More

    ಪರಿಹಾರ ವಿತರಣೆಯಲ್ಲಿ ಅನ್ಯಾಯ

    ವಿಜಯಪುರ: ಪ್ರವಾಹ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ವಿಜಯಪುರ- ಕಲಬುರಗಿ ಭಾಗದ ಜನರಿಗೆ ಅನ್ಯಾಯವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ವಪಕ್ಷೀಯ ಮಂತ್ರಿಗಳ ವಿರುದ್ಧ ಗುಡುಗಿದ್ದಾರೆ.
    ತಕ್ಷಣದ ಪರಿಹಾರದ ಮೊತ್ತವಾಗಿ ಭೀಮಾ ತೀರದ ಜನರಿಗೆ ಕೇವಲ 10 ಸಾವಿರ ರೂ. ನೀಡಿದ್ದು, ದಕ್ಷಿಣ ಕರ್ನಾಟಕದ ಭಾಗಕ್ಕೆ 25 ಸಾವಿರ ರೂ. ನೀಡಿದ್ದಾರೆ. ನಮ್ಮದೇ ಮಂತ್ರಿಗಳು ಆ ಭಾಗದಲ್ಲಿ ಓಡಾಡಿ ಪರಿಹಾರ ಹಂಚುತ್ತಿದ್ದಾರೆಂದು ಶುಕ್ರವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಉದ್ಘಾಟನೆ ಸಮಾರಂಭದ ವೇಳೆ ಸುದ್ದಿಗಾರರ ಎದುರು ಅವರು ಈ ತಾರತಮ್ಯ ನೀತಿ ಬಿಚ್ಚಿಟ್ಟರು.

    ಅನುದಾನಕ್ಕಾಗಿ ಹೋರಾಟ

    ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಹತ್ತು ಬಾರಿ ಮನವಿ ಮಾಡಿದ್ದೆ. ಆದರೆ, ಮನವಿಗೆ ಸ್ಪಂದಿಸದ ಕಾರಣ ಧ್ವನಿ ಎತ್ತಬೇಕಾಯಿತು. ಅದರ ಫಲವಾಗಿ ಇಂದು ನನ್ನ ಕ್ಷೇತ್ರಕ್ಕೆ ಮಾತ್ರವಲ್ಲ ರಾಜ್ಯದ ಎಲ್ಲ ತಾಲೂಕುಗಳಿಗೂ ಅನುದಾನ ಮಂಜೂರಾಗಿದೆ. ವಿಜಯಪುರ ಮಹಾನಗರ ಪಾಲಿಕೆಗೆ 125 ಕೋಟಿ ರೂ. ಹಾಗೂ ರಾಜ್ಯದ ಎಲ್ಲ ಪಾಲಿಕೆಗಳಿಗೆ 1300 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದು ನನ್ನ ಹೋರಾಟದ ಫಲ ಎಂದರು.

    ದುರ್ದೈವದ ಸಂಗತಿ

    ಆಡಳಿತ ಪಕ್ಷದಲ್ಲಿದ್ದರೂ ಅನುದಾನಕ್ಕೆ ಹೋರಾಡುವುದು ಅನಿವಾರ್ಯವಾಗಿದೆ. ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಪಕ್ಷ ವಿರೋಧಿ ಪಟ್ಟ ಕಟ್ಟುವುದು ದುರ್ದೈವದ ಸಂಗತಿ. ನನ್ನ ಬಗ್ಗೆ ಹೈಕಮಾಂಡ್‌ಗೆ ಯಾರು? ಎಷ್ಟು ಪತ್ರ ಬರೆಯುತ್ತಾರೋ ಬರೆಯಲಿ. ನನಗೆ ಜನರ ಹಿತ ಮುಖ್ಯ. ಅಭಿವೃದ್ಧಿಗಾಗಿ ಧ್ವನಿ ಎತ್ತಲು ಸಿದ್ಧ. ನಮ್ಮ ಕ್ಷೇತ್ರಕ್ಕೆ ಅನ್ಯಾಯವಾದರೆ ನಾವು ಕೇಳುವವರೇ….ಅದು ಸಿಎಂ ಆದರೂ ಸರಿ….ಎಂದು ಯತ್ನಾಳ ಪ್ರತಿಕ್ರಿಯಿಸಿದರು.

    ಸಿಎಂ ಬದಲಾವಣೆ ವಿಷಯ

    ಯಡಿಯೂರಪ್ಪ 3 ವರ್ಷ ಸಿಎಂ ಆಗಿರ್ತಾರೆ ಎಂದೇನೂ ನಾನು ಹೇಳುವುದಿಲ್ಲ. ಬೇರೆ ಸಚಿವರಂತೆ ಸೂರ್ಯ, ಚಂದ್ರರಿರುವಷ್ಟು ದಿನ ಸಿಎಂ ಆಗಿರ್ತಾರೆ ಎಂದು ಹೇಳಲ್ಲ. ಹಾಗಂತ ನಾನು ಸಿಎಂ ಆಕಾಂಕ್ಷಿಯೂ ಅಲ್ಲ. ನಾನು ಮಂತ್ರಿಯೇ ಆಗಿಲ್ಲ, ಇನ್ನು ಸಿಎಂ ಆಗುವ ಹೇಳಿಕೆ ಹೇಗೆ ನೀಡಲಿ? ನಾನೆಂದೂ ಮಂತ್ರಿ ಮಾಡಲೆಂದು ಕೇಳಿಕೊಂಡವನೂ ಅಲ್ಲ. ಬದಲಾಗಿ ಅಭಿವೃದ್ಧಿಗಾಗಿ ಅನುದಾನ ಕುರಿತು ಪ್ರಶ್ನೆ ಮಾಡಿದ್ದೇನೆಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts