More

    ಅಂದಾಜು ಶೇ.69.75 ರಷ್ಟು ಮತದಾನ

    ವಿಜಯಪುರ: ಗ್ರಾಪಂ ಎರಡನೇ ಹಂತದ ಚುನಾವಣೆ ಅಂದಾಜು ಶೇ.69.75 ರಷ್ಟು ಮತದಾನದೊಂದಿಗೆ ಸಂಪನ್ನಗೊಂಡಿದ್ದು, ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

    ಡಿ. 22ರಂದು 111 ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆದಿತ್ತು. ಅದೇ ರೀತಿ ಭಾನುವಾರ 4 ತಾಲೂಕುಗಳ 88 ಗ್ರಾಪಂಗಳಿಗೆ ಶಾಂತಿಯುತ ಮತದಾನ ನಡೆಯಿತು. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಜಿಲ್ಲಾಡಳಿತ ಅಚ್ಚುಕಟ್ಟಾಗಿ ಚುನಾವಣೆ ಪ್ರಕ್ರಿಯೆ ನಿಭಾಯಿಸಿತು.

    ಇಂಡಿ, ಚಡಚಣ, ದೇವರಹಿಪ್ಪರಗಿ, ಸಿಂದಗಿ ತಾಲೂಕಿನ 784 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಹಳ್ಳಿಫೈಟ್‌ನ ಅಂತಿಮ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡು ಹಕ್ಕು ಚಲಾಯಿಸಿದರು. ಸುಗ್ಗಿ ನಡುವೆಯೂ ಕೃಷಿಕರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 7 ರಿಂದಲೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿ ಎಂದಿನಂತೆ ದೈನಂದಿನ ಕಾರ್ಯದಲ್ಲಿ ತೊಡಗಿಸಿಕೊಂಡರು. ಇನ್ನುಳಿದಂತೆ ಕೆಲವರು ಕೃಷಿ ಕಾರ್ಯ ಮುಗಿಸಿ ಸಂಜೆ ಮತದಾನಕ್ಕೆ ಆಗಮಿಸಿದ್ದರಿಂದ ಮತದಾನ ಪ್ರಮಾಣ ಸಂಜೆ ಹೊತ್ತಿಗೆ ಭಾರಿ ಏರಿಕೆ ಕಂಡಿತು.

    ಬೆಳಗ್ಗೆ 9ಕ್ಕೆ ಶೇ.14.48 ರಷ್ಟು ಮತದಾನ ಆಗಿದ್ದರೆ, ಬೆಳಗ್ಗೆ 11ಕ್ಕೆ ಶೇ.21.19 ರಷ್ಟಾಗಿತ್ತು. ಮಹಿಳೆಯರು ಮನೆಗೆಲಸ ಮುಗಿಸಿ ಬೆಳಗ್ಗೆ 10ರ ನಂತರ ಮತದಾನಕ್ಕೆ ಮುಂದಾದರು. ಮಧ್ಯಾಹ್ನ 1ಕ್ಕೆ ಶೇ. 34.52ರಷ್ಟು , ಮಧ್ಯಾಹ್ನ 5ರ ವೇಳೆಗೆ ಶೇ.58.33ರಷ್ಟು ಮತದಾನ ಆಗಿತ್ತು. ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು. ಹಿರೇಮಸಳಿ, ಮುಳಸಾವಳಗಿ, ತಾಂಬಾ ಸೇರಿದಂತೆ ನಾನಾ ಗ್ರಾಮಗಳಲ್ಲಿ ಮಹಿಳೆಯರು ಸಾಲು ನಿಂತು ಉತ್ಸಾಹದಿಂದ ಮತ ಹಾಕಿದರು.

    ಥರ್ಮಲ್ ಸ್ಕ್ಯಾನಿಂಗ್
    ಕರೊನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರರಿಗೆ ಥರ್ಮಲ್ ಸ್ಕಾೃನ್ ಮಾಡಿ ಮತಗಟ್ಟೆಯ ಒಳಗೆ ಪ್ರವೇಶ ನೀಡಲಾಯಿತು. ಸ್ಯಾನಿಟೈಜರ್ ಕೂಡ ಹಾಕಲಾಯಿತು. ವೃದ್ಧರು, ಅಂಗವಿಕಲರಿಗೆ ವೀಲ್‌ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಮತದಾರರಿಗಾಗಿ ಸ್ಯಾನಿಟೈಜರ್ ವ್ಯವಸ್ಥೆ ಮಾಡಿ ಹಾಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತದಾನ ಕೇಂದ್ರದ ಬಳಿ ಇಡೀ ದಿನ ನಿಂತು ಆಶೀರ್ವದಿಸಬೇಕೆಂದು ಕೈ ಮುಗಿಯುವ ದೃಶ್ಯ ಕಂಡುಬಂತು. ಮತದಾರರನ್ನು ಕರೆತರಲು ಅಭ್ಯರ್ಥಿಗಳು ವಾಹನ ವ್ಯವಸ್ಥೆ ಕಲ್ಪಿಸಿದ್ದಲ್ಲದೆ, ಅಲ್ಲಲ್ಲಿ ಚಹಾ, ಉಪಾಹಾರ, ಊಟದ ವ್ಯವಸ್ಥೆ ಮಾಡಿಸಿದ್ದರು.

    ಮತಗಟ್ಟೆ ಬಳಿ ಗೊಂದಲ
    ಕೆಲ ಮತಗಟ್ಟೆಗಳಲ್ಲಿ ಚುನಾವಣೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ನಡುವೆ ಬಿಸಿಬಿಸಿ ಚರ್ಚೆ ನಡೆದಿದ್ದು ಬಿಟ್ಟರೆ ಯಾವುದೇ ಅಹಿತಕರ ಘಟನೆ ಸಂಭವಿಸದ ಬಗ್ಗೆ ವರದಿಯಾಗಿಲ್ಲ.

    ಸಿಂದಗಿ ತಾಲೂಕಿನ ತಾರಾಪುರದಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಮತದಾರರಿಗೆ ಕೆಲ ದಾಖಲೆ ಸಿಗದ ಸಮಸ್ಯೆಯಾಗಿತ್ತು. ದಾಖಲಾತಿ ಇಲ್ಲದೆ ಮತದಾನಕ್ಕೆ ಅವಕಾಶ ನೀಡದ ಕಾರಣ ಅಧಿಕಾರಿಗಳು ಹಾಗೂ ಮತದಾರರ ಮಧ್ಯೆ ಮಾತಿನ ಚಕಮುಕಿ ನಡೆಯಿತು. ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಪತ್ರಕರ್ತನೆಂದು ಹೇಳಿಕೊಂಡು ಯುವಕನೊಬ್ಬ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ದೃಶ್ಯ ಕಂಡು ಬಂತು. ಜಿಲ್ಲಾಡಳಿತದ ಪಾಸ್ ಇಲ್ಲದೆ ಮತಗಟ್ಟೆ ಕೇಂದ್ರದಲ್ಲೇ ಮತದಾರರ ಮನವೊಲಿಸುತ್ತಿದ್ದ ಕಾರಣ ಪೊಲೀಸರು ಆತನನ್ನು ಹೊರ ದಬ್ಬಿದರು.

    ಗುಳೆಕಾರರ ಆಗಮನ
    ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಕ್ಕೆ ಗುಳೆ ಹೋದವರು ಕೂಡ ಸ್ವಗ್ರಾಮಕ್ಕೆ ಮರಳಿ ತಮ್ಮೂರಿನ ನೇತಾರರಿಗೆ ಮತ ಹಾಕಿದರು. ಗುಳೆ ಹೋದವರನ್ನು ಸಂಪರ್ಕಿಸಿದ ಅಭ್ಯರ್ಥಿಗಳು ವಿಶೇಷ ವಾಹನದ ಮೂಲಕ ಮತದಾನಕ್ಕೆ ಕರೆಸಿದ್ದರು. ಸೊಲ್ಲಾಪುರ, ಸಾಂಗಲಿ, ಮಿರಜ್, ಪುಣೆ, ಪಣಜಿ ಸೇರಿದಂತೆ ಮತ್ತಿತರರ ಕಡೆಗಳಲ್ಲಿದ್ದ ಕಾರ್ಮಿಕರು 2 ದಿನ ಕೆಲಸಕ್ಕೆ ರಜೆ ಹಾಕಿ ಮತದಾನಕ್ಕೆ ಬಂದಿದ್ದರು. ದೇವರಹಿಪ್ಪರಗಿ ತಾಲೂಕಿನ ಮಣೂರ, ಸಿಂದಗಿ ತಾಲೂಕಿನ ನಾಗಾವಿ ಬಿ.ಕೆ. ಗ್ರಾಮದಲ್ಲಿ ಕರೊನಾ ಸೋಂಕಿತರು ಕೂಡ ಪಿಪಿಐ ಕಿಟ್ ಧರಿಸಿ ಮತ ಹಾಕಿದರು.

    ಮತದಾನ ಪ್ರಕ್ರಿಯೆ ಪರಿಶೀಲನೆ
    ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳೂ ಆಗಿರುವ ಪಿ. ಸುನೀಲಕುಮಾರ ಮಧ್ಯಾಹ್ನದವರೆಗೆ ಅತಿ ಸೂಕ್ಷ್ಮ ಮತದಾನ ಕೇಂದ್ರ ಸಾಲೋಟಗಿ, ಇಂಡಿ ತಾಲೂಕಿನ ಚವಡಿಹಾಳ, ಬಬಲಾದ, ಹಲಗುಣಕಿ ಮತ್ತು ನಾದ ಬಿ.ಕೆ ಗ್ರಾಮಗಳಿಗೆ ಭೇಟಿ ನೀಡಿ ಮತದಾನ ಮತ್ತು ಚುನಾವಣಾ ಪ್ರಕ್ರಿಯೆ ಪರಿಶೀಲಿಸಿದರು. ಮತಗಟ್ಟೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಶೀಲಿಸಿದರು.

    ಹಾಲುಮತದ ಬೋಣಿಗೆ
    ಹಾಲು ಮತಸ್ಥರ ಬೋಣಿಗೆಯಾದರೆ ಒಳಿತಾಗಲಿದೆ ಎಂಬ ನಂಬಿಕೆಯಿಂದಾಗಿ ಎಲ್ಲ ಅಭ್ಯರ್ಥಿಗಳು ಹಾಲುಮತಸ್ಥರಿಂದ ಮೊದಲು ಮತ ಹಾಕಿಸಲು ಮುಗಿಬಿದ್ದರು. ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಮತಗಟ್ಟೆ ಕೇಂದ್ರದಲ್ಲಿ ಮಹಿಳೆಯರು ಆರತಿ ತಟ್ಟೆ ಹಿಡಿದು ನಿಂತಿದ್ದ ದೃಶ್ಯ ಕಂಡು ಬಂತು. ಮಾತ್ರವಲ್ಲ, ಸಾಲಾಗಿ ನಿಂತು ಮತಗಟ್ಟೆಗೆ ಆರತಿ ಬೆಳಗಿದರು. ಶಾಂತಿಯುತ ಪ್ರಕ್ರಿಯೆಯಾದ್ದರಿಂದ ಸಿಬ್ಬಂದಿ ಕೂಡ ಸಹಕರಿಸಿದ್ದು ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts