More

    ಪ್ರತಿಭೆಗಳಿಗೆ ಸೂಕ್ತ ವೇದಿಕೆ ಎಕ್ಸ್‌ಪೋ

    ವಿಜಯಪುರ: ನಗರದ ದರಬಾರ ಪ್ರೌಢಶಾಲೆ ಮೈದಾನದಲ್ಲಿ ಮೂರು ದಿನಗಳ ಶೈಕ್ಷಣಿಕ ಹಬ್ಬಕ್ಕೆ ಶುಕ್ರವಾರ ಬೆಳಗ್ಗೆ ಚಾಲನೆ ದೊರೆಯುತ್ತಿದ್ದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಹರಿದು ಬಂದು ಒಂದೇ ಸೂರಿನಡಿ ಹಲವು ಶಿಕ್ಷಣ ಸಂಸ್ಥೆಗಳಿಂದ ಮಾಹಿತಿ ಪಡೆದರು. ಮಹಾನಗರಗಳಲ್ಲಿ ನಡೆಯುವಂಥ ಬೃಹತ್ ಶಿಕ್ಷಣ ಕಾರ್ಯಕ್ರಮ ನಮ್ಮೂರಲ್ಲೇ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಎಲ್‌ಡಿಇ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಡಾ.ಎಂ.ಬಿ.ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಗೊಳಿಸಲು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ‘ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ’ ಹಮ್ಮಿಕೊಂಡ ಈ ಕಾರ್ಯಕ್ರಮ ಅದ್ಭುತವಾಗಿದೆ.

    ಹುಟ್ಟಿನಿಂದ ಯಾರೂ ಪ್ರತಿಭಾವಂತರಲ್ಲ. ಸಂಸ್ಕಾರ, ಸಂಸ್ಕೃತಿ, ಶಿಕ್ಷಣದಿಂದ ಪ್ರತಿಭೆ ಜನ್ಮ ತಾಳುತ್ತದೆ. ಈ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.

    ನಮ್ಮ ಭಾಗದ ಮಕ್ಕಳಲ್ಲಿ ಸಂವಹನದ ಕೊರತೆ ಇರಬಹುದು. ಆದರೆ, ಜ್ಞಾನದ ಕೊರತೆ ಇಲ್ಲ. ಗಣಿತ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಉತ್ತರ ಕರ್ನಾಟಕದವರು ನೀಡಿದ ಕೊಡುಗೆ ಅಪಾರ. ವಿಜ್ಞಾನ ಹಾಗೂ ಗಣಿತ ಕ್ಷೇತ್ರಕ್ಕೆ ಭಾರತೀಯರು ನೀಡಿದ ಕೊಡುಗೆಯನ್ನು ಕಂಡು ಪಾಶ್ಚಾತ್ಯ ರಾಷ್ಟ್ರಗಳು ಬೆರಗಾಗಿವೆ ಎಂದರು.

    ಬೃಹತ್ ಕಟ್ಟಡ ನಿರ್ಮಿಸಿದ ಮಾತ್ರಕ್ಕೆ ಶಿಕ್ಷಣ ಸಂಸ್ಥೆಗಳು ಬೆಳವಣಿಗೆಯಾದಂತಲ್ಲ. ಗುಣಮಟ್ಟದ ಶಿಕ್ಷಣ ಪೂರೈಸಿದರೆ ಮಾತ್ರ ಸಂಸ್ಥೆಗಳು ಬೆಳೆಯಲು ಸಾಧ್ಯ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಸೂಕ್ತ ಅವಕಾಶ ಹಾಗೂ ಮಾರ್ಗದರ್ಶನದ ಕೊರತೆ ಇದೆ. ಇತ್ತೀಚೆಗೆ ಈ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು ಆರಂಭವಾಗಿದ್ದು, ಅವುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಎಜುಕೇಷನ್ ಎಕ್ಸ್‌ಪೋ ಉತ್ತಮ ಕಾರ್ಯಕ್ರಮವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ, ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿದ್ದ ವಿಜಯಪುರದಲ್ಲಿ ಬಂಥನಾಳದ ಸಂಗನಬಸವ ಶ್ರೀಗಳ ಪ್ರಯತ್ನದ ಫಲವಾಗಿ ಬಿಎಲ್‌ಡಿಇಯಂಥ ಶ್ರೇಷ್ಠ ಶಿಕ್ಷಣ ಸಂಸ್ಥೆ ಜನ್ಮ ತಾಳಿತು. ದಿ.ಬಿ.ಎಂ.ಪಾಟೀಲರ ಪರಿಶ್ರಮದಿಂದ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಿತು. ಇಂದು ಎಂ.ಬಿ.ಪಾಟೀಲ ಅವರು ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈ ಭಾಗದ ಶೈಕ್ಷಣಿಕ ಕ್ರಾಂತಿಯಲ್ಲಿ ಬಿಎಲ್‌ಡಿಇ ಹಾಗೂ ಅಲ್‌ಅಮೀನ್ ವೈದ್ಯಕೀಯ ಕಾಲೇಜ್‌ಗಳು ಮಹತ್ವದ ಪಾತ್ರ ವಹಿಸಿವೆ.ಪತ್ರಿಕೆಗಳು ನಿತ್ಯ ಅನೌಪಚಾರಿಕ ಶಿಕ್ಷಣ ನೀಡುತ್ತಿದ್ದು, ವಿಜಯವಾಣಿ ಕೂಡ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿ ಮಾಡಿದೆ ಎಂದರು.

    ಶಿಕ್ಷಣ ಸಾಗರದಷ್ಟು ವಿಶಾಲ
    ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ಶಿಕ್ಷಣ ಸಾಗರದಷ್ಟು ವಿಶಾಲವಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಬಳಿಕ ಮುಂದೇನು ಎಂಬುದೇ ಇಂದಿನ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ದೊಡ್ಡ ಪ್ರಶ್ನೆಯಾಗಿದೆ. ಮಕ್ಕಳ ಪ್ರತಿಭೆಯನ್ನಾಧರಿಸಿ ಸಲಹೆ ಸೂಚನೆ ನೀಡಲು ಎಜುಕೇಷನ್ ಎಕ್ಸ್‌ಪೋ ಸಹಕಾರಿಯಾಗಲಿದೆ ಎಂದರು.

    ಸಾಕಷ್ಟು ಪ್ರಗತಿ
    ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥರಾದ ಎನ್.ಎಂ.ಬಿರಾದಾರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಇಂದು ಸಾಕಷ್ಟು ಪ್ರಗತಿಯಾಗಿದೆ. ಈ ಮೊದಲು ಹೆಚ್ಚು ಅಂಕ ಪಡೆದವರು ವಿಜ್ಞಾನ ವಿಭಾಗ, ಮಧ್ಯಮ ಅಂಕ ಪಡೆದವರು ವಾಣಿಜ್ಯ, ಅದಕ್ಕಿಂತ ಕಡಿಮೆ ಅಂಕ ಪಡೆದರೆ ಕಲಾ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ಮಾರ್ಗದರ್ಶನದ ಕೊರತೆ ಇತ್ತು. ಸದ್ಯ ಮುಂದಿನ ಶಿಕ್ಷಣಕ್ಕೆ ಪಾಲಕರು ಮತ್ತು ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ ಪಡೆದು ಮುನ್ನಡೆಯುತ್ತಿದ್ದಾರೆ ಎಂದರು.

    ಸ್ಫೂರ್ತಿದಾಯಕ
    ಆರ್.ಕೆ.ಎಂ.ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಕರ್ಪೂರಮಠ ಮಾತನಾಡಿ ಎಜುಕೇಷನ್ ಎಕ್ಸ್‌ಪೋ ಸ್ಫೂರ್ತಿದಾಯಕ ಕಾರ್ಯಕ್ರಮ. ಕೆಲವು ವರ್ಷಗಳ ಹಿಂದೆ ಈ ಭಾಗದಲ್ಲಿ ಉತ್ತಮ ತರಬೇತಿ ಕೇಂದ್ರಗಳಿರಲಿಲ್ಲ. ಈಗಿರುವ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳು ಆಗಿದ್ದರೆ ಇಷ್ಟೊತ್ತಿಗೆ ನಾನು ಸಹ ಐಎಎಸ್ ಇಲ್ಲವೆ ಕೆಎಎಸ್ ಪಾಸ್ ಮಾಡಿರುತ್ತಿದ್ದೆ ಎಂದರು. ವಿಜಯಪುರದಲ್ಲಿಂದು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಗುರಿ ಇಟ್ಟು ಸೂಕ್ತ ಮಾಗದರ್ಶನದೊಂದಿಗೆ ಪ್ರಯತ್ನಿಸಿದರೆ ಯಶಸ್ಸು ಖಂಡಿತ ಸಿಗಲಿದೆ ಎಂದರು.

    ವಿಆರ್‌ಎಲ್ ಮೀಡಿಯಾ ಮಾರ್ಗದರ್ಶಕ ರಾಜು ಇಜೇರಿ ಮಾತನಾಡಿದರು. ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್.ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ವರದಿಗಾರ ಪರಶುರಾಮ ಭಾಸಗಿ ನಿರೂಪಿಸಿದರು. ಡಿಡಿಪಿಯು ಎಸ್.ಎನ್.ಬಗಲಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ವಿಜಯವಾಣಿ ಜಾಹೀರಾತು ವಿಭಾಗದ ಜನರಲ್ ಮ್ಯಾನೇಜರ್ ಶಿವಾಜಿ ಭಿಸೆ ಇತರರಿದ್ದರು.

    ಆಕರ್ಷಕ ನೃತ್ಯ ಪ್ರದರ್ಶನ
    ನಗರದ ಸ್ವಯಂಭು ನಾಟ್ಯ ಕಲಾ ಸಂಸ್ಥೆಯ ವಿದ್ಯಾರ್ಥಿಗಳು ಆಕರ್ಷಕ ಭರತನಾಟ್ಯದ ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಣೇಶ ಸ್ತುತಿಗೆ ವಿದ್ಯಾರ್ಥಿನಿಯರು ಹೆಜ್ಜೆ ಹಾಕುತ್ತಿದ್ದಂತೆ ಸಮಾರಂಭದಲ್ಲಿ ಶ್ಲಾಘನೆ ವ್ಯಕ್ತವಾಯಿತು. ಸಂಸ್ಥೆ ಮುಖ್ಯಸ್ಥರು, ಮಾರ್ಗದರ್ಶಕರೂ ಆದ ದಿವ್ಯಾ ಭಿಸೆ ಹಾಗೂ ದೀಕ್ಷಾ ಭಿಸೆ ನಿರ್ದೇಶನದಲ್ಲಿ ವಿದ್ಯಾರ್ಥಿನಿಯರಾದ ಸೃಷ್ಟಿ ನಾಗರಾಳ, ವರ್ಷಿಣಿ ಅಗಸರ ಹಾಗೂ ಸಾನಿಯಾ ಹುನಗುಂದ ಭರತನಾಟ್ಯ ಪ್ರದರ್ಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts