More

  ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

  ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ ಶೀಘ್ರ ಆದೇಶ ಹೊರಡಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

  ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

  ವೇಗವಾಗಿ ವಾಹನ ಚಲಾಯಿಸುವುದರಿಂದ ನಿಮ್ಮ ಹಾಗೂ ಕುಟುಂಬದ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಆಲೋಚಿಸಬೇಕು. ಅವಲಂಬಿತ ಕುಟುಂಬದವರ ಬಗ್ಗೆ ಕಾಳಜಿ ವಹಿಸಿ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಿ, ಇನ್ನೊಬ್ಬರಲ್ಲಿಯೂ ರಸ್ತೆ ಸಂಚಾರಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

  ಜಿಲ್ಲಾ ಪೊಲೀಸ್ ವರಿಷ್ಠಾಧಿರಿ ಪ್ರಕಾಶ ನಿಕ್ಕಂ ಮಾತನಾಡಿ, ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದು , ಸಂಚಾರಿ ನಿಯಮ ಪಾಲನೆ ಕೊರತೆಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಜಿಲ್ಲೆಯಲ್ಲಿ ಪ್ರತಿದಿನ ಅಪಘಾತದಲ್ಲಿ ಒಬ್ಬರು ಮರಣ ಹೊಂದುತ್ತಿದ್ದು, ನಾಲ್ವರು ಗಾಯಾಳುಗಳಾಗುತ್ತಿದ್ದಾರೆ. ಅದರಿಂದಾಗಿ ಅವರ ಕುಟುಂಬ ಬೀದಿಗೆ ಬರುವಂತ ಸ್ಥಿತಿಯಿದೆ. ಪ್ರತಿದಿನ ಕುಟುಂಬ ದುಃಖದಲ್ಲಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ತಪ್ಪದೆ ಹಾಕಿಕೊಳ್ಳಬೇಕು ಎಂದು ಅವರು ಹೇಳಿದರು.

  ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿದರು. ಡಿವೈಎಸ್‌ಪಿ ಕೆ.ಎಸ್. ಲಕ್ಷ್ಮೀನಾರಾಯಣ ಇನ್ನಿತರರಿದ್ದರು. 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts