More

    ಬಡವರಿಗೆ ವಿಜಯಪುರ ಗೆಳೆಯರ ಬಳಗ ಆಸರೆ

    ವಿಜಯಪುರ: ಲಾಕ್‌ಡೌನ್ ಹಿನ್ನೆಲೆ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಸರಿಯಾಗಿ ಆಹಾರ ಸಿಗದೆ ನರಳಾಡುವ ಸ್ಥಿತಿಯನ್ನು ಕಣ್ಣಾರೆ ಕಂಡ ವಿಜಯಪುರ ಗೆಳೆಯರ ಬಳಗದ ಸದಸ್ಯರು, ಪ್ರತಿ ದಿನ ಬಡವರಿಗೆ, ನಿರ್ಗತಿಕರಿಗೆ, ಪೊಲೀಸ್ ಸಿಬ್ಬಂದಿಗೆ ಪ್ರತಿದಿನ ಬೆಳಗ್ಗೆ ಉಪಾಹಾರ ವಿತರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಗೆಳೆಯರ ಬಳಗದ ಸದಸ್ಯರೊಬ್ಬರ ಪತ್ನಿಯನ್ನು ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಅಲ್ಲಿ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಬಂದಿರುವ ಬಡ ರೋಗಿಗಳು, ಸಂಬಂಧಿಕರು ಸರಿಯಾಗಿ ಆಹಾರ ಸಿಗದೆ ಪರದಾಡುವಂತಹ ಪರಿಸ್ಥಿತಿ ಕಂಡು ಸ್ವತಃ 20 ಸದಸ್ಯರನ್ನೊಳ್ಳಗೊಂಡ ವಿಜಯಪುರ ಗೆಳೆಯರ ಬಳಗವನ್ನು ಕಟ್ಟಿಕೊಂಡು ಆಸ್ಪತ್ರೆಗೆ ಬರುವ ಬಡವರಿಗೆ ಉಚಿತವಾಗಿ ಆಹಾರವನ್ನು ಒದಗಿಸುವ ಕಾರ್ಯವನ್ನು ನಿರಂತರ ಮಾಡುತ್ತಿದ್ದಾರೆ.

    ಪ್ರತಿ ದಿನ ಇಡ್ಲಿ, ಉಪ್ಪಿಟ್ಟು, ಕೇಸರಿಬಾತ್, ಬಿಸಿಬೇಳೆ ಬಾತ್, ಪುಲಾವ್, ಮೊಸರನ್ನ, ಪೊಂಗಲ್ ಹೀಗೆ ಬಗೆಬಗೆಯ ತಿಂಡಿಗಳನ್ನು ಮಾಡಿ, ವಿಜಯಪುರ ಜಿಲ್ಲಾಸ್ಪತ್ರೆ, ಬಿಎಲ್‌ಡಿಇ ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ವಿತರಿಸಲಾಗುತ್ತಿದೆ. ಅಲ್ಲದೆ ಕರೊನಾ ನಿಯಂತ್ರಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ, ಬೀದಿ ಬದಿ ಇರುವ ನಿರ್ಗತಿಕರಿಗೆ ಪ್ರತಿ ದಿನ ಆಹಾರ ಪೊಟ್ಟಣವನ್ನು ಹಂಚಲಾಗುತ್ತಿದೆ.

    ಪ್ರತಿದಿನ 600ರಿಂದ 700 ಜನರಿಗೆ ಉಪಾಹಾರವನ್ನು ವಿತರಿಸಲಾಗುತ್ತಿದೆ. ಅದಕ್ಕೆ ಗೆಳೆಯರ ಬಳಗದಲ್ಲಿರುವ ಗಿರಿಧರ ಹುನ್ನೂರ, ರಾಘವೇಂದ್ರ ಕುಲಕರ್ಣಿ, ಸಂಜು ಕುಲಕರ್ಣಿ, ಬಸವರಾಜ ಚೊಳ್ಳಿ ಅವರು ತಮ್ಮ ಸ್ವಂತ ಖರ್ಚಿನಿಂದ ಸಹಾಯಹಸ್ತ ಚಾಚಿದ್ದಾರೆ. ಈ ವರೆಗೆ ಏಳು ಸಾವಿರಕ್ಕೂ ಅಧಿಕ ಉಪಾಹಾರದ ಪ್ಯಾಕೇಟ್ ವಿತರಣೆ ಮಾಡಲಾಗಿದೆ.

    ಉದ್ಯೋಗ ಕಳೆದುಕೊಂಡರೂ ಉತ್ಸಾಹ
    ಕರೊನಾದಿಂದಾಗಿ ಲಾಕ್‌ಡೌನ್ ಆಗಿ ಕೆಲಸ ಕಳೆದುಕೊಂಡ ಬಳಗದ ಸದಸ್ಯರು ತಮ್ಮ ಉತ್ಸಾಹ ಕಳೆದುಕೊಂಡಿಲ್ಲ. ಮದುವೆ, ಸಭೆ, ಸಮಾರಂಭಗಳನ್ನು ಸರ್ಕಾರ ಸಂಪೂರ್ಣ ನಿಷೇಧ ಮಾಡಿದೆ. ಮದುವೆ ಸಮಾರಂಭಗಳಲ್ಲಿ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದ ಗಿರೀಶ ಹುನ್ನೂರ ಅವರು ತಮ್ಮ ಕೆಲಸ ಸ್ಥಗಿತಗೊಂಡಿದ್ದರೂ ಬಡವರಿಗಾಗಿ ಅವರ ಮನ ಮಿಡಿಯುತ್ತಿದೆ. ದಿನ ನಿತ್ಯ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಅದೇಷ್ಟೋ ಜನರಿದ್ದಾರೆ. ಅವರಿಗಾಗಿ ಸ್ವಲ್ಪ ನಾವೂ ಸಹಾಯ ಮಾಡಿ, ಅವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎನ್ನುತ್ತಾರೆ ಗೆಳೆಯರ ಬಳಗದ ಸದಸ್ಯರು.

    ಕರೊನಾ ಮಹಾಮಾರಿಯಿಂದ ಜನರ ಜೀವನ ದುಸ್ತರಗೊಂಡಿದೆ. ಅನೇಕ ಕಾರ್ಮಿಕರು, ವ್ಯಾಪಾರಿಗಳು ಬೀದಿಪಾಲಾಗಿದ್ದಾರೆ. ಅಂತಹವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವ ಉದ್ದೇಶದಿಂದ ವಿಜಯಪುರ ಗೆಳೆಯರ ಬಳಗವನ್ನು ಸ್ಥಾಪಿಸಲಾಗಿದೆ. ಆ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.
    ಗಿರಿಧರ ಹುನ್ನೂರ, ಸದಸ್ಯ ವಿಜಯಪುರ ಗೆಳೆಯರ ಬಳಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts