More

    ರೈಲ್ವೆ ನಿಲ್ದಾಣಗಳಲ್ಲಿ ಕರೊನಾ ಕಟ್ಟೆಚ್ಚರ

    ವಿಜಯಪುರ: ನೆರೆಯ ಮಹಾರಾಷ್ಟ್ರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಕರೊನಾ ಭೀತಿ ಹೆಚ್ಚಿರುವ ಹಿನ್ನೆಲೆ ಆ ಭಾಗದಿಂದ ಬರುವ ರೈಲು ಮತ್ತು ಬಸ್‌ಗಳ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ಇರಿಸಲಾಗಿದೆ.

    ಕಳೆದೊಂದು ವಾರದಿಂದ ಸರಣಿ ಸಭೆಗಳನ್ನು ನಡೆಸುತ್ತಿರುವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಜಿಲ್ಲೆಯಲ್ಲಿ ಮುಂಜಾಗ್ರತೆ ಕೈಗೊಳ್ಳಲು ವಿಶೇಷ ತಂಡಗಳೊಂದಿಗೆ ಕಣಕ್ಕಿಳಿದಿದ್ದಾರೆ. ವಿದೇಶದಿಂದ ಬರುವವರ ಮೇಲೆ ನಿರಂತರವಾಗಿ ನಿಗಾ ಇರಿಸಲಾಗಿದೆ. ಇದೀಗ ಕಲಬುರಗಿ ಮತ್ತು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಅಲ್ಲಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ.

    ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಮತ್ತೊಂದು ಸುತ್ತಿನ ಸಭೆ ನಡೆಸಿರುವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಜಿಲ್ಲೆಯ ಒಟ್ಟು ಐದು ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿ ಆರು ತಂಡಗಳನ್ನು ರಚಿಲಾಗಿದ್ದು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲು ಸೂಚಿಸಿದರು.

    ಪ್ರಯಾಣಿಕರಲ್ಲಿ ಕರೊನಾ ಬಗ್ಗೆ ತಿಳಿವಳಿಕೆ ನೀಡುವುದರ ಜತೆಗೆ ತಪಾಸಣೆ ಕೈಗೊಳ್ಳಲಿದ್ದು, ಅಂಥ ಲಕ್ಷಣಗಳು ಕಂಡುಬಂದಲ್ಲಿ ಪ್ರತ್ಯೇಕವಾಗಿ ಅವರಿಗೆ ಮನವರಿಕೆ ಮಾಡಲು ಸೂಚಿಸಲಾಗಿದೆ. ಮಹಾರಾಷ್ಟ್ರ ಮತ್ತು ಕಲಬುರಗಿಗೆ ಹೋಗುವ 56 ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಇನ್ನೂ ಬಸ್‌ಗಳ ಸಂಖ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

    ದಿಢೀರ್ ಭೇಟಿ: ಹೋಮ್ ಕೊರಂಟೈನ್ (ಮನೆಯಲ್ಲಿ ಪ್ರತ್ಯೇಕವಾಗಿ) ನಿಗಾ ಇಡಲಾದವರ ಕುರಿತು ಖುದ್ದಾಗಿ ತಾವು, ಜಿಪಂ ಸಿಇಒ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ತಿಳಿವಳಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿ ಹೇಳಲಾಗಿದೆ. ತಮ್ಮ ಆರೋಗ್ಯ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹೋಮ್‌ಕೊರಂಟೈನ್ ಅವಧಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ನಿರ್ದೇಶನ ಪಾಲಿಸದೆ ಹೊರಗೆ ಬರುತ್ತಿರುವವರ ಬಗ್ಗೆ ದೂರುಗಳು ಬರುತ್ತಿದ್ದು, ಅಂತಹವರು ನಿರ್ದೇಶನ ಪಾಲನೆ ಮಾಡದಿದ್ದಲ್ಲಿ ಐಪಿಸಿ ಸೆಕ್ಷನ್ 188 ಮತ್ತು ಸೂಕ್ತ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದೆಂದರು.

    ಹೋಮ್ ಕೊರಂಟೈನ್‌ನಲ್ಲಿರುವವರು ಅನಗತ್ಯವಾಗಿ ಹೊರಗೆ ಓಡಾಡುವುದು ಮತ್ತು ಪ್ರವಾಸ ಕೈಗೊಳ್ಳುವುದು ಸರಿಯಲ್ಲ. ಹೊಟೇಲ್‌ಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ. ನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತಹ ಮಾಲ್ ಮತ್ತು ಇನ್ನಿತರ ಕಡೆ ನಿರ್ಬಂಧಕ್ಕೆ ಆದೇಶಿಸಲಾಗಿದೆ ಎಂದರು.

    ಸಿಬ್ಬಂದಿಗೆ ಮುನ್ನೆಚ್ಚರಿಕೆ
    ಜಿಲ್ಲಾಸ್ಪತ್ರೆ, ತಾಲೂಕು ಆರೋಗ್ಯ ಸಿಬ್ಬಂದಿಗೆ ಮುನ್ನೆಚ್ಚರಿಕೆ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಮಾಸ್ಕ್ ಧರಿಸುವ ಕುರಿತಂತೆ ಮಾರ್ಗಸೂಚಿ ಪಾಲನೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಕರೊನಾ ಪಾಸಿಟಿವ್ ಪ್ರಕರಣ-ರೋಗಿಗಳ ನಿರ್ವಹಣೆಗೆ ಆರೋಗ್ಯ ಸಿಬ್ಬಂದಿಗೆ ಅವಶ್ಯಕವಿರುವ ಎಲ್ಲ ಪರಿಕರಗಳು ಇರುವಂತೆ ನೋಡಿಕೊಳ್ಳಲು ಸೂಚಿಸಿದ್ದು, ಅವಶ್ಯಕತೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.

    ವಿದೇಶಿಗರ ಮೇಲೆ ನಿಗಾ
    ಬುಧವಾರ ಮಧ್ಯಾಹ್ನದವರೆಗೆ 249 ಜನರು ವಿದೇಶದಿಂದ ಜಿಲ್ಲೆಗೆ ಆಗಮಿಸಿರುವ ಬಗ್ಗೆ ವರದಿಯಾಗಿದೆ. ಇದರಲ್ಲಿ 10 ಜನರು 28 ದಿನಗಳ ಹೋಮ್‌ಕೊರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 85 ಜನರು 14 ದಿನದ ಹೋಮ್‌ಕೊರಂಟೈನ್ ಅವಧಿ ಪೂರ್ಣಗೊಳಿಸಿದ್ದು, 149 ಜನರು ಹೋಮ್‌ಕೊರಂಟೈನ್‌ನಲ್ಲಿದ್ದು, ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಅದರಂತೆ ಭಾರತದ ವಿವಿಧ ಭಾಗಗಳಿಂದ ಬಂದಿರುವ ಐದು ಜನರ ಮೇಲೂ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಪಾಟೀಲ ತಿಳಿಸಿದರು.

    ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಮುಂಬರುವ ದಿನಗಳಲ್ಲಿ ಕರೊನಾ ಕುರಿತಂತೆ ನೀಡಲಾಗಿರುವ ಲಿಖಿತ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಾಸ್ಕ್ ಬಳಕೆ ಬಗ್ಗೆಯೂ ಮಾರ್ಗಸೂಚಿ ಅನುಸರಿಸಲು ಹಾಗೂ ವೈದ್ಯರಿಗೆ ವಿಶೇಷವಾಗಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ರಾಮ ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪಸೆ, ವಿಶ್ವ ಆರೋಗ್ಯ ಸಂಸ್ಥೆ ನಿಯಂತ್ರಣಾಧಿಕಾರಿ ಮುಕುಂದ ಗಲಗಲಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts