More

    3ನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಿ

    ವಿಜಯಪುರ: ಕೋವಿಡ್-19 ಮೂರನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೋವಿಡ್ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಈ ಕುರಿತು ಈಗಿನಿಂದಲೇ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಸೂಚನೆ ನೀಡಿದರು.

    ನಗರದ ಬಿದರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ, ಅಲ್ಲಿರುವ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೋವಿಡ್ 3ನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೋಂಕಿಗೆ ತುತ್ತಾಗುವ ಬಗ್ಗೆ ಈ ಹಿಂದೆ ತಜ್ಞರು ಸಲಹೆ ನೀಡಿರುವುದರಿಂದ, ಮತ್ತು ಹೆಚ್ಚಿನ ಮಕ್ಕಳು ಈ ಸೋಂಕಿಗೆ ತುತ್ತಾಗುವ ಬಗ್ಗೆ ಆತಂಕ ಇರುವುದರಿಂದ ತಕ್ಷಣ ಅವಶ್ಯಕ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಮತ್ತು ಮಕ್ಕಳ ವೈದ್ಯರಿಗೆ ಸಲಹೆ ನೀಡಿದರು.

    ಸೂಕ್ತ ವೆಂಟಿಲೇಟರ್‌ಗಳು, ಆಕ್ಸಿಜನ್ ಸೌಲಭ್ಯ, ಹಾಸಿಗೆಗಳ ಲಭ್ಯತೆ ಮತ್ತು ಅಂಬುಲೆನ್ಸ್ ಸೇರಿ ಮಕ್ಕಳ ಚಿಕಿತ್ಸಾ ಸೌಕರ್ಯದ ಬಗ್ಗೆ ಪರಿಶೀಲಿಸಿ ಅಗತ್ಯ ಸಿದ್ಧತೆಗೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.

    ಅದರಂತೆ ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳು ಮತ್ತು ಚಿಕ್ಕಮಕ್ಕಳ ತಜ್ಞರೊಂದಿಗೆ ಕುರಿತು ಚರ್ಚಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸೋಂಕಿತ ಮಕ್ಕಳಿಗೆ ಸಕಾಲದಲ್ಲಿ, ತುರ್ತು ಮತ್ತು ಪರಿಣಾಮಕಾರಿ ಚಿಕಿತ್ಸೆ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ವೈದ್ಯರು ಸನ್ನದ್ಧರಾಗಬೇಕು. ಸಕಲ ಸೌಕರ್ಯಗಳೊಂದಿಗೆ ನುರಿತ ಸಿಬ್ಬಂದಿ ಇರುವುದರ ಬಗ್ಗೆ ಖಾತರಿಪಡಿಸಿಕೊಳ್ಳುವಂತೆ ಅವರು ಸೂಚನೆ ನೀಡಿದರು.

    ಜಿಲ್ಲಾ ಆಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಡಾ. ಲಕ್ಕಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪ್ಸೆ , ಮಕ್ಕಳ ತಜ್ಞ ಎಲ್.ಎಚ್. ಬಿದರಿ ಇತರರಿದ್ದರು.
    …………………….

    ಮತ್ತೆ 159 ಜನರಿಗೆ ಸೋಂಕು
    ಜಿಲ್ಲೆಯಲ್ಲಿ ಬುಧವಾರ ಮತ್ತೆ 159 ಜನರಿಗೆ ಕರೊನಾ ಸೋಂಕು ದೃಢವಾಗಿದೆ. ವಿಜಯಪುರ ನಗರ 25, ವಿಜಯಪುರ ಗ್ರಾಮೀಣ 27, ಬಬಲೇಶ್ವರ 24, ತಿಕೋಟಾ 2, ಬಸವನ ಬಾಗೇವಾಡಿ 20, ಕೊಲ್ಹಾರ 3, ನಿಡಗುಂದಿ 3, ಇಂಡಿ 25, ಚಡಚಣ 3, ಮುದ್ದೇಬಿಹಾಳ 9, ಸಿಂದಗಿ 13, ದೇವರ ಹಿಪ್ಪರಗಿಯಲ್ಲಿ ಒಬ್ಬರಿಗೆ ಹಾಗೂ ಇತರ ಜಿಲ್ಲೆಯ ನಾಲ್ವರಿಗೆ ಕೋವಿಡ್ ಪಾಟಿಸಿವ್ ಬಂದಿದೆ. 178 ಜನರು ವಿವಿಧ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ 31,293 ಜನರು ಗುಣಮುಖರಾಗಿದ್ದಾರೆ. ಇನ್ನೂ 1,475 ಜನರ ವರದಿ ಬರಬೇಕಿದೆ. ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 420ಕ್ಕೆ ಏರಿಕೆ ಆಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts