More

    ರಾಜ್ಯಮಟ್ಟದ ಖಾದಿ ಉತ್ಸವ ಸಂಪನ್ನ

    ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಕಳೆದ 15 ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಖಾದಿ ಉತ್ಸವ ಸೋಮವಾರ ಸಂಪನ್ನಗೊಂಡಿದ್ದು 2.34 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಸುವ ಮೂಲಕ ದಾಖಲೆ ಬರೆದಿದೆ.
    ಕಳೆದ ವರ್ಷ ಇದೇ ಸಂದರ್ಭ ನಡೆದ ಖಾದಿ ಉತ್ಸವದಲ್ಲಿ 2 ಕೋಟಿ ರೂ. ವಹಿವಾಟು ನಡೆದಿತ್ತು. ಪ್ರಸಕ್ತ ಸಾಲಿನ ಉತ್ಸವದ ಆರಂಭದ 4 ದಿನದಲ್ಲೇ 50 ಲಕ್ಷ ರೂ.ಗಳಿಗೂ ಅಧಿಕ ವಹಿವಾಟು ನಡೆದಿತ್ತು. ಮುಕ್ತಾಯದ ಹೊತ್ತಿಗೆ 2.34 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆದಿದೆ. ನಿಖರ ಮಾಹಿತಿ ಕಲೆ ಹಾಕುತ್ತಿರುವುದಾಗಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳ 84 ಮಳಿಗೆಗಳು ಭಾಗವಹಿಸಿದ್ದು ಈ ಬಾರಿ ಹಸನ್ಮುಖರಾಗಿ ಮರಳುತ್ತಿದ್ದಾರೆ.
    ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಗೋಪಾಲ ನಾಯಕ ಅವರು, ಖಾದಿ ಈ ದೇಶದ ಸ್ವಾಭಿಮಾನದ ಸಂಕೇತವಾಗಿದ್ದು, ಭಾರತದ ಗುಡಿ ಕೈಗಾರಿಕೆಗಳು ಇಂದಿಗೂ ಖಾದಿಯನ್ನೇ ನಂಬಿ ಜೀವನ ಸಾಗಿಸುತ್ತಿವೆ. ದೇಶದ ಸ್ವಾತಂತ್ರೃದ ಯಶಸ್ಸಿನಲ್ಲಿ ಖಾದಿಯ ಪಾತ್ರ ಬಹುಮುಖ್ಯವಾಗಿತ್ತು ಎಂದರು.
    ಸಮಾಜ ಕಲ್ಯಾಣ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಖಾದಿ ಕೇವಲ ಬಟ್ಟೆಯಲ್ಲ ಅದು ಸ್ವಾಭಿಮಾನದ ಸಂಕೇತ. ಖಾದಿ ಪ್ರೀತಿಯ, ಒಗ್ಗಟ್ಟಿನ ಪ್ರತೀಕವಾಗಿದೆ. ದೇಶದ ಜನರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೂರ ಸರಿದು ಮತ್ತದೇ ದೇಶದ ಸಂಸ್ಕೃತಿಯತ್ತ ವಾಲುತ್ತಿದ್ದಾರೆ ಎಂದರು.
    ಎಂಎಕೆ ಕಾಲೇಜಿನ ಪ್ರಾಚಾರ್ಯ ಸಂಗಮೇಶ ಮೇತ್ರಿ ಮಾತನಾಡಿ, ಖಾದಿ ಗ್ರಾಮೋದ್ಯೋಗ ದೇಶದ ಭದ್ರ ಬುನಾದಿಯಾಗಿದ್ದು, ಖಾದಿಯನ್ನು ಉತ್ತೇಜನ ಮಾಡಿದಾಗ ಮಾತ್ರ ದೇಶವು ಉತ್ತುಂಗದ ಬೆಳವಣಿಗೆ ಸಾಧಿಸಲು ಸಾಧ್ಯ ಮತ್ತು ದೇಶದ ನಿರುದ್ಯೋಗ ದೂರಮಾಡಲು ಸಾಧ್ಯ ಎಂದು ಅಭಿಪ್ರಾಯಿಸಿದರು.
    ಖಾದಿ ಆಯೋಗದ ವಿಭಾಗಿಯ ನಿರ್ದೇಶಕ ಎಸ್.ಎಸ್. ತಾಂಬೆ, ಖಾದಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಾವಿತ್ರಮ್ಮ ದಳವಾಯಿ. ಸಿದ್ಧಾರ್ಥ, ರಾಜಶೇಖರ ದೈವಾಡಿ, ಎಸ್.ಎಲ್. ಹಿರೇಮಠ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts