More

    ನನ್ನಂತೆ ಅಭಿವೃದ್ಧಿ ಮಾಡಿ ತೋರಿಸಿ

    ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3 ರಡಿ ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕ ಬೆನ್ನಲ್ಲೇ ಕೈ ಶಾಸಕರ ಮಧ್ಯೆ ಜಟಾಪಟಿ ಶುರುವಾಗಿದೆ.

    ಮನವಿ ಸಲ್ಲಿಸಿದ ಕೇವಲ ಒಂದೇ ದಿನದಲ್ಲಿ ಆಡಳಿತಾತ್ಮಕ ಅನುಮೋದನೆ ಸಿಗುವಂತಿದ್ದರೆ ನನೆಗುದಿಗೆ ಬಿದ್ದಿರುವ ಜಿಲ್ಲೆಯ ನೀರಾವರಿ ಯೋಜನೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಬದಲು ಇವರಿಗೆ ಸಲ್ಲಿಸುವುದೇ ಸೂಕ್ತ. ಇವರ ಮನವಿಗೆ ಅಷ್ಟು ತಾಕತ್ತಿದ್ದರೆ ಫ.ಗು.ಹಳಕಟ್ಟಿ ಅವರ ಶಿವಾನುಭವ ಪತ್ರಿಕೆಗೆ ಸಂಬಂಧಿಸಿದ ಮನವಿಯೂ ಪುರಸ್ಕರಿಸಬೇಕಿತ್ತಲ್ಲ? ಇವರೇನು ಆಡಳಿತ ಪಕ್ಷದ ಪ್ರತಿನಿಧಿಯಾ? ನಾವೆಲ್ಲ ಪ್ರತಿಪಕ್ಷ ಸ್ಥಾನದಲ್ಲಿದ್ದೇವೆ ಎಂಬುದರ ಪರಿಜ್ಞಾನ ಇರಲಿ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮದೇ ಪಕ್ಷದ ಶಾಸಕ ಎಂ.ಬಿ. ಪಾಟೀಲರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ತಾಕತ್ತಿದ್ದರೆ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಿ. ಹಾಗೆ ಮಾಡಿದರೆ ಹೋರ್ತಿ ರೇವಣಸಿದ್ಧೇಶ್ವರ ದೇವಸ್ಥಾನ ಪಕ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇವರ ಪ್ರತಿಮೆ ಸ್ಥಾಪಿಸುವೆ. ಭೀಮಾ ನದಿಯ 8 ಬ್ಯಾರೇಜ್‌ಗಳನ್ನು ಎತ್ತರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಅದಕ್ಕೆ ಆಡಳಿತಾತ್ಮಕ ಅನುಮೋದನೆ ಕೊಡಿಸಲಿ. ಅದನ್ನು ಬಿಟ್ಟು ಕೇವಲ ಮನವಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವುದು ಬಾಲಿಶತನ. ಈ ಹಿಂದೆ ತಾವೇ ನಿರ್ವಹಿಸುತ್ತಿದ್ದ ನೀರಾವರಿ ಇಲಾಖೆ ಅಧಿಕಾರಿಗಳನ್ನಿಟ್ಟುಕೊಂಡು ಕೀಳು ಮಟ್ಟದ ಪ್ರಚಾರ ಪಡೆಯುವುದು ಸರಿಯಲ್ಲ ಎಂದರು.

    ನೀರಾವರಿ ಮಂತ್ರಿ ಗುಂಗು ಹೋಗಿಲ್ಲ
    ಬಹುಶಃ ನೀರಾವರಿ ಮಂತ್ರಿ ಗುಂಗು ಇನ್ನೂ ಹೋದಂತಿಲ್ಲ. ಆಲಮಟ್ಟಿ ಜಲಾಶಯಕ್ಕೆ ಲಾಲ್‌ಬಹಾದುರ್ ಶಾಸ್ತ್ರಿ ಹೆಸರು ತೆಗೆದು ಇವರದ್ದೇ ಹೆಸರು ಹಾಕವುದು ಒಳಿತು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಹಳಷ್ಟು ಜನ ಶ್ರಮಿಸಿದ್ದಾರೆ. ಸುಗಂಧಿ ಮುರುಗೆಪ್ಪ, ಬಿ.ಕೆ. ಗುಡದಿನ್ನಿ, ಕಾಳಿಂಗಪ್ಪ ಚೌದ್ರಿ, ಗುಲಾಟಿ ಅವರು ಹೀಗೆ ಅನೇಕರು ಈ ಜಿಲ್ಲೆಯ ನೀರಾವರಿಗೆ ಶ್ರಮಿಸಿದ್ದಾರೆ. ಅಂಥದರಲ್ಲಿ ನೀರಾವರಿಯಾಗಿದ್ದೇ ನನ್ನಿಂದ ಎಂಬುದು ಸರಿಯಲ್ಲ ಎಂದು ಎಂ.ಬಿ. ಪಾಟೀಲರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

    ಬೇಕಾದರೆ ಎಲ್ಲ ನೀರಾವರಿ ಯೋಜನೆಗಳ ಕ್ರೆಡಿಟ್ ನೀವೇ ತೆಗೆದುಕೊಳ್ಳಿ. ನಮ್ಮ ಜನರ ಸಮಸ್ಯೆ ಬಗೆಹರಿಸಿ. ಬಾಕಿ ಇರುವ ಯೋಜನೆಗಳಿಗೂ ಅನುಮೋದನೆ ಕೊಡಿಸಿ ಎಂದು ಸವಾಲು ಹಾಕಿದರು.

    ಕ್ಷೇತ್ರದಲ್ಲಿ ಹಸ್ತಕ್ಷೇಪ
    ಈ ಭಾಗದ ಜನ ಹಾಗೂ ಮಠಾಧೀಶರು ನಮ್ಮ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ನಾವೆಲ್ಲ ಪ್ರಬುದ್ಧ ರಾಜಕಾರಣ ಮಾಡಬೇಕು. ಬೇರೆಯವರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ನಾನು ಬಬಲೇಶ್ವರ ಕ್ಷೇತ್ರದಲ್ಲಿ ಹೋಗಿ ಹೀಗೆ ಮಾಡಿದರೆ ಸರಿ ಇರುತ್ತಾ? ಆ ಕ್ಷೇತ್ರದಲ್ಲಿ ನನ್ನಂತೆ ಅಭಿವೃದ್ಧಿ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೆ ಸರಿ ಎನ್ನಿಸುತ್ತಾ? ಎಂದು ಪ್ರಶ್ನಿಸಿದ ಯಶವಂತರಾಯಗೌಡರು, ನಿಮಗೆ ತಾಕತ್ತಿದ್ದರೆ ನನ್ನಂತೆ ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟಿ ತೋರಿಸಿ, ಮಿನಿ ವಿಧಾನಸೌಧ ನಿರ್ಮಿಸಿ, ನನ್ನ ಕ್ಷೇತ್ರದಲ್ಲಾದಂತೆ ಅಭಿವೃದ್ಧಿ ಮಾಡಿ ತೋರಿಸಿ ನೋಡೋಣ ಎಂದು ಸವಾಲೆಸೆದರು.

    ಇಂಥ ವರ್ತನೆಗಳನ್ನು ಸಾಕಷ್ಟು ಸಹಿಸಿಕೊಂಡಿದ್ದೇನೆ. ಹೈಕಮಾಂಡ್‌ಗೂ ದೂರು ನೀಡಿದ್ದೇನೆ. ಇದೀಗ ಮತ್ತೆ ಅನಿವಾರ್ಯವಾಗಿ ಮಾತನಾಡಬೇಕಿದೆ. ಬಹಳ ನೊಂದು ಈ ಮಾತು ಹೇಳಬೇಕಾಗಿದೆ. ಇನ್ನೂ ಸಾಕಷ್ಟು ವಿಷಯಗಳಿವೆ. ಆದರೆ, ಮಾತನಾಡಲು ಹೋಗಲ್ಲ. ಜಿಲ್ಲೆಯ ಜನ ಇದನ್ನು ನಿರೀಕ್ಷೆ ಮಾಡುವುದಿಲ್ಲ. ಇನ್ನಾದರೂ ಬದಲಾಗಿ ಎಂದರು.

    ಕೆರೆಗಳಿಗೆ ನೀರು ತುಂಬಿಸಲು ಮನವಿ
    ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬಿಸುವಂತೆ ಪ್ರಥಮವಾಗಿ 2020 ಮೇ 29 ರಂದು ನಾನು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಹೇಳಿದರು. ಹಿಂದಿನ ನೀರಾವರಿ ಮಂತ್ರಿಗಳಾದ ರಮೇಶ ಜಾರಕಿಹೊಳಿ, ನಮ್ಮ ಪಕ್ಷದ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಸೇರಿ ಸಂಬಂಧಿಸಿದ ಎಲ್ಲರಿಗೂ ಮನವಿ ಸಲ್ಲಿಸಿದ್ದೇನೆ. ಸದನದಲ್ಲಿ ಧ್ವನಿ ಎತ್ತಿದ್ದೇನೆ. ಕಳೆದ ವರ್ಷವೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಹೋಗಿತ್ತು. ಆದರೆ, ಕರೊನಾ ಸಂದಿಗ್ಧ ಸ್ಥಿತಿಯಲ್ಲಿ ಅದಾಗಲಿಲ್ಲ. ಇದೀಗ ಬಿ.ಎಸ್. ಯಡಿಯೂರಪ್ಪ ಅವರು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಅವರಿಗೆ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಎಂ.ಬಿ. ಪಾಟೀಲರದ್ದು ತಪ್ಪಾ?
    ಕೆರೆಗೆ ನೀರು ತುಂಬುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಶಾಸಕ ಡಾ.ಎಂ.ಬಿ. ಪಾಟೀಲ ಮನವಿ ಮಾಡಿದ್ದು ತಪ್ಪಾ?ಅಥವಾ ಅವರು ಮನವಿ ಸಲ್ಲಿಸುತ್ತಿದ್ದಂತೆ ಸರ್ಕಾರ ಅನುಮೋದನೆ ನೀಡಿತಲ್ಲ ಅದು ತಪ್ಪಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಯಶವಂತರಾಯಗೌಡ ಪಾಟೀಲ, ಎರಡೂ ಅಲ್ಲ. ಇವರ ವಿಧಾನ ತಪ್ಪು ಎಂದರು.

    ಆಡಳಿತಾತ್ಮಕ ಅನುಮೋದನೆ ಸಿಗಲಿದೆ ಎಂದು ಗೊತ್ತಾಗುತ್ತಿದ್ದಂತೆ ಎಂ.ಬಿ. ಪಾಟೀಲರು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂಬುದು ತಮ್ಮ ಮಾತಿನ ತಾತ್ಪರ್ಯವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ತಮಗೆಲ್ಲ ಗೊತ್ತಿರುವುದೇ…ನಾನು ಹೇಳುವ ಅಗತ್ಯವಿಲ್ಲ ಎಂದರು. ಇನ್ನು ನೀರಾವರಿ ಯೋಜನೆಗಳಿಗೆ ಒಗ್ಗಟ್ಟಾಗಿ ಹೋರಾಡಬೇಕಾದ ಜಿಲ್ಲೆಯ ಜನಪ್ರತಿನಿಧಿಗಳೇ ಹೀಗೆ ಪರಸ್ಪರ ಕಾಲೆಳೆದರೆ ಹೇಗೆ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಯಶವಂತರಾಯಗೌಡ, ಅಭಿವೃದ್ಧಿ ವಿಷಯದಲ್ಲಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವೆ. ಆದರೆ, ಈ ತೆರನಾದ ಕೀಳು ಮಟ್ಟದ ರಾಜಕೀಯ ಸರಿಯಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts