More

    ರೈತರಿಗೆ ತೊಂದರೆ ನೀಡಿದವರ ಮೇಲೆ ಕ್ರಮ

    ವಿಜಯಪುರ: ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ. ಉತ್ಪನ್ನಗಳ ಸಾಗಾಟ ಹಾಗೂ ಮಾರಾಟ ಸಂದರ್ಭ ರೈತರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ ಎಚ್ಚರಿಸಿದರು.
    ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಎಪಿಎಂಸಿ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

    ಕರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ರೈತರಲ್ಲಿ ಆತ್ಮವಿಶ್ವಾಸ ತುಂಬಲು ಕೃಷಿ ಚಟುವಟಿಕೆ, ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸಾಗಣೆಗೆ ಯಾವುದೇ ನಿರ್ಬಂಧವಿಲ್ಲ. ಅಧಿಕಾರಿಗಳು ರೈತರಿಗೆ ಎಲ್ಲ ರೀತಿಯಿಂದ ನೆರವಾಗಬೇಕು. ರೈತರು ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೃಷಿ ಚಟುವಟಕೆ ಕೈಗೊಳ್ಳಬೇಕೆಂದು ಮನವಿ ಮಾಡಿದರು.

    ಕರೊನಾ ನಿಯಂತ್ರಣಕ್ಕೆ ಮೊದಲ ಆದ್ಯತೆ

    ರಾಜ್ಯದಲ್ಲಿ ಕೃಷಿ ಬೆಳೆ, ತೋಟಗಾರಿಕೆ ಬೆಳೆ ಹಾಗೂ ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸದ್ಯಕ್ಕೆ ಕರೊನಾ ನಿಯಂತ್ರಣ ಮತ್ತು ನಿವಾರಣೆಗೆ ಹೆಚ್ಚಿನ ಗಮನ ನೀಡುತ್ತಿದ್ದು, ಹಠಾತ್ತಾಗಿ ಬಂದಿರುವಂತಹ ಈ ಪರಿಸ್ಥಿತಿ ವಿಶ್ವದಾದ್ಯಂತ ತಲ್ಲಣಗೊಳಿಸಿದೆ. ಎಲ್ಲರೂ ಸಂಯಮದಿಂದ ಮತ್ತು ಮುಂಜಾಗ್ರತೆಯಿಂದ ಇರುವಂತೆ ತಿಳಿಸಿದ ಅವರು, ಕ್ರಮೇಣ ಎಲ್ಲ ತೊಂದರೆಗಳು ನಿವಾರಣೆಯಾಗಲಿವೆ ಎಂದು ಹೇಳಿದರು.

    ರೈತರಿಗೆ ತೊಂದರೆಯಾಗಕೂಡದು

    ರೈತ ಸಮುದಾಯಕ್ಕೆ ತೊಂದರೆಯಾದಲ್ಲಿ ಇಡೀ ದೇಶಕ್ಕೆ ತೊಂದರೆ ಇದ್ದಂತೆ. ರೈತ ಸಮುದಾಯಕ್ಕೆ ಅನುಕೂಲವಾಗಲು ಕೃಷಿ ಉತ್ಪನ್ನಗಳ ಸುಗಮ ಮಾರಾಟ ಮತ್ತು ಸಾಗಣೆಗೆ ಅಂತಾರಾಜ್ಯ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಜಿಲ್ಲೆಯಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಲು ಸೂಚಿಸಿದ ಅವರು, ಹಾಪ್‌ಕಾಮ್ಸ್‌ಗಳಲ್ಲಿ ತರಕಾರಿ, ಹಣ್ಣು ಮತ್ತು ಮೊಟ್ಟೆ ಮಾರಾಟಕ್ಕೆ ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಪರಿಸ್ಥಿತಿಯ ದುರ್ಲಾಭ ಪಡೆದು ರೈತರಿಗೆ ತೊಂದರೆ ನೀಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಕೃಷಿಗೆ ಸಂಬಂಧಿಸಿದ ವಿವಿಧ ಸೊಸೈಟಿಗಳ ಚಟುವಟಿಕೆಗೆ ಯಾವುದೇ ತೊಂದರೆ ಇಲ್ಲ ಎಂದು ಸಚಿವ ಪಾಟೀಲ ತಿಳಿಸಿದರು.

    ಶಾಸಕರ ಸಲಹೆಗಳು

    ಶಾಸಕರಾದ ಯಶವಂತರಾಯಗೌಡ ಪಾಟೀಲ ಮಾತನಾಡಿ, ತೋಟಗಾರಿಕೆ ಬೆಳೆಗಳ ಹಾನಿ ಕುರಿತು ಮತ್ತು ಸೂಕ್ತ ಮಾರುಕಟ್ಟೆ ಒದಗಿಸಲು, ಶಾಸಕ ಶಿವಾನಂದ ಪಾಟೀಲ ಅವರು ಕೋಳಿ ಸಾಕಣೆೆದಾರರಿಗೆ ಸೂಕ್ತ ಅರಿವು ಮೂಡಿಸುವ ಮತ್ತು ಕೃಷಿ ಉತ್ಪಾದನಾ ಚಟುವಟಿಕೆಗೆ ನೀಡಲಾಗುವ ಸಾಲಕ್ಕೆ ಸಂಬಂಧಿಸಿದಂತೆ ರಿಯಾಯಿತಿ ಹಣ ರೈತರಿಗೆ ದೊರಕಿಸುವ ಬಗ್ಗೆ ಸಲಹೆ ನೀಡಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜ್ಯದಲ್ಲಿ ಕರೊನಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗುತ್ತಿರುವ ವದಂತಿ ಬಗ್ಗೆ ತೀವ್ರ ನಿಗಾ ವಹಿಸುವ ವ್ಯವಸ್ಥೆ ಜಾರಿಗೊಳಿಸಲು, ತೋಟಗಾರಿಕೆ ಬೆಳೆಗಳಾದ ಒಣದ್ರಾಕ್ಷಿ ಬೆಳೆಗೆ ಇ-ಟ್ರೇಡಿಂಗ್‌ಗೆ ಅವಕಾಶ ಕಲ್ಪಿಸಬೇಕು. ಬಿಳಿಜೋಳ ಖರೀದಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
    ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ದೇವಾನಂದ ಚವಾಣ್, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ್ ಅಗರವಾಲ, ಜಿಪಂ ಸಿಇಒ ಗೋವಿಂದ ರೆಡ್ಡಿ ಮತ್ತಿತರರಿದ್ದರು.

    ಜಿಲ್ಲಾಡಳಿತದ ಕ್ರಮಕ್ಕೆ ಪ್ರಶಂಸೆ

    ಜಿಲ್ಲಾದ್ಯಂತ ಕರೊನಾ ಸೋಂಕಿತ ಒಂದೂ ಪ್ರಕರಣ ಆಗದಂತೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳ ಕುರಿತು ಸಚಿವ ಬಿ.ಸಿ. ಪಾಟೀಲ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬದುಕು, ಜೀವನ ಎರಡು ಅಂಶಗಳು ಮುಖ್ಯವಾಗಿದ್ದು, ಸದ್ಯಕ್ಕೆ ಬಂದೆರೆಗಿರುವ ಮಹಾಮಾರಿ ಕರೊನಾ ನಿವಾರಣೆಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಆತ್ಮಸ್ಥೈರ್ಯದಿಂದ ಕರೊನಾ ಎದುರಿಸಬೇಕಾಗಿದೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದು ಎಂದು ಸಚಿವ ಪಾಟೀಲ ತಿಳಿಸಿದರು.

    ರೈತರಿಗೆ ತೊಂದರೆ ನೀಡಿದವರ ಮೇಲೆ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts