More

    ಅನ್ನದಾತರು ಉದ್ಯೋಗದಾತರಾಗಲಿ

    ವಿಜಯಪುರ : ಅನ್ನದಾತರು ಉದ್ಯೋಗದಾತರಾದಾಗ ದೇಶದ ಆರ್ಥಿಕತೆ ಇನ್ನಷ್ಟು ಬಲಗೊಳ್ಳಲಿದೆ ಎಂದು ಆತ್ಮಯೋಜನೆಯ ಉಪಯೋಜನಾ ನಿರ್ದೇಶಕ ಡಾ.ಎಂ.ಬಿ.ಪಟ್ಟಣಶೆಟ್ಟಿ ಹೇಳಿದರು.

    ಇಲ್ಲಿನ ಉಪ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಆತ್ಮ ಯೋಜನೆಯಡಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಜಯಪುರ ತಾಲೂಕುಮಟ್ಟದ ರೈತರ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

    ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಜನಸಂಖ್ಯೆಯ ಶೇ.60 ರಷ್ಟು ಜನ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ರೈತರಲ್ಲಿ ಶೇ.85 ರಷ್ಟು ರೈತರು ಚಿಕ್ಕ ಹಾಗೂ ಅತಿಚಿಕ್ಕ ಹಿಡುವಳಿದಾರರಾಗಿದ್ದು, ಶೇ.45 ರಷ್ಟು ಕೃಷಿ ಕ್ಷೇತ್ರ ಹೊಂದಿದ್ದಾರೆ ಎಂದು ತಿಳಿಸಿದರು.

    ದೇಶದಲ್ಲಿ ಕೊಯ್ಲೋತ್ತರ ಮೂಲಸೌಲಭ್ಯಗಳ ಕೊರತೆ, ವಿಶೇಷವಾಗಿ ವ್ಯವಸ್ಥಿತ ಕೃಷಿ ಮಾರುಕಟ್ಟೆ ಸೌಲಭ್ಯಗಳ ಕೊರತೆ ಇದ್ದಿದ್ದರಿಂದ ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯದಿರುವುದು ಒಂದು ಕಡೆಯಾದರೆ ಶೇ.15 ರಿಂದ 20 ರಷ್ಟು ಉತ್ಪನ್ನ ಹಾಳಾಗುತ್ತಿದೆೆ. ದೇಶದ ಆಂತರಿಕ ಉತ್ಪಾದನೆಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಶೇ.14 ರಷ್ಟಿದೆ. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ.ಮೊತ್ತದ ಆತ್ಮನಿರ್ಭರ್ ಭಾರತ ಅಭಿಯಾನದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅದಕ್ಕಾಗಿ ಒಂದು ಲಕ್ಷ ಕೋಟಿ ರೂ.ಮೊತ್ತವನ್ನು ಕೃಷಿ ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

    ಆತ್ಮಯೋಜನೆಯ ಜಿಲ್ಲಾಮಟ್ಟದ ರೈತರ ಸಲಹಾ ಸಮಿತಿ ಸದಸ್ಯೆ ಮಹಾದೇವಿ ಗೋಕಾಕ ಮಾತನಾಡಿ, ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದು, ಜಿಲ್ಲೆಯ ರೈತರು ಸಂಘಟಿತರಾಗಿ ಪ್ರಯೋಜನ ಪಡೆದಲ್ಲಿ ಜಿಲ್ಲೆಯ ರೈತರ ಆರ್ಥಿಕತೆ ಸುಧಾರಿಸುವಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ರೈತರಿಗೆ ಕೃಷಿ ಮಾಹಿತಿ ಕಿರು ಹೊತ್ತಿಗೆಯನ್ನು ವಿತರಿಸಲಾಯಿತು. ಪ್ರಗತಿಪರ ರೈತರಾದ ವಿಠಲ ಕನ್ನಿ, ವೀರಣ್ಣ ಅವಟಿ, ವಿದ್ಯಾಧರ ಪಾಟೀಲ, ರಾಯನಗೌಡ ಪಾಟೀಲ, ಸಮೃದ್ಧಿ ಮಹಿಳಾ ಸಂಸ್ಥೆ ಅಧ್ಯಕ್ಷೆ ಮಧು ಪಾಟೀಲ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts