More

    ಅನವಶ್ಯಕವಾಗಿ ಓಡಾಡುವರ ವಿರುದ್ಧ ಅಭಿಯಾನ

    ವಿಜಯಪುರ: ವೇಗವಾಗಿ ಹರಡುತ್ತಿರುವ ಕರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಲಾಗುತ್ತಿದ್ದು ಅನವಶ್ಯಕವಾಗಿ ಓಡಾಡುವರ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ಸುಖಾಸುಮ್ಮನೆ ಬಹಿರಂಗವಾಗಿ ಕಾಣಿಸಿಕೊಂಡರೆ ಅಂಥವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಈಗಾಗಲೇ ಜಿಲ್ಲಾದ್ಯಂತ ಕಲಂ 144 ಜಾರಿಯಲ್ಲಿದೆ. ಮಾರ್ಚ್ 31ರ ಮಧ್ಯರಾತ್ರಿವರೆಗೆ 5 ಕ್ಕಿಂತ ಹೆಚ್ಚು ಜನ ಓಡಾಡುವುದನ್ನು ನಿಷೇಧಿಸಲಾಗಿದೆ. ಹೆಚ್ಚು ಜನರು ಸೇರುವ ಮಾರುಕಟ್ಟೆ, ಮಾಲ್, ಸೂಪರ್‌ಬಜಾರ್, ಬಾರ್ ಮತ್ತು ರೆಸ್ಟೋರೆಂಟ್, ವೈನ್‌ಶಾಪ್ ಹಾಗೂ ಧಾಬಾ ಬಂದ್ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ತಳ್ಳುಗಾಡಿಗೆ ಮಾತ್ರ ಅವಕಾಶ

    ಸಂತೆ, ಜಾತ್ರೆ, ಸಭೆ ಸಮಾರಂಭಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ತಳ್ಳುವ ಗಾಡಿಯಲ್ಲಿ ಮಾತ್ರ ಹಣ್ಣು, ತರಕಾರಿ, ಹೂ ಮಾರಾಟ ಮಾಡಬಹುದು. ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶವಿದೆ. ನಿಯಮ ಮೀರಿ ನಡೆದುಕೊಂಡಲ್ಲಿ ಹೋಟೆಲ್ ಮಾಲೀಕರ ಪರವಾನಗಿ ರದ್ದುಗೊಳಿಸಲಾಗುವುದು. ಪ್ರಾರ್ಥನಾ ಸ್ಥಳಗಳಲ್ಲಿ ಜನರು ಗುಂಪು-ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ಮೆಡಿಕಲ್ ಅಂಗಡಿ, ದಿನಸಿ ಅಂಗಡಿ, ಹಾಲು, ಮಾಂಸ, ಮೀನು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಮಾತ್ರ ಹೊರಗೆ ಬರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

    ಅದರಂತೆ ಅಂತಾರಾಜ್ಯ, ಅಂತರ್ ಜಿಲ್ಲಾ ಹಾಗೂ ಜಿಲ್ಲೆಯ ಒಳಗೆ ಎಲ್ಲ ರೀತಿಯ ವಾಹನಗಳಿಗೆ ನಿರ್ಬಂಧಿಸಲಾಗಿದೆ. ತುರ್ತು ಮತ್ತು ಅವಶ್ಯಕವೆನಿಸುವ ಆರೋಗ್ಯ ಸಂಬಂಧಿತ ಸಮಸ್ಯೆಗೆ ಮೂರು ಜನರು ಮೀರದಂತೆ ಆಟೋಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಪ್ರಾರ್ಥನಾ ಮಂದಿರಗಳಲ್ಲಿ ಗುಂಪಾಗಿ ಪ್ರಾರ್ಥನೆಗೆ ಅವಕಾಶವಿಲ್ಲ ಎಂದರು.

    ಸರ್ಕಾರಿ ಅಧಿಕಾರಿಗಳಿಗೆ ರಜೆ

    ಸರ್ಕಾರಿ ಇಲಾಖೆಗಳಾದ ಆರೋಗ್ಯ, ವೈದ್ಯಕೀಯ, ಶಿಕ್ಷಣ, ಒಳಾಡಳಿತ, ಕಂದಾಯ, ಗ್ರಾಮಿಣಾಭಿವೃದ್ಧಿ, ನಗರಾಭಿವೃದ್ಧಿ, ಆಹಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಾರಿಗೆ ಮತ್ತು ಇಂಧನ ಇಲಾಖೆ ಹೊರತುಪಡಿಸಿ ಉಳಿದ ಎಲ್ಲ ಇಲಾಖೆಯ ಸಿಬ್ಬಂದಿಗೆ ಮಾ.31, 2020 ರ ವರೆಗೆ ಸರ್ಕಾರದ ನಿರ್ದೇಶನದಂತೆ ರಜೆ ನೀಡಲಾಗಿದೆ. ರಜೆಯಲ್ಲಿರುವ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ. ತುರ್ತು ಸಂದರ್ಭದಲ್ಲಿ ಸೇವೆಗೆ ಹಾಜರಾಗಬೇಕೆಂದು ತಿಳಿಸಿದರು.

    ಚೆಕ್‌ಪೋಸ್ಟ್‌ನಲ್ಲಿ ಕಟ್ಟೆಚ್ಚರ

    ಗಡಿಭಾಗದಲ್ಲಿ 23 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರ ಮತ್ತು ಕಲಬುರಗಿಗಳಿಂದ ಬರುವ ಮತ್ತು ಹೋಗುವ ವಾಹನಗಳ ನಿಯಂತ್ರಣಕ್ಕೆ ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಜತೆಗೆ ರಾಯಚೂರು, ಯಾದಗಿರಿ, ಬೆಳಗಾವಿ, ಬಾಗಲಕೋಟೆ, ಧಾರವಾಡಗಳಿಂದ ಆಗಮಿಸುವ ಮತ್ತು ಹೋಗುವ ವಾಹನಗಳಿಗೂ ನಿರ್ಭಂಧ ವಿಧಿಸಲಾಗಿದೆ. ಅತ್ಯವಶ್ಯಕ ವಸ್ತುಗಳು, ಮೆಡಿಕಲ್ ಆಂಬುಲೆನ್ಸ್ ಹಾಗೂ ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.

    ಸಿಬ್ಬಂದಿಗೆ ಅಗತ್ಯ ಸಾಮಗ್ರಿ

    ಚೆಕ್‌ಪೋಸ್ಟ್ ಹಾಗೂ ಗೃಹಬಂಧನದಲ್ಲಿದ್ದವರ ಮೇಲೆ ನಿಗಾ ಇರಿಸಲು ನೇಮಕವಾದ ಸಿಬ್ಬಂದಿಗೆ ಸ್ಯಾನಿಟೈಸರ್, ಮಾಸ್ಕ್ ಪೂರೈಕೆಗೆ ಕ್ರಮ ಕೈಗೊಂಡಿದೆ. ಅಗತ್ಯವಿರುವ ಕಡೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸ್ಯಾನಿಟೈಸರ್‌ಗಳ ಕೊರತೆ ನೀಗಿಸಲು ಬಿಎಲ್‌ಡಿಇ ಸಂಸ್ಥೆ ಮತ್ತು ನಂದಿ ಶುಗರ್ಸ್‌ ಸಹಯೋಗದೊಂದಿಗೆ ನಿಯಮಗಳ ಪ್ರಕಾರ ಸ್ಯಾನಿಟೈಸರ್ ಉತ್ಪಾದನೆಗೆ ಕ್ರಮ ಕೈಗೊಂಡಿದ್ದು ಅಗತ್ಯವಿರುವ ರೀತಿಯಲ್ಲಿ ಬಳಸಲು ಸೂಚಿಸಿದೆ ಎಂದರು.

    ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬ್ಯಾಂಕ್‌ಗಳ ಹೆಸರಿನಲ್ಲಿ ಅನಗತ್ಯವಾಗಿ ಸಾರ್ವಜನಿಕರು ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಅನಗತ್ಯವಾಗಿ ಓಡಾಡುವವರು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ತೊಂದರೆ, ವಿದ್ಯುತ್ ವ್ಯತ್ಯಯ ಸೇರಿದಂತೆ ದಿನನಿತ್ಯ ಅಗತ್ಯವಾಗಿ ಬೇಕಾಗಿರುವ ವಸ್ತುಗಳಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ವಿದ್ಯುತ್ ಕಡಿತ ಮಾಡಬಾರದು ಎಂದ ಅವರು, ಅಧಿಕಾರಿಗಳು ಯುದ್ಧ ಕಾಲದಲ್ಲಿ ಸೇವೆ ಸಲ್ಲಿಸುವಂತೆ ಕಾರ್ಯ ನಿರ್ವಹಿಸಲು ಸೂಚಿಸಿದರು.
    ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಮಾತನಾಡಿ, ಜಿಲ್ಲೆಯ ಗಡಿ ಭಾಗಗಳಲ್ಲಿ ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಜಿಲ್ಲೆಗೆ ಆಗಮಿಸುವ ಪ್ರತಿ ವಾಹನದ ಮೇಲೆ ತೀವ್ರ ನಿಗಾ ಇಡಲಾಗಿದೆ. ಅತ್ಯವಶ್ಯಕ ವಸ್ತುಗಳು, ಮೆಡಿಕಲ್ ಆಂಬುಲೆನ್ಸ್ ಹಾಗೂ ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ದಿನಸಿ ವಸ್ತುಗಳ ಅಂಗಡಿಗಳಿಗೆ ಹಾಗೂ ಮೆಡಿಕಲ್ ಶಾಪ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅನಗತ್ಯ ಓಡಾಡುವವರ ಮೇಲೆ ನಿಗಾ ಇಡಲಾಗಿದ್ದು, ಕಾನೂನು ಉಲ್ಲಂಸುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಗೃಹಬಂಧನದಲ್ಲಿರುವವರ ಬಗ್ಗೆ ನಿಗಾ ಇಡುವುದು ಇಂದಿನ ತುರ್ತು ಅವಶ್ಯಕವಾಗಿದೆ. ಗೃಹಬಂಧನದಲ್ಲಿರುವವರು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
    ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಪಿಡಿಒ ಮತ್ತು ತಾಪಂ ಇಒ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು. ಸ್ವಚ್ಛತೆ, ಎನ್‌ಆರ್‌ಜಿಎ ಕಾರ್ಯಗಳನ್ನು ನಿಯಮಾವಳಿ ರೀತ್ಯ ಕೈಗೊಳ್ಳಬೇಕು ಎಂದರು.

    ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮ ಅರಸಿದ್ಧಿ, ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪಸೆ, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ ಮತ್ತಿತರರಿದ್ದರು.

    ಮಂಗಳವಾರ ಪೂರ್ವಹ್ನದವರೆಗೆ ವಿದೇಶದಿಂದ ಒಟ್ಟು 304 ಜನರು ಬಂದಿದ್ದಾರೆ. 24 ಜನರು 28 ದಿನ ಗೃಹಬಂಧನ ಅವಧಿ ಪೂರೈಸಿದ್ದಾರೆ. 98 ಜನ 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 182 ಜನ ಗೃಹಬಂಧನದಲ್ಲಿದ್ದಾರೆ. 6 ಜನರ ವರದಿ ನೆಗೆಟಿವ್ ಬಂದಿದೆ. ವಿದೇಶಿಗರನ್ನು ಹೊರತುಪಡಿಸಿ 8 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ.
    ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ

    ಅನವಶ್ಯಕವಾಗಿ ಓಡಾಡುವರ ವಿರುದ್ಧ ಅಭಿಯಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts