More

    ಡಾ. ಶಾಂತವೀರ ಮನಗೂಳಿ ಮೇಲೆ ದೂರು ದಾಖಲು

    ವಿಜಯಪುರ: ಕರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಸಂಸದ ರಮೇಶ ಜಿಗಜಿಣಗಿ ಕಾರ್ಯವೈಖರಿ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇರೆಗೆ ಮಾಜಿ ಸಚಿವ ದಿ. ಎಂ.ಸಿ. ಮನಗೂಳಿ ಅವರ ಪುತ್ರನ ಮೇಲೆ ಪ್ರಕರಣ ದಾಖಲಾಗಿದೆ.

    ಸಿಂದಗಿ ಪುರಸಭೆ ಅಧ್ಯಕ್ಷರೂ ಆಗಿರುವ ಡಾ. ಶಾಂತವೀರ ಮನಗೂಳಿ ಮೇಲೆ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಸದರ ಅಭಿಮಾನಿ ದತ್ತಾತ್ರೇಯ ಪರಸಪ್ಪ ಬಂಡೆನವರ ಎಂಬುವರು ದೂರು ದಾಖಲಿಸಿದ್ದಾರೆ.

    ಪ್ರಕರಣದ ವಿವರಣೆ
    ಮೇ 7 ರಂದು ಡಾ.ಶಾಂತವೀರ ಮನಗೂಳಿ ಅವರು ಸಂಸದ ಜಿಗಜಿಣಗಿ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ. ಇದನ್ನು ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಸಣ್ಣ ವಾಲಿಕಾರ ಎಂಬುವರು ದತ್ತಾತ್ರೇಯಗೆ ಹಂಚಿಕೊಂಡಿದ್ದಾರೆ. ಬಳಿಕ ಮಲ್ಲಿಕಾರ್ಜುನ ಇವರನ್ನು ವಿಚಾರಿಸಲಾಗಿ ಸದರಿ ಪೋಸ್ಟನ್ನು ಯಲ್ಲಪ್ಪ ಧರ್ಮಣ್ಣ ವಾಲೀಕಾರ ಎಂಬುವರು ತಮ್ಮೊಂದಿಗೆ ಹಂಚಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದನ್ನಾಧರಿಸಿ ಯಲ್ಲಪ್ಪನನ್ನು ವಿಚಾರಿಸಲಾಗಿ ಶಾಂತವೀರ ಮನಗೂಳಿ ಅವರು ಕಮೆಂಟ್ ಮಾಡಿದ್ದು ಅವರ ಮೇಲೆ ಪ್ರಕರಣ ದಾಖಲಿಸಿ ಎದು ಹೇಳಿದ್ದಾನೆ. ಹೀಗಾಗಿ ಶಾಂತವೀರ ಮನಗೂಳಿ ಅವರು ಸಂಸದರ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದು ಅವರ ಮೇಲೆ ಕ್ರಮ ಜರುಗಿಸಲು ದೂರಿನಲ್ಲಿ ತಿಳಿಸಲಾಗಿದೆ.

    ಶಾಂತವೀರ ಪರ ಬ್ಯಾಟಿಂಗ್
    ಇನ್ನು ಶಾಂತವೀರ ಮನಗೂಳಿ ಪರ ಡಿಎಸ್‌ಎಸ್ ಸಂಚಾಲಕ ಪರಶುರಾಮ ಕಾಂಬ್ಳೆ ಬ್ಯಾಟಿಂಗ್ ಮಾಡಿದ್ದು, ಜಿಲ್ಲೆಯಲ್ಲಿ ಕರೊನಾ ಹಾವಳಿ ಹೆಚ್ಚಿದ್ದು, ಸಾಕಷ್ಟು ಜನ ಸಂಸದರ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅದರಲ್ಲಿ ಶಾಂತವೀರ ಅವರು ಸಹ ಕಮೆಂಟ್ ಮಾಡಿದ್ದು ಕೇವಲ ಅವರ ಮೇಲಷ್ಟೇ ದೂರು ದಾಖಲಿಸಿದ್ದು ಇದೊಂದು ರಾಜಕೀಯ ಹುನ್ನಾರ ಎಂದಿದ್ದಾರೆ.

    ಕರೊನಾ ನಿರ್ವಹಣೆಯಲ್ಲಿ ಡಾ. ಶಾಂತವೀರ ಸಾಕಷ್ಟು ಶ್ರಮಿಸುತ್ತಿದ್ದಾರೆ. ಅದೇ ರೀತಿ ಸಂಸದರು ಸಹ ಎಚ್ಚೆತ್ತಕೊಂಡು ಆಸ್ಪತ್ರೆಗಳ ನಿರ್ವಹಣೆ ಮಾಡಬೇಕು. ನಾನೂ ಒಬ್ಬ ದಲಿತನಾಗಿದ್ದು, ಸಂಸದರು ಎಷ್ಟು ಜನ ದಲಿತರಿಗೆ ಆಸ್ಪತ್ರೆ ವ್ಯವಸ್ಥೆ ಮಾಡಿದ್ದಾರೆ ಹೇಳಲಿ. ಅದನ್ನು ಬಿಟ್ಟು ಸುಖಾ ಸುಮ್ಮನೆ ಶಾಂತವೀರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

    ಒಟ್ಟಿನಲ್ಲಿ ಕರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಸಂಸದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿರುವ ಆಕ್ರೋಶ, ಅಸಮಾಧಾನ ಸೇರಿದಂತೆ ಪರ-ವಿರೋಧ ಚರ್ಚೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪ್ರಕರಣ ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕು.

    ಶಾಂತವೀರ ಸ್ವಂತ ಬುದ್ದಿಯಿಂದ ಮಾಡಿಲ್ಲ !
    ಡಾ. ಶಾಂತವೀರ ಅವಹೇಳನಕಾರಿ ಪೋಸ್ಟ್ ಮಾಡಿದ ಬಗ್ಗೆಯಾಗಲಿ, ಆತನ ಮೇಲೆ ಪ್ರಕರಣ ದಾಖಲಾದ ಬಗ್ಗೆಯಾಗಲಿ ಗಮನಕ್ಕಿಲ್ಲ. ಹಾಗೊಂದು ವೇಳೆ ಮಾಡಿದ್ದರೂ ಶಾಂತವೀರ ಸ್ವಂತ ಬುದ್ಧಿಯಿಂದ ಮಾಡಿರಲಿಕ್ಕಿಲ್ಲ. ಒಬ್ಬ ಪುರಸಭೆ ಅಧ್ಯಕ್ಷನಾಗಿ ಶಾಂತವೀರ ಯಾರದ್ದೋ ಮಾತು ಕೇಳಿ ಹೀಗೆ ಮಾಡಬಾರದು ಎಂದು ಸಂಸದ ರಮೇಶ ಜಿಗಜಿಣಗಿ ಸಿಂಪಥಿ ತೋರಿದ್ದಾರೆ.

    ಕರೋನಾ ಕಾಲಘಟ್ಟದಲ್ಲಿ ನಾನೆಂದೂ ಸುಮ್ಮನೆ ಕುಳಿತಿಲ್ಲ. ಮಧ್ಯರಾತ್ರಿ ಕರೆ ಬಂದರೂ ಖುದ್ದಾಗಿ ಸ್ವೀಕರಿಸಿ ಜನರ ಸಮಸ್ಯೆಆಲಿಸಿ ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. 1983ರಿಂದ ಮಂತ್ರಿಯಾದಾಗಿನಿಂದ ಈವರೆಗೂ ನಾನು ಜನರ ಮಧ್ಯದಲ್ಲಿಯೇ ಬೆಳೆದವನು. ಜನ ಇಲ್ಲವೆಂದರೆ ನನಗೆ ನಿದ್ದೆ ಸಹ ಹತ್ತದು. ಇದೀಗ ಯಾರೂ ನಾಲ್ಕು ಜನ ಆಗದವರು ನನ್ನ ಬಗ್ಗೆ ಏನೇನೋ ಮಾತನಾಡುತ್ತಾರೆಂದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ಜಿಗಜಿಣಗಿ ಪ್ರತಿಕ್ರಿಯಿಸಿದ್ದಾರೆ.

    ನನಗೂ ಎರಡು ಬಾರಿ ಕರೊನಾ ಪಾಸಿಟಿವ್ ಬಂದಿದೆ. ವೈದ್ಯರ ಸಲಹೆ ಮೇರೆಗೆ ಹೊರಗಡೆ ಬರಲಾಗಿಲ್ಲ. ಇದನ್ನೆ ತಪ್ಪಾಗಿ ಅರ್ಥೈಸಿಕೊಂಡರೆ ನಾನೇನು ಮಾಡಲಿ? ಹಾಗಂತ ಜನರ ಸಮಸ್ಯೆಗೆ ಸ್ಪಂದಿಸದೆ ಇರಲಿಕ್ಕಾಗುತ್ತಾ? ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಹಾಗೂ ಔಷಧ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸಮಸ್ಯೆ ಹೇಳಿಕೊಂಡ ಜನರಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಿದ್ದೇನೆ. ಯಾರು ಏನೇ ಅಂದುಕೊಂಡರೂ ಅದಕ್ಕೆ ತಲೆ ಕೆಡಿಸಿಕೊಳ್ಳಲಾರೆ. ಜನರ ಸೇವೆ ಮಾಡಿದ್ದನ್ನು ನಾನೆಲ್ಲೂ ಹೇಳಿಕೊಳ್ಳಲಾರೆ. ನಾನು ಮಾಡಿದ ಸತ್ಕಾರ್ಯ ಅರಿಯದೆ ಬೈಯುವವರು ಬೈಯಲಿ. ನಾನು ಪ್ರಚಾರಕ್ಕೆ ಏನನ್ನೂ ಮಾಡಲಾರೆ ಎಂದು ಜಿಗಜಿಣಗಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

    ಜನರ ಸಂಕಟವೇ ನನ್ನ ಆಕ್ರೋಶಕ್ಕೆ ಕಾರಣ
    ಕರೊನಾದಿಂದ ಚಿಕಿತ್ಸೆ ಸಿಗದೆ ಜನ ಸಾಯುತ್ತಿದ್ದಾರೆ. ಅವರ ಸಂಕಟ ನೋಡಲಾಗದೆ ಸಂಸದರ ಮೇಲೆ ಆಕ್ರೋಶ ಹೊರಹಾಕಿದ್ದು ನಿಜ. ಅವರು ನೋಟಿಸ್ ಕೊಡಲಿ ಬೇಕಾದರೆ ಅದಕ್ಕೆ ಉತ್ತರ ಕೊಡುವೆ. ಹಾಗಂತ ನಾನೆಲ್ಲೂ ನನ್ನ ವೈಯಕ್ತಿಕ ಸಮಸ್ಯೆಯಿಂದಾಗಿ ಸಂಸದರ ಮೇಲೆ ಆಕ್ರೋಶ ಹೊರಹಾಕಿಲ್ಲ. ಬದಲಾಗಿ ಜನರಿಗಾಗಿ ಆಕ್ರೋಶ ಹೊರಹಾಕಿದ್ದೇನೆಂದು ಸಿಂದಗಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಪ್ರತಿಕ್ರಿಯಿಸಿದರು.

    ಸಂಸದರ ಬಗ್ಗೆ ನಾನೊಬ್ಬನೆ ಅಲ್ಲ, ಜಿಲ್ಲೆಯ ಸಾವಿರಾರು ಜನ ಆರೋಪ ಮಾಡುತ್ತಿದ್ದಾರೆ. ಅವರೆಲ್ಲರ ಮೇಲೆ ಪ್ರಕರಣ ದಾಖಲಿಸಲಿ ನೋಡೋಣ. ನಾನು ಕೆಟ್ಟ ಪದ ಬಳಸಿರಬಹುದು, ಅದಕ್ಕೆ ಜನರ ಸಂಕಷ್ಟವೇ ಕಾರಣ. ಆದರೂ ಕೂಡಲೇ ಆ ಪದವನ್ನು ಅಳಿಸಿ ಹಾಕಿದ್ದೇನೆ. ಅದರಿಂದ ಸಂಸದರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆಂದರು.

    ಸಂಸದ ರಮೇಶ ಜಿಗಜಿಣಗಿ ಹಿರಿಯರು. ಅವರ ಆರೋಗ್ಯದ ಬಗ್ಗೆ ವೈದ್ಯನಾದ ನನಗೂ ಕಾಳಜಿ ಇದೆ. ನನ್ನ ತಂದೆಯ ಸಮಾನರಾದ ಸಂಸದರು ಮನೆಯಲ್ಲಿದ್ದುಕೊಂಡೇ ಕರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ವಿಡಿಯೋ ಸಂವಾದ ನಡೆಸಬಹುದಿತ್ತಲ್ಲ. ಅದನ್ನೂ ಮಾಡದ ಇವರು ಎಷ್ಟರಮಟ್ಟಿಗೆ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆಂಬ ಆಕ್ರೋಶ ಬಂದಿದ್ದು ಸಹಜ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ‘ವಿಜಯವಾಣಿ’ಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts