More

    ಕರವೇ ಹಿನ್ನೆಲೆ ಅರಿಯಲಿ

    ವಿಜಯಪುರ: ಬೊಗಳುವ ಪ್ರಾಣಿ ಹುಲಿಯಲ್ಲ, ಹುಲಿ ಘರ್ಜಿಸುತ್ತದೆ, ಶಾಸಕ ಯತ್ನಾಳ ಘರ್ಜಿಸುವುದಿಲ್ಲ, ಬೊಗಳುವ ಪ್ರಾಣಿಯನ್ನು ಬೇರೆ ಹೆಸರಿನಿಂದ ಕರೆಯುತ್ತಾರೆ…ಏನೇ ಇರಲಿ ಈ ಕಾಡು ಪ್ರಾಣಿಗಳನ್ನು ಕಾಡಿಗೆ ಅಟ್ಟುವ ದಿನ ದೂರವಿಲ್ಲವೆಂದು ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾರ್ಮಿಕವಾಗಿ ಶಾಸಕ ಯತ್ನಾಳರಿಗೆ ಟಾಂಗ್ ನೀಡಿದ್ದಾರೆ.
    ಅಧಿಕಾರಕ್ಕಾಗಿ ಸ್ವಪಕ್ಷಿಯರ ವಿರುದ್ಧವೇ ಆಪಾದಿಸುವ, ಜಾತಿ ಧರ್ಮಗಳ ಓಲೈಕೆಗಾಗಿ ದಿನಕ್ಕೊಂದು ಬಣ್ಣ ಬದಲಾಯಿಸುವ, ಧರ್ಮಗಳ ಮಧ್ಯೆ ಜಗಳ ಹಚ್ಚುವುದೇ ಶಾಸಕ ಯತ್ನಾಳರ ಕಾಯಕ. ಬೌದ್ಧ ವಿಹಾರಕ್ಕೆ ಹೋದರೆ ನೀಲಿ ಬಣ್ಣದ ಜಾಕೆಟ್ ಧರಿಸೋದು, ಮುಸ್ಲಿಮರ ಸಮಾರಂಭಕ್ಕೆ ಟೋಪಿ ಧರಿಸಿ ಹೋಗುವುದು, ಹಿಂದುಗಳ ಕಾರ್ಯಕ್ರಮ ಬಂದರೆ ಕೇಸರಿ ಜಾಕೆಟ್ ಧರಿಸಿ ನಾಟಕ ಮಾಡುವ ಯತ್ನಾಳರು ಇದೀಗ ಮರಾಠರ ಓಲೈಕೆಗೆ ಮುಂದಾಗಿದ್ದಾರೆ. ಇವರಿಗೆ ಮರಾಠರು ಮಾತ್ರ ಮತ ಹಾಕಿದ್ದಾರಾ? ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

    ಬಂದ್ ಯಶಸ್ವಿ

    ಡಿ. 5 ರಂದು ಕನ್ನಡ ಪರ ಸಂಘಟನೆಗಳು ನೀಡಿರುವ ರಾಜ್ಯ ಬಂದ್ ಕರೆ ಹಿನ್ನೆಲೆ ಪೂರ್ವಭಾವಿ ಸಭೆ ನಡೆಸಿದ ಯತ್ನಾಳ ಬಂದ್‌ಗೆ ಎಷ್ಟು ಹೆದರಿದ್ದಾರೆಂಬುದು ಗೊತ್ತಾಗುತ್ತದೆ. ಕರವೇ ಹೋರಾಟದಿಂದ ಶಾಸಕ ಯತ್ನಾಳರಿಗೆ ಭಯ ಶುರುವಾಗಿದೆ. ಈ ಹಿಂದೆ ಅನೇಕ ಬಾರಿ ಕರವೇ ಬಂದ್‌ಗೆ ಕರೆ ಕೊಟ್ಟಿದೆ. ಆಗೆಂದೂ ಈ ಮಟ್ಟಿಗೆ ಬಂದ್ ವಿಫಲಗೊಳಿಸಲು ಪೂರ್ವಭಾವಿ ಸಭೆ ನಡೆಸಿರಲಿಲ್ಲ. ಇದೀಗ ಶಾಸಕ ಯತ್ನಾಳರು ವರ್ತಕರು, ಸಂಘ ಸಂಸ್ಥೆಗಳ ಸಭೆ ಕರೆದು ಬಂದ್ ಯಶಸ್ವಿಗೊಳಿಸದಂತೆ ಬೆದರಿಕೆ ಹಾಕುತ್ತಿರುವುದು ಗಮನಿಸಿದರೆ ಕರವೇ ಹೋರಾಟಕ್ಕೆ ಯತ್ನಾಳ ಎಷ್ಟು ಹೆದರಿದ್ದಾರೆಂಬುದು ಗೋಚರಿಸುತ್ತದೆ ಎಂದರು.

    ಪೊಲೀಸ್ ಇಲಾಖೆ ದುರ್ಬಳಕೆ

    ಬಂದ್ ವಿಫಲಗೊಳಿಸಲು ಯತ್ನಾಳರು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಂದ್‌ಗೆ ಅವಕಾಶ ನೀಡದಂತೆ ಪೊಲೀಸರ ಮೂಲಕ ಬೆದರಿಕೆಯೊಡ್ಡುವ ತಂತ್ರಗಾರಿಕೆ ರೂಪಿಸಿದ್ದಾರೆ. ಅನೇಕ ವ್ಯಾಪಾರಸ್ಥರು ಮತ್ತು ಸಂಘ,ಸಂಸ್ಥೆಗಳು ಈಗಾಗಲೇ ಬಂದ್‌ಗೆ ಬೆಂಬಲ ಸೂಚಿಸಿವೆ. ಆದರೆ, ಯತ್ನಾಳರು ವ್ಯಾಪಾರಸ್ಥರಿಗೆ ಬೆದರಿಕೆ ಹಾಕುವ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ವ್ಯಾಪಾರಸ್ಥರು ಕರವೇ ಮುಖಂಡರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಆದಾಗ್ಯೂ ಕನ್ನಡಿಗರಾಗಿ ಬಂದ್ ಯಶಸ್ವಿಗೊಳಿಸುವುದಾಗಿ ತಿಳಿಸಿದ್ದಾರೆಂದು ಮುಲ್ಲಾ ತಿಳಿಸಿದರು.

    ತಾವೇಕೆ ಪ್ರತಿಭಟನೆ ಮಾಡಬಾರದು?

    ಕರವೇಯನ್ನು ಕಳ್ಳರ ವೇದಿಕೆ ಎಂದಿರುವ ಶಾಸಕ ಯತ್ನಾಳ ಮೊದಲು ಸಂಘಟನೆ ಹಿನ್ನೆಲೆ ಅರಿತುಕೊಳ್ಳಬೇಕು. ಆಪಾದನೆಗೆ ಮುನ್ನ ತಾವೆಷ್ಟು ಸಾಚಾ ಎಂಬುದು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಬೇಕು. ಕಲಬುರಗಿಯಲ್ಲಿರುವ ಉರ್ದು ಫಲಕ ತೆಗೆಯುವ ಬಗ್ಗೆ ಹೇಳಿಕೆ ನೀಡುವ ಯತ್ನಾಳರೂ ಒಬ್ಬ ಕನ್ನಡಿಗರಲ್ಲವೇ? ಅವರೂ ಪ್ರತಿಭಟನೆ ಮಾಡಬಾರದೇಕೆ? ಎಂದು ಮುಲ್ಲಾ ಪ್ರಶ್ನಿಸಿದರು.
    ಮುಖಂಡ ಪ್ರಕಾಶ ಕುಂಬಾರ ಮಾತನಾಡಿ, ಎಂಇಎಸ್ ಬಗ್ಗು ಬಡಿಯುವುದೇ ನಮ್ಮ ಉದ್ದೇಶ. ಮರಾಠ ಸಮುದಾಯಕ್ಕೆ ನಮ್ಮ ವಿರೋಧವಿಲ್ಲ. ಮರಾಠ ಸಮುದಾಯದ ಏಳಿಗೆಗೆ ಅನುದಾನ ಕೊಡಲು ನಮ್ಮದೂ ಮನವಿ ಇದೆ. ಆದರೆ ಚುನಾವಣೆ ಮುಂದಿಟ್ಟುಕೊಂಡು ಮರಾಠರ ಓಲೈಕೆಗೆ ಮುಂದಾಗಿದ್ದರಿಂದ ಬಂದ್ ಮಾಡುತ್ತಿದ್ದು, ಬಂದ್ ಯಶಸ್ವಿಯಾಗಲಿದೆ ಎಂದರು.
    ಮುಖಂಡರಾದ ಅಶೋಕ ಹಾರಿವಾಳ, ಫಯಾಜ್ ಕಲಾದಗಿ, ಮಹಾದೇವ ರಾವಜಿ, ದಸ್ತಗೀರ ಸಾಲೋಟಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts