More

    ಮಾಸ್ಕ್ ಧರಿಸದಿದ್ದರೆ ‘ದಂಡಂ ದಶಗುಣಂ’

    ಹೀರಾನಾಯ್ಕ ಟಿ. ವಿಜಯಪುರ

    ಮಾಸ್ಕ್ ಧರಿಸದೆ ಮನೆಯಿಂದ ಹೊರ ಬರುವವರು ಕಡ್ಡಾಯವಾಗಿ ಕಿಸೆಯಲ್ಲಿ ರೊಕ್ಕಾ ಇಟ್ಟುಕೊಂಡು ಬರಬೇಕು..!
    ಹೌದು, ಮನೆಯಿಂದ ಹೊರಬರುವ ಜನರು ಮುಖಕ್ಕೆ ಮಾಸ್ಕ್ ಧರಿಸದೆ ಹೊರ ಬಂದರೆ ದಂಡ ಬೀಳುವುದಂತೂ ಖಂಡಿತ. ಕರೊನಾ ಮಹಾಮಾರಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದರಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೊರ ಬರುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ. ಮಾಸ್ಕ್ ಧರಿಸದೆ ತಿರುಗಾಡುವ ಜನರಿಗೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.

    ನಿಯಮ ಉಲ್ಲಂಸಿದರೆ ದಂಡ

    ಲಾಕ್‌ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಕಿತ್ತಳೆ ವಲಯದಲ್ಲಿರುವ ವಿಜಯಪುರ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಕೆಲವು ಆರ್ಥಿಕ ಚಟುವಟಿಕೆಗೆ ಮತ್ತು ಜನಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ 200 ರೂ. ಮತ್ತು ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ 100 ರೂ. ದಂಡ ವಿಧಿಸಲಾಗುತ್ತಿದೆ.

    1.19 ಲಕ್ಷ ರೂ. ಸಂಗ್ರಹ

    ಮಾಸ್ಕ್ ಧರಿಸದೆ ಸಂಚರಿಸಿದ ಜಿಲ್ಲೆಯ 950 ಜನರಿಗೆ ದಂಡ ವಿಧಿಸಲಾಗಿದೆ. 1,19,300 ರೂ. ಸಂಗ್ರಹವಾಗಿದೆ. ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 243 ಜನರು ನಿಯಮ ಉಲ್ಲಂಸಿದ್ದರೆ, ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯಲ್ಲಿ 310 ಜನರು ದಂಡ ತೆತ್ತಿದ್ದಾರೆ. ಹೀಗೆ ಗ್ರಾಮೀಣ ಭಾಗದ ಜನರು ಮಾಸ್ಕ್ ಇಲ್ಲದೆ ಬೇರೆಡೆ ವಾಹನಗಳಲ್ಲಿ ಪ್ರಯಾಣ ಮಾಡುವುದರಿಂದ ಪ್ರಯಾಣಿಕರ ಕಿಸೆಗೆ ಹೆಚ್ಚು ಹೊರೆ ಆಗಿದೆ. ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ ದಂಡ ವಸೂಲಿ ಇನ್ನು ಆರಂಭಗೊಂಡಿಲ್ಲ. ಉಳಿದಂತೆ ಬಸವನಬಾಗೇವಾಡಿ, ಇಂಡಿ, ತಾಳಿಕೋಟೆ, ಆಲಮೇಲ, ಚಡಚಣ, ದೇವರಹಿಪ್ಪರಗಿ, ಕೊಲ್ಹಾರ, ನಾಲತವಾಡ, ನಿಡಗುಂದಿ, ಮನಗೂಳಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಮನೆಯಿಂದ ಹೊರ ಬಂದವರಿಗೆ ದಂಡ ಪ್ರಯೋಗ ಮಾಡಲಾಗಿದೆ.

    ಅಂತರ ಕಾಯ್ದುಕೊಳ್ಳುವುದು ಸವಾಲು

    ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಆದರೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಂತೆ, ದಿನಸಿ ಅಂಗಡಿ, ಪಡಿತರ ಅಂಗಡಿಗಳಲ್ಲಿ ಗ್ರಾಹಕರು ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ. ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದು, ಕರೊನಾ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ. ಅಂತರ ಕಾಯ್ದುಕೊಂಡು ಆರೋಗ್ಯಕರ ಜೀವನ ನಡೆಸುವಂತೆ ಗ್ರಾಮೀಣ ಮಟ್ಟದಲ್ಲಿ ಅಧಿಕಾರಿಗಳು ಅರಿವು ಮೂಡಿಸಬೇಕಿದೆ. ಈಗಾಗಲೇ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಬೇರೆಡೆಯಿಂದ ಗ್ರಾಮಗಳಿಗೆ ಆಗಮಿಸಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಿದ್ದಾರೆ. ಆದರೆ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಗ್ರಾಮಸ್ಥರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ಹೋರಾಟಗಾರ ಅರವಿಂದ ಕುಲಕರ್ಣಿ.

    ಕೋವಿಡ್-19 ನಿಯಂತ್ರಿಸುವುದಕ್ಕಾಗಿ ರಸ್ತೆಯಲ್ಲಿ ಸಂಚರಿಸುವವರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ. ಇದರ ಬಗ್ಗೆ ಈಗಾಗಲೇ ಸಾಕಷ್ಟು ಪ್ರಚಾರ ಮಾಡಿದ್ದೇವೆ. ಬಹಳಷ್ಟು ಜನರು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಕೆಲವರು ಮಾಸ್ಕ್ ಧರಿಸುತ್ತಿಲ್ಲ. ಅಂತಹವರಿಗೆ ದಂಡ ವಿಧಿಸುತ್ತಿದ್ದೇವೆ.
    ಶ್ರೀಹರ್ಷಾ ಶೆಟ್ಟಿ, ಪಾಲಿಕೆ ಆಯುಕ್ತ

    ಮಾಸ್ಕ್ ಧರಿಸದಿದ್ದರೆ ‘ದಂಡಂ ದಶಗುಣಂ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts