More

    ದರ್ಗಾ ಜೈಲ್ ಹಿಂಭಾಗ ವೈಕುಂಠಧಾಮ ನಿರ್ಮಾಣ

    ವಿಜಯಪುರ: ತ್ರಿಮತಸ್ಥ ವಿಪ್ರರ ಅಪರ ಕಾರ್ಯಗಳನ್ನು ಮಾಡುವ ಅನುಕೂಲಕ್ಕಾಗಿ ಇಲ್ಲಿಯ ಹನುಮಗಿರಿಯ ಆಧ್ಯಾತ್ಮ ವಿದ್ಯಾಶ್ರಮದ ಗೋಪಾಲ ವಿದ್ಯಾ ಪ್ರತಿಷ್ಠಾನ ವೈಕುಂಠಧಾಮ ನಿರ್ಮಾಣಕ್ಕೆ ಮುಂದಾಗಿದೆ ಎಂದು ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿ ಪಂಡಿತ ಮಧ್ವಾಚಾರ್ಯ ಮೊಖಾಶಿ ತಿಳಿಸಿದರು.
    ವೈಕುಂಠ ಧಾಮಕ್ಕಾಗಿ ಈಗಾಗಲೇ ನಗರ ಹೊರವಲಯದ ದರ್ಗಾ ಜೈಲ್ ಹಿಂಭಾಗದಲ್ಲಿ 7800 ಚದುರ ಅಡಿ ಸ್ಥಳ ಆಯ್ಕೆ ಮಾಡಲಾಗಿದೆ. ಕಟ್ಟಡದ ಕೆಲಸ ಪ್ರಾರಂಭ ಮಾಡಿದ್ದು, ಅದಕ್ಕಾಗಿ 40 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.

    ಒಬ್ಬ ವ್ಯಕ್ತಿ ಮರಣಿಸಿದಾಗ ಅವರಿಗೆ ಸದ್ಗತಿಯಾಗಬೇಕು ಎಂದು ಪರಿವಾರದ ಪ್ರತಿಯೊಬ್ಬರೂ ಬಯಸುತ್ತಾರೆ. ಅದಕ್ಕಾಗಿ ಶುದ್ಧ ಸ್ಥಳ ಬೇಕು. ಸದಾಚಾರಿಯಾದ ಪುರೋಹಿತರು ಮಾಡಿಸಬೇಕು. ಶಾಸ್ತ್ರ, ಸಂಪ್ರದಾಯಗಳನ್ನು ತಿಳಿದ ವಿದ್ವಾಂಸರು ಮಾರ್ಗದರ್ಶಕ ರಾಗಬೇಕು. ಇದೆಲ್ಲವೂ ಒಂದು ಧಾರ್ಮಿಕ ಸಂಸ್ಥೆಯಿಂದ ನಡೆದರೆ ಮಾತ್ರ ಪರಿಪೂರ್ಣವಾಗುತ್ತದೆ. ಈ ಎಲ್ಲ ವಿಚಾರಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಉತ್ತರಾದಿಮಠಾಧೀಶ ಶ್ರೀ ಸತ್ಯಾತ್ಮತೀರ್ಥರ ಅನುಗ್ರಹ ಹಾಗೂ ಅನುಜ್ಞೆಯ ಪ್ರಕಾರ ವೈಕುಂಠಧಾಮವನ್ನು ನಿರ್ಮಿಸಲು ತೀರ್ಮಾನ ಮಾಡಿದೆ ಎಂದು ಹೇಳಿದರು. ಅಪರ ಕರ್ಮ ಮಾಡಲು ವಿಶಾಲವಾದ ಸ್ಥಳ, ಸುಸಜ್ಜಿತವಾದ ಕೋಣೆಗಳು, ಊಟದ ಸಭಾಂಗಣ, ಸ್ನಾನಗೃಹಗಳು, ಧರ್ಮೋದಕ ಸ್ಥಾನ ಇವೆಲ್ಲವುಗಳನ್ನು ವೈಕುಂಠ ಧಾಮ ಹೊಂದಲಿದ್ದು, ದಿನಕರ್ಮಗಳನ್ನು (ಮೈಲಿಗೆಯಲ್ಲಿರುವ ಕರ್ಮ) ಮಾಡಲು ಮಡಿಯ ಕರ್ಮಗಳಿಗಾಗಿ ಪ್ರತ್ಯೇಕ ಭವನದ ವ್ಯವಸ್ಥೆ ಮಾಡಲಾಗುವುದು ಎಂದರು.
    ನಿಯೋಜಿತ ಸ್ಥಳದಲ್ಲಿ ಇನ್ನೂ ಮೂರು ತಿಂಗಳಲ್ಲಿ ವೈಕುಂಠ ಧಾಮ ಕಟ್ಟಡದ ಕಾಮಗಾರಿ ಪೂರ್ಣಗೊಂಡು, ಸಕಲ ಸಿದ್ಧತೆಯೊಂದಿಗೆ ಸೇವೆಗೆ ಸಮರ್ಪಣೆಯಾಗಲಿದೆ ಎಂದು ವಿವರಿಸಿದರು.

    ವೈಕುಂಠಧಾಮದಲ್ಲಿ ಅಸ್ಥಿಗಳನ್ನು ಹಾಗೂ ಶಿಲೆಯನ್ನು ಸಂರಕ್ಷಿಸಿ ಇಡಲು ಲಾಕರ್ ವ್ಯವಸ್ಥೆ ಮಾಡಲಾಗುವುದು. ಮೃತರ ಸಂಬಂಧಿಕರು ಅಪೇಕ್ಷಿಸಿದಲ್ಲಿ ಪುರೋಹಿತ ವ್ಯವಸ್ಥೆಯನ್ನೂ ಈ ಸಂಸ್ಥೆಯಿಂದಲೇ ಮಾಡಿ ಕೊಡಲಾಗುವುದು. ಆದರೆ, ವಾಹನವನ್ನು ತರಿಸಿದ ಮಾತ್ರಕ್ಕೆ ಉಳಿದ ಕರ್ಮಗಳನ್ನು ನಾವೇ ಮಾಡಿಸಬೇಕು ಎಂಬ ನಿರ್ಭಂದ ಸರ್ವಥಾ ಇರುವುದಿಲ್ಲ. ತಮ್ಮ ಯೋಗ್ಯ ಪುರೋಹಿತರನ್ನು ಕರೆತಂದು ನಮ್ಮ ವೈಕುಂಠಧಾಮದಲ್ಲಿ ಕರ್ಮಗಳನ್ನು ಮಾಡಿಸಿಕೊಳ್ಳಬಹುದು ಎಂದರು.
    ವೈಕುಂಠಧಾಮದಲ್ಲಿ ದಿನಕರ್ಮಗಳನ್ನು ಮಾಡಲು ಬರುವ ಮೃತರ ಸಂಬಂಧಿಕರಿಗೆ ಇರುವುದಕ್ಕಾಗಿ ಸುಸಜ್ಜಿತವಾದ ಕೋಣೆಗಳ ವ್ಯವಸ್ಥೆ ಮಾಡಲಾಗುವುದು. ಮಕ್ಕಳು ಇಲ್ಲದ ಅಥವಾ ವಿದೇಶದಲ್ಲಿ ಮಕ್ಕಳಿದ್ದ ಒಬ್ಬ ವ್ಯಕ್ತಿ ತಾನು ಮೃತನಾದಾಗ ಮಾಡಬೇಕಾದ ಅಪರಕರ್ಮಕ್ಕಾಗಿ ಶ್ರಾದ್ಧಕ್ಕಾಗಿ ಸಂಸ್ಥೆಯ ಹೆಸರಿನಲ್ಲಿ ಹಣವನ್ನು ಠೇವಣಿ ಇಡಬಹುದು. ಸಂಬಂಧಿಕರು ಮರಣದ ವಾರ್ತೆಯನ್ನು ತಿಳಿಸಿದಾಗ ಅಂತ್ಯೇಷ್ಟಿಯನ್ನು ಹಾಗೂ ದಿನಕರ್ಮ ಹಾಗೂ ಶ್ರಾದ್ಧಗಳನ್ನು ಪುರೋಹಿತರ ಮುಖಾಂತರ ಮಾಡಿಸಲಾಗುವುದು.ಇದಕ್ಕೆ ಪೂರ್ವಭಾವಿಯಾಗಿ ವೈಕುಂಠ (ಮುಕ್ತಿ) ವಾಹನವನ್ನು ದೇಣಿಗೆಯಾಗಿ ಪಡೆಯಲಾಗಿದ್ದು, ಜಿಲ್ಲೆಯ ಪ್ರಥಮ ದರ್ಜೆಯ ಗುತ್ತಿಗೆದಾರ ಎನ್.ವಿ. ಕುಲಕರ್ಣಿ(ಯರಗಲ್) ಹಾಗೂ ಅವರ ಸಹೋದರರು ತಮ್ಮ ದಿವಂಗತ ವಿಠ್ಠಲರಾವ್ ನಾರಾಯಣರಾವ್ ಕುಲಕರ್ಣಿ (ಯರಗಲ್) ಇವರ ಸ್ಮರಣಾರ್ಥ ಹೊಸದಾದ ಮಾರುತಿ ಇಕೋ ವಾಹನವನ್ನು ದಾನವಾಗಿ ಕೊಟ್ಟಿದ್ದಾರೆ’ ಎಂದು ಮೊಖಾಶಿ ತಿಳಿಸಿದರು.

    ಸಮಸ್ತ ಬ್ರಾಹ್ಮಣ ಸಮಾಜಕ್ಕಾಗಿ ಈ ವೈಕುಂಠ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಈ ವಾಹನಕ್ಕೆ ಅತಿ ಕಡಿಮೆ ನಿರ್ವಹಣಾ ಶುಲ್ಕವನ್ನು ಇಟ್ಟಿದ್ದು, ಬಡವರಿಗೆ ಉಚಿತವಾಗಿ ಕೊಡುವ ನಿರ್ಧಾರ ಮಾಡಲಾಗಿದೆ. ಈ ವಾಹನದ ಜತೆಗೆ ಅಂತ್ಯಕರ್ಮಕ್ಕೆ ಬೇಕಾಗುವ ಸಮಗ್ರ ಸಾಮಗ್ರಿಗಳನ್ನು ಕಳಿಸುವ ವ್ಯವಸ್ಥೆ ಮಾಡಲಾಗುವುದು. ಈ ವಾಹನ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
    ವೈಕುಂಠ ವಾಹನದ ಸೇವೆ ಪಡೆಯಲು ವಿಜಯ ಜೋಶಿ (ಮೊ. 9972692061) ಅಥವಾ ಆದಿತ್ಯ ಕುಲಕರ್ಣಿ (ಮೊ. 7019278583) ಅಥವಾ ದತ್ತಾತ್ರಯ ಜೋಶಿ (ಮೊ. 9986336577) ಇವರನ್ನು ಸಂಪರ್ಕಿಸಬಹುದು ಎಂದರು.
    ಹನುಮಗಿರಿಯ ಆಧ್ಯಾತ್ಮ ವಿದ್ಯಾಶ್ರಮದ ಮುಖ್ಯಸ್ಥ ಪಂಡಿತ ಸಂಜೀವಾಚಾರ್ಯ ಮದಭಾವಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಆನಂದ ಜೋಶಿ, ವಾಹನ ದಾನಿ ಎನ್.ವಿ. ಕುಲಕರ್ಣಿ (ಯರಗಲ್), ಅಜಿತ ಕುಲಕರ್ಣಿ, ಡಾ. ಕಿರಣ ಚುಳಕಿ, ಪಿ.ಬಿ. ಹಂಗರಗಿ, ಅರುಣ ಸೋಲಾಪುರಕರ, ನ್ಯಾಯವಾದಿ ಮಹಿಪತಿ ಖಾಸನೀಸ್, ಮದನ ಭಾಗವತ, ಶ್ರೀನಿವಾಸ ಬೆಟಗೇರಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts