More

    ಬಾಡಿಗೆ ಕಡಿತಗೊಳಿಸಲು ವರ್ತಕರ ಬೇಡಿಕೆ

    ವಿಜಯಪುರ: ಮಹಾಮಾರಿ ಕರೊನಾದಿಂದಾಗಿ ಎರಡೂವರೆ ತಿಂಗಳಿಂದ ವಹಿವಾಟು ಸ್ಥಗಿತಗೊಳಿಸಿದ್ದ ವ್ಯಾಪಾರಿಗಳ ಬದುಕು ಬೀದಿಗೆ ಬಂದಿದ್ದು ಅಂಗಡಿ ಬಾಡಿಗೆ ಕಟ್ಟಲಾಗದ ಸ್ಥಿತಿ ನಿರ್ಮಾಣವಾಗಿದೆ.
    ಸರ್ಕಾರದ ಆದೇಶದಂತೆ ಎಲ್ಲ ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸಲಾಗಿದೆ. ಈ ವೇಳೆ ಅಪಾರ ನಷ್ಟವಾಗಿದ್ದಲ್ಲದೇ ದಿನಸಿ ಕೂಡ ಹಾಳಾಗಿದೆ. ದಾಸ್ತಾನು ಮಾಡಲಾಗಿದ್ದ ಪದಾರ್ಥಗಳು ಹುಳು-ಹುಪ್ಪಟೆಗಳ ಪಾಲಾಗಿದೆ. ಹೀಗಾಗಿ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕೆಂಬುದು ವ್ಯಾಪಾರಸ್ಥರ ಬೇಡಿಕೆ.

    1500 ವಾಣಿಜ್ಯ ಮಳಿಗೆಗಳು

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಎರಡೂವರೆ ತಿಂಗಳ ಬಾಡಿಗೆ ಕಡಿತಗೊಳಿಸಬೇಕು. ಸುಮಾರು 1500 ವಾಣಿಜ್ಯ ಮಳಿಗೆಗಳನ್ನು ಪಾಲಿಕೆಯಿಂದ ಬಾಡಿಗೆ ನೀಡಲಾಗಿದೆ. ಲಾಲಬಹಾದ್ದೂರ ಶಾಸ್ತ್ರೀ ಮಾರುಕಟ್ಟೆ, ಜನತಾ ಬಜಾರ, ಕೆ.ಸಿ. ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ ಹತ್ತಿರ, ಅತಾವುಲ್ಲಾಖಾನ್ ಚೌಕ್, ಕೆಎಚ್‌ಬಿ ಕಾಲನಿ ಸೇರಿದಂತೆ ವಿವಿಧೆಡೆ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಅಳತೆಯನುಸಾರವಾಗಿ ವಾರ್ಷಿಕ ಲೆಕ್ಕಾಚಾರದಡಿ ಬಾಡಿಗೆ ಪಡೆಯಲಾಗುತ್ತದೆ. ವರ್ಷಕ್ಕೆ ಸುಮಾರು 1 ಕೋಟಿ ರೂ.ಬಾಡಿಗೆ ಸಂದಾಯವಾಗುತ್ತದೆ.

    ಬಾಡಿಗೆ ಕಡಿತಗೊಳಿಸಿ

    ಮಾರ್ಚ್, ಏಪ್ರೀಲ್‌ನಲ್ಲಿ ಮಳಿಗೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಮೇ ತಿಂಗಳಾಂತ್ಯಕ್ಕೆ ಅಂಗಡಿಗಳನ್ನು ತೆರೆಯಲಾಗಿದೆಯಾದರೂ ಇನ್ನೂ ಸ್ಪಷ್ಟ ನಿರ್ದೇಶನಗಳಿಲ್ಲ. ಎಲ್‌ಬಿಎಸ್ ಮಾರುಕಟ್ಟೆಯಲ್ಲಿ 450 ಮಳಿಗೆಗಳಿದ್ದು ಸದ್ಯಕ್ಕೆ ‘ಸರಿ-ಬೆಸ’ ಪದ್ಧತಿಯಡಿ ವಹಿವಾಟು ಆರಂಭಿಸಲಾಗಿದೆ. ಆದರೆ, ವ್ಯಾಪಾರ ಮಾತ್ರ ಅಷ್ಟಕ್ಕಷ್ಟೆ. ಹೀಗಾಗಿ ವ್ಯಾಪಾರಸ್ಥರು ತೀರ ಸಂಕಷ್ಟದಲ್ಲಿದ್ದಾರೆ. ಕಾರ್ಮಿಕರ ವೇತನ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಹಲವು ತಾಪತ್ರಗಳು ಎದುರಾಗಿವೆ. ಆದ್ದರಿಂದ ಪಾಲಿಕೆಯ ಎರಡೂವರೆ ತಿಂಗಳ ಬಾಡಿಕೆ ಮತ್ತು ವಿದ್ಯುತ್ ಬಿಲ್ ಕಡಿಗೊಳಿಸಬೇಕು. ಜತೆಗೆ ಸಂಕಷ್ಟದಲ್ಲಿರುವ ವ್ಯಾಪಾರಸ್ಥರಿಗೆ ನೆರವಾಗಲು ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕೆಂಬುದು ವ್ಯಾಪಾರಸ್ಥರ ಬೇಡಿಕೆಯಾಗಿದೆ.

    ಪ್ರಮುಖ ಹಬ್ಬಗಳಾದ ಯುಗಾದಿ ಮತ್ತು ರಂಜಾನ್ ಸಂದರ್ಭದಲ್ಲೇ ವ್ಯಾಪಾರ ಸ್ಥಗಿತಗೊಂಡಿತ್ತು. ಹೀಗಾಗಿ ವ್ಯಾಪಾರಸ್ಥರು ತೀವ್ರ ಸಂಕಷ್ಟದಲ್ಲಿದ್ದಾರೆ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಎರಡೂವರೆ ತಿಂಗಳ ಬಾಡಿಗೆ ಹಾಗೂ ವಿದ್ಯುತ್ ಬಿಲ್ ಕಡಿತಗೊಳಿಸಬೇಕು. ಸಂಪೂರ್ಣ ವಹಿವಾಟಿಗೆ ಅನುಕೂಲ ಮಾಡಿಕೊಡಬೇಕು.
    ವೈಜನಾಥ ಕರ್ಪೂರಮಠ, ಅಧ್ಯಕ್ಷ ಶ್ರೀ ಲಾಲಬಹಾದ್ದೂರ ಶಾಸ್ತ್ರೀ ಮಾರುಕಟ್ಟೆ ವ್ಯಾಪಾರಸ್ಥರ ಸಂಕೀರ್ಣ ಸಮಿತಿ

    ವಾಣಿಜ್ಯ ಮಳಿಗೆಗಳ ಬಾಡಿಗೆ ಕಡಿತಗೊಳಿಸುವ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳೇ ಆ ಬಗ್ಗೆ ನಿರ್ಣಯ ಕೈಗೊಳ್ಳಬೇಕು.
    ಶ್ರೀಹರ್ಷಾ ಶೆಟ್ಟಿ, ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts