More

    ಅನ್ಯ ಜಿಲ್ಲೆಗಳಿಂದ ಬಂದವರ ಮೇಲೂ ನಿಗಾ

    ವಿಜಯಪುರ: ಹೆಚ್ಚುತ್ತಿರುವ ಕರೊನಾ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆಯನ್ನಿರಿಸಿರುವ ಜಿಲ್ಲಾಡಳಿತ ಇದೀಗ ಅನ್ಯ ಜಿಲ್ಲೆಗಳಿಂದ ಆಗಮಿಸಿದವರನ್ನೂ ಗೃಹಬಂಧನಕ್ಕೆ ಇರಿಸಲು ಮುಂದಾಗಿದ್ದು, ರಾಜ್ಯದಲ್ಲೇ ಮಾದರಿಯಾದ ನಿರ್ಧಾರ ಕೈಗೊಂಡಿದೆ.
    ಈಗಾಗಲೇ ವಿದೇಶದಿಂದ ಆಗಮಿಸಿದವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಮುಂದುವರಿದು ಅನ್ಯ ರಾಜ್ಯಗಳಿಂದ ಹಾಗೂ ಜಿಲ್ಲೆಗಳಿಂದ ಆಗಮಿಸಿದವರನ್ನೂ ಗೃಹಬಂಧನಕ್ಕೆ ಒಳಪಡಿಸಲು ಮುಂದಾಗಿದೆ. ರಾಜ್ಯದ ಅಂದಾಜು 10 ಜಿಲ್ಲೆಗಳಲ್ಲಿ ಕರೊನಾ ಸೋಂಕಿತ ಪ್ರಕರಣಗಳು ಕಂಡು ಬಂದಿವೆ. . ಅಂಥ ಜಿಲ್ಲೆಗಳಿಂದ ಬಂದವರು ಗೃಹಬಂಧನದಲ್ಲಿರುವುದು ಕಡ್ಡಾಯವೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
    ಶನಿವಾರ ಮಧ್ಯಾಹ್ನದವರೆಗೆ 329 ಜನರು ವಿದೇಶದಿಂದ ಬಂದಿರುವ ಬಗ್ಗೆ ವರದಿಯಾಗಿದೆ. 41 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 186 ಜನ 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 102 ಜನ ಗೃಹಬಂಧನದಲ್ಲಿದ್ದಾರೆ. ಈವರೆಗೆ ಕಳುಹಿಸಿದ 10 ಪರೀಕ್ಷಾ ವರದಿ ಪೈಕಿ 8 ನೆಗೆಟಿವ್ ಬಂದಿದೆ. ಇನ್ನೆರಡು ವರದಿಗಾಗಿ ಕಾಯುತ್ತಿರುವುದಾಗಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರಿಗೆ ಅವರು ವಿವರಿಸಿದರು.

    ಇಡೀ ತಾಂಡಾ ಬಂಧನದಲ್ಲಿ

    ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಇನ್ನೊಂದು ಪರಿಣಾಮಕಾರಿಯಾದ ನಿರ್ಣಯ ಕೈಗೊಂಡಿದ್ದು, ಮಹಾರಾಷ್ಟ್ರ, ಕೇರಳ, ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳಿಂದ ಮತ್ತು ರಾಜ್ಯದ 11 ಜಿಲ್ಲೆಗಳಾದ ಬೆಂಗಳೂರು ನಗರ, ಗ್ರಾಮೀಣ, ಮಂಗಳೂರು, ಮೈಸೂರು, ದಾವಣಗೆರೆ, ಧಾರವಾಡ, ತುಮಕೂರು, ಚಿಕ್ಕಬಳ್ಳಾಪುರ, ಕಲಬುರಗಿ, ಕಾರವಾರ, ಉಡುಪಿ, ಕೊಡಗು ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದವರನ್ನು ಗುರುತಿಸಿ ಗೃಹಬಂಧನದಲ್ಲಿರಿಸಲಾಗುವುದು.
    ಜಿಲ್ಲೆಯ ಪ್ರತಿ ಗ್ರಾಮ ಮತ್ತು ತಾಂಡಾಗಳಿಗೆ ಮರಳಿರುವ ಜನರನ್ನು ಗುರುತಿಸಿ ತಪಾಸಣೆಗೆ ಒಳಪಡಿಸಲು ಈಗಾಗಲೇ ಆರೋಗ್ಯ ಇಲಾಖೆ ಮತ್ತು ಇತರ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅನ್ಯ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದವರ ಮನೆಗೆ ಪೋಸ್ಟರ್ ಅಂಟಿಸಲಾಗುವುದು. ಮತ್ತು ಅವರ ಕೈಗೂ ಸ್ಟಾೃಂಪ್ ಹಾಕಲಾಗುವುದು. ಅವಶ್ಯಕ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇಡೀ ತಾಂಡಾವನ್ನು ಬಂಧನದಲ್ಲಿರಿಸಿ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಪೂರೈಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸವಾಲಾದ ಕಾರ್ಮಿಕರು

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ರಾಷ್ಟ್ರಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, ಇರುವ ಸ್ಥಳಗಳಲ್ಲಿಯೇ ಇರುವಂತೆ ಜನರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಲಾಕ್‌ಡೌನ್ ಬಳಿಕ ರಾಷ್ಟ್ರದ ವಿವಿಧ ಭಾಗಗಳಿಂದ ಜಿಲ್ಲೆಗೆ ಆಗಮಿಸಿರುವ ಅಸಂಘಟಿತ ಅಂದಾಜು 1500 ಕಾರ್ಮಿಕರು ಇಂಡಿ ತಾಲೂಕಿನಲ್ಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಎಲ್ಲ ನಿರಾಶ್ರಿತ ಕಾರ್ಮಿಕರಿಗೆ 40 ಎಕರೆ ವಿಸ್ತಾರವುಳ್ಳ ಪ್ರದೇಶದಲ್ಲಿ ಸಾಧಕ-ಬಾಧಕಗಳನ್ನು ಅವಲೋಕಿಸಿ ವಸತಿಗೆ ಸೌಲಭ್ಯ ಕಲ್ಪಿಸಲು ಸಮಾಜಕ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳನ್ನು ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಈ ಎಲ್ಲ ನಿರಾಶ್ರಿತರನ್ನು ವಸತಿ ವಲಯಕ್ಕೆ ಸ್ಥಳಾಂತರಿಸಲು ಬಸ್‌ಗಳ ವ್ಯವಸ್ಥೆ, ವಸತಿ ಸಂದರ್ಭದಲ್ಲಿ ಆರೋಗ್ಯ ಚಿಕಿತ್ಸೆ, ಊಟ-ಉಪಾಹಾರ, ಕುಡಿಯುವ ನೀರು ಸೇರಿದಂತೆ ಅವಶ್ಯಕ ಸಾಮಗ್ರಿಗಳ ವ್ಯವಸ್ಥೆಯನ್ನು ಕೂಡ ಜಿಲ್ಲಾಡಳಿತ ಮೂಲಕ ಮಾಡಲಾಗುತ್ತಿದ್ದು, ಜಿಲ್ಲೆಯ ಅಥವಾ ಗಡಿ ತಾಲೂಕಿನ ಹೊರವಲಯದಲ್ಲಿ ವ್ಯವಸ್ಥೆ ಕಲ್ಪಿಸಿ ಜಿಲ್ಲೆಯ ನಾಗರಿಕರಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ದಿನಸಿ-ತರಕಾರಿಗೆ ತೊಂದರೆಯಿಲ್ಲ

    ಜಿಲ್ಲಾದ್ಯಂತ ಸಾಮಾಜಿಕ ಅಂತರದೊಂದಿಗೆ ದಿನಸಿ ಅಂಗಡಿಗಳು, ತರಕಾರಿ ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚು-ಹೆಚ್ಚು ತಳ್ಳುವ ಗಾಡಿಗಳಿಗೆ ಅನುಮತಿ ಸಹ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ನೆರವಾಗಲು ತೋಟಗಾರಿಕೆ ಇಲಾಖೆ ಹಾಗೂ ಹಾಪ್‌ಕಾಮ್ಸ್ ಮೂಲಕ ಹೆಚ್ಚುವರಿ ನಾಲ್ಕು ವಾಹನಗಳಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಹಾಗೂ ಜಿಲ್ಲೆಯ ರೈತರಿಂದ ನೇರವಾಗಿ ಸಾರ್ವಜನಿಕರಿಗೆ ತರಕಾರಿ ಮಾರಾಟ ಮಾಡಲು ಸಹ ವಿಶೇಷ ಅವಕಾಶ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಜಾರಿಯಿರುವ ಅಗತ್ಯ ವಸ್ತುಗಳ ಮಾರಾಟ ಕುರಿತು ತಾವು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದಾಗಿ ಪರಿಶೀಲನೆ ಮಾಡುತ್ತಿದ್ದು, ಗ್ರಾಹಕರು ಹಾಗೂ ಮಾರಾಟಗಾರರು ಸಂಯಮದಿಂದ ಇದ್ದು ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
    ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿವೈಎಸ್‌ಪಿ ಲಕ್ಷ್ಮಿನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪಸೆ, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶರಣಪ್ಪ ಕಟ್ಟಿ ಮತ್ತಿತರರಿದ್ದರು.

    ವಿವಿಧ ಗ್ರಾಮ ಮತ್ತು ತಾಂಡಾಗಳಲ್ಲಿ ಗೃಹಬಂಧನ ಆಗುವವರ ಮತ್ತು ಕರೊನಾ ನಿಯಂತ್ರಣ ಚಟುವಟಿಕೆ ಕೈಗೊಳ್ಳಲು ಈಗಾಗಲೇ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಆರೋಗ್ಯ, ಕಂದಾಯ ಇಲಾಖೆ, ಪಿಡಿಒ, ಪೊಲೀಸ್ ಅಧಿಕಾರಿಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಹಾಗೂ ಗ್ರಾಮ ಸೇವಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಸಹ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
    ಗೋವಿಂದ ರೆಡ್ಡಿ, ಜಿಪಂ ಸಿಇಒ

    ಅನ್ಯ ಜಿಲ್ಲೆಗಳಿಂದ ಬಂದವರ ಮೇಲೂ ನಿಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts