆಗಳ ಮೇಲೆ ದಾಳಿ ಮಾಡಿ ಫಿಲ್ಲಿಂಗ್‌ಗೆ ಬಳಸುತ್ತಿದ್ದ ವಸ್ತುಗಳನ್ನು ಸೀಜ್ ಮಾಡಿದರಲ್ಲದೇ, ವಾಣಿಜ್ಯ ಉಪಯೋಗಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದ 85 ಕ್ಕೂ ಅಧಿಕ ಡೊಮೆಸ್ಟಿಕ್ ಸಿಲಿಂಡರ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.

    ನಿರಂತರವಾಗಿ ಅಕ್ರಮ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದರೂ ಯಾರೂ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಕುಟುಕು ಕಾರ್ಯಾಚರಣೆ ನಡೆಸಿ ಫೆ. 16 ರಂದು ‘ಎಗ್ಗಿಲ್ಲದೆ ಸಾಗಿದ ಅಕ್ರಮ ಗ್ಯಾಸ್ ಫಿಲ್ಲಿಂಗ್’ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿತ್ತು.

    ವರದಿಗೆ ಸ್ಪಂದಿಸಿದ ಆಹಾರ ಇಲಾಖೆ ಉಪ ನಿರ್ದೇಶಕಿ ಸುರೇಖಾ ಹಾಗೂ ಅಧಿಕಾರಿಗಳ ತಂಡ ಆರು ಅಡ್ಡೆಗಳ ಮೇಲೆ ದಾಳಿ ನಡೆಸಿ, ಗ್ಯಾಸ್ ಫಿಲ್ ಮಾಡುತ್ತಿದ್ದ ಯಂತ್ರಗಳು, ತೂಕ ಮಾಡುವ ಯಂತ್ರ, ವಿದ್ಯುತ್ ಸಾಧನಗಳು ಸೇರಿದಂತೆ ಗ್ಯಾಸ್ ಫಿಲ್ಲಿಂಗ್‌ಗೆ ಬಳಸುತ್ತಿದ್ದ ಇತರೆ ವಸ್ತುಗಳನ್ನು ಜಪ್ತಿ ಮಾಡಿ, ಅಡ್ಡೆಯಲ್ಲಿದ್ದ ಸಿಲಿಂಡರ್‌ಗಳನ್ನು ಜೊತೆಗೆ ವಿವಿಧ ಹೋಟೆಲ್‌ಗಳ ಮೇಲೂ ದಾಳಿ ಮಾಡಿ ಅಲ್ಲಿ ಬಳಸುತ್ತಿದ್ದ 85ಕ್ಕೂ ಅಧಿಕ ಮನೆ ಬಳಕೆಯ ಅಡುಗೆ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

    ವರದಿಗೆ ಸ್ಪಂದಿಸಿದ ಅಧಿಕಾರಿಗಳು ಸದ್ಯಕ್ಕೇನೋ ಅಕ್ರಮ ಗ್ಯಾಸ್ ಫಿಲ್ಲಿಂಗ್ ದಂಧೆಗೆ ಬ್ರೇಕ್ ಹಾಕಿದ್ದಾರೆ. ಆದರೆ ಈಗಾಗಲೇ ಅಕ್ರಮ ದಂಧೆ ನಡೆಸಿ ಸಿಕ್ಕಿಬಿದ್ದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಮತ್ತೆ ಅಕ್ರಮ ಗ್ಯಾಸ್ ವಾಸನೆ ನಡಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆ ಅಧಿಕಾರಿಗಳ ಮೇಲಿದೆ.

    ಎಲ್ಲೆಲ್ಲಿ ದಾಳಿ
    ವಿಜಯಪುರ ನಗರದ ಗೋಳಗುಮ್ಮಟ ಸುತ್ತಮುತ್ತ, ಜಾಮಿಯಾ ಮಸಜೀದ್, ತೇಕಡೆ ಗಲ್ಲಿ, ಬಾಗಲಕೋಟೆ ಕ್ರಾಸ್, ರಾಮನಗರ, ಸುಹಾಗ ಕಾಲನಿ ಸೇರಿದಂತೆ ಅನೇಕ ಕಡೆಗಳಲ್ಲಿ ಆಹಾರ ಇಲಾಖೆ ಉಪ ನಿರ್ದೇಶಕಿ ಸುರೇಖಾ ಕಿಣಗಿ, ಸಹಾಯಕ ನಿರ್ದೇಶಕ ಕೆ.ಆರ್. ಕುಂಬಾರ, ಅಧಿಕಾರಿಗಳಾದ ಅಮರೇಶ ತಾಂಡೂರ, ನಾಮದೇವ ಚವ್ಹಾಣ, ರಾಜಕುಮಾರ ಕಟ್ಟಿಮನಿ, ಎಸ್.ಎಂ. ಬಡ್ಡಿ, ಪ್ರಭಾವತಿ ಭಾವಿಕಟ್ಟಿ, ಪ್ರಕಾಶ ಮೂಕಿಹಾಳ, ಕೈಲಾಶ ಸೋನಾವಣೆ ಭಾಗವಹಿಸಿದ್ದರು.

    ವಿಜಯವಾಣಿ-ದಿಗ್ವಿಜಯ ಸುದ್ದಿವಾಹಿನಿ ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ ಬಗ್ಗೆ ವರದಿ ಬಿತ್ತರಿಸಿದ್ದು ಶ್ಲಾಘನೀಯ. ಇಂತಹ ಅಕ್ರಮಗಳು ಕಂಡುಬಂದಲ್ಲಿ ಅಧಿಕಾರಿಗಳೂ ನಿರಂತರವಾಗಿ ಗಮನ ಹರಿಸುತ್ತಾರೆ. ಜೊತೆಗೆ ಅಕ್ರಮ ಕಂಡು ಬಂದಲ್ಲಿ ಕೂಡಲೆ ಇಲಾಖೆಗೆ ತಿಳಿಸಿದರೆ ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.
    ಸುರೇಖಾ ಕಿಣಗಿ, ಉಪನಿರ್ದೇಶಕಿ, ಆಹಾರ ಇಲಾಖೆ

    ಗ್ಯಾಸ್ ಅಡ್ಡೆಗಳ ಮೇಲೆ ದಾಳಿ ನಡೆಯುತ್ತಿದ್ದಂತೆ ಸುತ್ತಮುತ್ತಲಿನ ಜನರು ನಿರಾಳವಾಗಿದ್ದಾರೆ. ಇವರು ನಡೆಸುತ್ತಿದ್ದ ಅಕ್ರಮದಿಂದ ಭಯವಾಗುತ್ತಿತ್ತು. ಹೆಚ್ಚು ಕಡಿಮೆಯಾಗಿ ಯಾವಾಗ ಬ್ಲಾಸ್ಟ್ ಆಗುತ್ತದೋ, ಜೀವ ಕಳೆಯುತ್ತದೋ ಎಂಬ ಆತಂಕದಲ್ಲಿದ್ದೆವು. ಅಲ್ಲದೇ ಈ ಮಾಫಿಯಾಗೆ ಹೆದರಿ ಸುಮ್ಮನಿದ್ದೆವು. ನಾಲ್ಕಾರು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು ಏಕೆ ಕ್ರಮ ತೆಗೆದುಕೊಂಡಿರಲಿಲ್ಲ. ಗ್ಯಾಸ್ ಮಾಫಿಯಾ ಬಗ್ಗೆ ಕುಟುಕು ಕಾರ್ಯಾಚರಣೆ ಮಾಡಿ ಅಕ್ರಮ ಬಯಲಿಗೆಳೆದಿದ್ದಕ್ಕೆ ವಿಜಯವಾಣಿ- ದಿಗ್ವಿಜಯಕ್ಕೆ ಧನ್ಯವಾದಗಳು.
    ಎನ್.ಆರ್. ಕುಲಕರ್ಣಿ, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts