More

    ಸೇವಾ ನಿರತ ಸಿಬ್ಬಂದಿಗೆ ಔಷಧ ಪೂರೈಕೆ

    ವಿಜಯಪುರ: ಕರೊನಾ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಆದ್ಯತೆ ಮೇರೆಗೆ ಹೈಡ್ರಾಕ್ಷಿಕ್ಲೋರೊಕ್ವೀನ್ (ಎಚ್‌ಸಿಕ್ಯೂ) ಮಾತ್ರೆಗಳನ್ನು ವಿತರಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೊನಾ ನಿಯಂತ್ರಣ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ತುರ್ತು ಉಪಚಾರದ ಮೇಲೆ ಬೇರೆ ಜಿಲ್ಲೆಗೆ ತೆರಳಲು ನಿಗದಿತ ಪಾಸ್ ಮತ್ತು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕಡ್ಡಾಯಗೊಳಿಸಿದೆ. ಹೋಗಿ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಗೃಹಬಂಧನ ಸಹ ಮಾಡಲು ನಿರ್ದೇಶಿಸಿದೆ. ಬೇರೆ ಜಿಲ್ಲೆಗಳಿಂದ ಬರುವವರಿಗೂ ಆಯಾ ಸಕ್ಷಮ ಪ್ರಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ ಎಂದು ಹೇಳಿದರು.

    ಔಷಧ ವ್ಯಾಪಾರಸ್ಥರಿಗೆ ಸೂಚನೆ

    ಜಿಲ್ಲೆಯ 900ಕ್ಕೂ ಹೆಚ್ಚು ಔಷಧ ಅಂಗಡಿಗಳ ಮೂಲಕ ಜ್ವರಕ್ಕೆ ಸಂಬಂಧಪಟ್ಟ ಪ್ಯಾರಾಸಿಟಮಲ್ ಮಾತ್ರೆ ಮಾರಾಟ, ಜ್ವರದಿಂದ ಬಳಲುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಆಯಾ ವೈದ್ಯಾಧಿಕಾರಿಗಳು ನೀಡುವ ಪ್ರಿಸ್ಕ್ರೀಪ್ಷನ್, ರೋಗಿಯ ಹೆಸರು, ಮೊಬೈಲ್ ಸಂಖ್ಯೆಯುಳ್ಳ ಸಮಗ್ರ ಮಾಹಿತಿಯನ್ನು ದಾಖಲೀಕರಣಗೊಳಿಸುವುದರ ಜೊತೆಗೆ ಔಷಧ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತರುವಂತೆ ಸಲಹೆ ನೀಡಿದ್ದಾರೆ.

    ಕರೊನಾ ವೈರಸ್ ಹರಡುವಿಕೆಯ ಮುಖ್ಯ ಲಕ್ಷಣಗಳಾಗಿರುವ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಗಳ ಬಗ್ಗೆ ತೀವ್ರ ನಿಗಾ ಇಡುವ ಅವಶ್ಯಕತೆ ಇದೆ. ಒಂದು ವೇಳೆ ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ ಅಂತಹವರ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಗಳನ್ನು ಗುರುತಿಸಲು ನೆರವಾಗುವ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದು, ಆಯಾ ಮೆಡಿಕಲ್ ಶಾಪ್ ಮಾಲೀಕರು ನಿರ್ಲಕ್ಷವಹಿಸದೆ ಸೂಕ್ತ ಮಾಹಿತಿ ಇಟ್ಟುಕೊಳ್ಳಬೇಕು ಎಂದರು.

    ಗರ್ಭೀಣಿಯರಿಗಾಗಿ ವಾಹನ ವ್ಯವಸ್ಥೆ

    ಗರ್ಭೀಣಿಯರಿಗಾಗಿ ಜಿಲ್ಲಾ ಕೇಂದ್ರ ಮತ್ತು ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ತಲಾ ಒಂದರಂತೆ ‘ನಗು-ಮಗು’ ವಾಹನದ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸಬೇಕು, ಇದರಿಂದ ಗರ್ಭೀಣಿಯರಿಗೆ ಆಸ್ಪತ್ರೆಗೆ ಬರಲು ಅನುಕೂಲವಾಗುವುದರ ಜೊತೆಗೆ ವಾಪಸ್ ತೆರಳಲು ಕೂಡ ಸಹಕಾರಿಯಾಗಲಿದೆ. ಇದಕ್ಕೆ ಬೇಕಾದ ಅನುದಾನ ಮತ್ತು ಇಂಧನ ವೆಚ್ಚದ ಸೌಲಭ್ಯವನ್ನು ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

    ಪಡಿತರ ವಿತರಣೆ

    ಜಿಲ್ಲಾದ್ಯಂತ ನ್ಯಾಯಬೆಲೆ ಅಂಗಡಿಗಳ ಮೂಲಕ ಶೇ.100ರಷ್ಟು ಪಡಿತರ ಧಾನ್ಯ ತಕ್ಷಣ ವಿತರಣೆಯಾಗಬೇಕು. ವಿಶೇಷವಾಗಿ ವಿಜಯಪುರ ನಗರ ಮತ್ತು ಅತಿ ಕಡಿಮೆ ಸಾಧನೆ ತೋರಿರುವ ನ್ಯಾಯಬೆಲೆ ಅಂಗಡಿಗಳ ಬಗ್ಗೆ ಪರಿಶೀಲಿಸಿ ಆದ್ಯತೆ ಮೇಲೆ ಸಾಮಾಜಿಕ ಅಂತರ ನಿಯಮ ಪಾಲನೆಯೊಂದಿಗೆ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ಉಪವಿಭಾಗಾಧಿಕಾರಿಗಳು ಈ ಕುರಿತು ತೀವ್ರ ನಿಗಾ ಇಡಬೇಕು. ಗಂಭೀರ ಸ್ವರೂಪದ ದೂರುಗಳನ್ನು ಆಯಾ ತಹಸೀಲ್ದಾರ್‌ರು ಖುದ್ದಾಗಿ ನಿರ್ವಹಿಸಿ ಸಾರ್ವಜನಿಕರಿಗೆ ನೆರವಾಗುವಂತೆ ಸೂಚಿಸಿದ ಅವರು, ಕೇಂದ್ರ ಸರ್ಕಾರದಿಂದ ಜಾರಿಯಲ್ಲಿರುವ ಜನಧನ ಹಾಗೂ ಪ್ರಧಾನಮಂತ್ರಿ ಕಿಸಾನ್‌ಸಮ್ಮಾನ ಯೋಜನೆಯಡಿ ಲಾನುಭವಿಗಳಿಗೆ ಮಾಸಿಕ ಸಹಾಯ ಧನ ಸಾಮಾಜಿಕ ಅಂತರ ಮತ್ತು ಪಾರದರ್ಶಕವಾಗಿ ಹೆಚ್ಚಿನ ಕೌಂಟರ್‌ಗಳ ಸ್ಥಾಪನೆ ಮೂಲಕ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
    ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಜಿಲ್ಲಾದ್ಯಂತ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮಲೇರಿಯಾ ಸರ್ವೇಕ್ಷಣಾಧಿಕಾರಿಗಳು ಸರ್ಕಾರದ ನಿರ್ದೇಶನದ ಅನ್ವಯ ಯಾವುದೇ ದೂರುಗಳಿಗೆ ಅವಕಾಶ ನೀಡದೆ ದೈನಂದಿನ ಕೆಲಸಗಳನ್ನು ನಡೆಸಬೇಕೆಂದರು. ಸರ್ವೇಕ್ಷಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

    ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಡಿಎಚ್‌ಒ ಡಾ. ಮಹೇಂದ್ರ ಕಾಪಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಡಾ. ಧಾರವಾಡಕರ, ಡಾ. ಲಕ್ಕಣ್ಣವರ್, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಮತ್ತಿತರರಿದ್ದರು.

    ಶನಿವಾರ ಮಧ್ಯಾಹ್ನದವರೆಗೆ 451 ಜನ ವಿದೇಶ ಮತ್ತು ಇತರ ಕಡೆಯಿಂದ ಬಂದ ಬಗ್ಗೆ ವರದಿಯಾಗಿದೆ. 258 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 138 ಜನರು 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 55 ಜನರು ಗೃಹ ಬಂಧನದಲ್ಲಿದ್ದಾರೆ. 32 ಜನರನ್ನು ಸರ್ಕಾರಿ ಐಸೋಲೇಷನ್‌ದಲ್ಲಿದ್ದು, ಈವರೆಗೆ ಕಳುಹಿಸಲಾದ 92 ಜನರ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿಯಲ್ಲಿ 65 ಜನರ ವರದಿ ನೆಗೆಟಿವ್ ಬಂದಿದೆ. 27 ಜನರ ವರದಿ ಇನ್ನೂ ಬರಬೇಕಿದೆ.
    ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ

    ಸೇವಾ ನಿರತ ಸಿಬ್ಬಂದಿಗೆ ಔಷಧ ಪೂರೈಕೆ
    ಸೇವಾ ನಿರತ ಸಿಬ್ಬಂದಿಗೆ ಔಷಧ ಪೂರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts