More

    ಗಾನ ಗಾರುಡಿಗನ ಮೋಡಿಗೆ ಫಿದಾ

    ವಿಜಯಪುರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ ವೆಂಕಟೇಶಕುಮಾರ್ ಅವರ ನಾದಸುಧೆಗೆ ಗುಮ್ಮಟನಗರಿ ಜನತೆ ತಲೆಬಾಗಿದರು.

    ಇಲ್ಲಿನ ಆನಂದ ಮಹಲ್ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳು ಹಿಂದುಸ್ತಾನಿ ಹಾಡುಗಾರಿಕೆಯ ಗಾನ ಗಾರುಡಿಗ ಹೊಮ್ಮಿಸಿದ ನಾದಲೀಲೆಯಲ್ಲಿ ಮಿಂದು ಪುಳಕಿತರಾದರು.

    ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ ಹಾಸನಿಕ್ಕಿ ಸಾಲಿಗನಾದ… ವೇದವನೋದಿ ಹಾರವನಾದ…. ಎಂಬ ಬಸವೇಶ್ವರ ವಚನ, ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಎಂಬ ಕನಕದಾಸರ ಕೀರ್ತನೆ, ಒಂದು ಬಾರಿ ಸ್ಮರಣೆ ಸಾಲದೆ ಆನಂದ ತೀರ್ಥರ, ಪೂರ್ಣಪ್ರಜ್ಞರ … ಹೀಗೆ ವಿವಿಧ ಕೀರ್ತನೆಗಳು, ವಚನಗಳು, ದಾಸರ ಪದಗಳು ಪ್ರೇಕ್ಷಕರ ಮನಮುಟ್ಟಿದವು.

    ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಿದರೆ, ಪಂಡಿತ ಶಾಂತಲಿಂಗ ದೇಸಾಯಿ ಅವರ ತಬಲಾ ವಾದನ ಪ್ರೇಕ್ಷಕರ ಗಮನ ಸೆಳೆಯಿತು.

    ಗುರುವಿನ ಸ್ಮರಣೆ
    ಈ ವೇಳೆ ಪಂಡಿತ ವೆಂಕಟೇಶಕುಮಾರ್ ಮಾತನಾಡಿ, ಹಳ್ಳಿಯಿಂದ ಬಂದವನು ಗುರುಗಳ ಆಶೀರ್ವಾದದಿಂದ ಎಲ್ಲ ಸಿಕ್ಕಿತು ನನಗೆ. ಗದಗದ ವಿರೇಶ್ವರ ಪುಣ್ಯಾಶ್ರಮ ಸ್ಥಾಪಿಸಿದವರು ಗಾನಯೋಗಿ ಪುಟ್ಟರಾಜ ಗವಾಯಿಗಳು. ದೊಡ್ಡವರ ಆಶೀರ್ವಾದದಿಂದ ಏನು ಬೇಕಾದರೂ ಆಗ್ತದೆ ಎಂಬುದಕ್ಕೆ ನಾನೇ ಒಂದು ಉದಾಹರಣೆ. ಇಂದು ಪಂಡಿತ್ ಪುಟ್ಟರಾಜ ಗವಾಯಿಗಳ ಜನ್ಮ ದಿನ. ಇದೊಂದು ಸುಯೋಗ ಎಂದು ಸ್ಮರಿಸಿದರು. ವಿಜಯಪುರದಲ್ಲಿ ಅನೇಕ ಕಲಾವಿದರು ಹಾಡಿ ಹೋಗಿದ್ದಾರೆ. ಆದಿಲ್‌ಶಾಹಿಗಳ ಕಾಲದಿಂದಲೂ ವಿಜಯಪುರ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದರು.

    ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ, ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಹಾಗೂ ನೂರಾರು ಕಲಾವಿದರು, ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts