More

    ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಿ

    ವಿಜಯಪುರ: ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರ ತಪಾಸಣೆಗೆ ಜಿಲ್ಲೆಯ ಗಡಿಭಾಗವಾದ ಧೂಳಖೇಡ, ನಿಡಗುಂದಿಗಳ ಚೆಕ್‌ಪೋಸ್ಟ್‌ಗಳಲ್ಲಿ ಅವಶ್ಯಕ ಸಿಬ್ಬಂದಿಯೊಂದಿಗೆ ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಗೆ ಸುಮಾರು 56 ಸಾವಿರ ಜನರು ಆಗಮಿಸಲು ಸೇವಾ ಸಿಂಧು ಆಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಇತರ ಕಡೆಯಿಂದ ಆಗಮಿಸುವ ಪ್ರಯಾಣಿಕರ ತಪಾಸಣೆಗೆ ಧೂಳಖೇಡ ಚೆಕ್‌ಪೋಸ್ಟ್‌ದಲ್ಲಿ ಮತ್ತು ಗೋವಾ, ತಮಿಳನಾಡು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸುವ ಪ್ರಯಾಣಿಕರ ತಪಾಸಣೆಗೆ ನಿಡಗುಂದಿ ಚೆಕ್‌ಪೋಸ್ಟ್‌ದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಮತ್ತು ಅವಶ್ಯಕ ತಪಾಸಣಾ ಸಾಮಗ್ರಿಗಳೊಂದಿಗೆ ಸಿದ್ದವಾಗಿರುವಂತೆ ತಿಳಿಸಿದರು.

    ಸಕಲ ಸಿದ್ಧತೆ

    ಅಂತರ್‌ರಾಜ್ಯಗಳಿಂದ ಬರುವ ಪ್ರಯಾಣಿಕರ ಇ-ಪಾಸ್‌ಗಳ ಖಚಿತತೆ ಬಗ್ಗೆ ಪರಿಶೀಲಿಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಪ್ರಯಾಣಿಕರ ಆರೋಗ್ಯ ತಪಾಸಣೆಗೆ ವೈದ್ಯರೊಬ್ಬರ ಜೊತೆಗೆ ಸಿಬ್ಬಂದಿ ನಿಯೋಜಿಸಬೇಕು. ವಿವಿಧ ಜಿಲ್ಲೆಗಳ ಪ್ರಯಾಣಿಕರ ಪರಿಶೀಲನೆಗೆ 8 ಕ್ಕೂ ಹೆಚ್ಚು ಕೌಂಟರ್‌ಗಳನ್ನು ಸ್ಥಾಪಿಸಬೇಕು. ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಬೇಕು. ಅವಶ್ಯಕ ಕಂಪ್ಯೂಟರ್, ಲ್ಯಾಪ್‌ಟಾಪ್, ಪ್ರಿಂಟರ್, ಅರ್ಜಿನಮೂನೆ ಭರ್ತಿ ಮಾಡಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಕರ ನಿಯೋಜನೆ, ಡೆಟಾ ಎಂಟ್ರಿ ಆಪರೇಟರ್‌ಗಳ ನಿಯೋಜನೆ, ಪ್ರಯಾಣಿಕರಿಗೆ ಆರೋಗ್ಯ ತಪಾಸಣೆಗಾಗಿ ಥರ್ಮಲ್ ಸ್ಕಾೃನರ್‌ದೊಂದಿಗೆ ಸಿಬ್ಬಂದಿ ನಿಯೋಜನೆ, ಆಕ್ಸಿಮೀಟರ್ ವ್ಯವಸ್ಥೆ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸ್ಪೀಕರ್ ಅನೌನ್ಸ್‌ಮೆಂಟ್ ವ್ಯವಸ್ಥೆ, ಪ್ರಯಾಣಿಕರ ದಾಖಲಿಕರಣ ವ್ಯವಸ್ಥೆ ದಿನದ 24 ಗಂಟೆಗಳ ಕಾಲ ಕೈಗೊಳ್ಳಬೇಕು. ಅವಶ್ಯಕ ಬಸ್‌ಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಸರ್ಕಾರದ ನಿರ್ದೇಶನದಂತೆ ಈ ಏಕಪ್ರವೇಶ, ಏಕನಿರ್ಗಮನ ವ್ಯವಸ್ಥೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅವರು ತಿಳಿಸಿದರು.

    ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿ

    ಇಂಡಿ ಮತ್ತು ವಿಜಯಪುರ ಉಪ ವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗುತ್ತಿದ್ದು, ಆಯಾ ತಹಸೀಲ್ದಾರ್‌ರು ಕೇಂದ್ರ ಸ್ಥಾನದಲ್ಲಿದ್ದು ನಿಗದಿತ ಕ್ರಮಗಳನ್ನು ಕೈಗೊಳ್ಳಬೇಕು. ಚೆಕ್‌ಪೋಸ್ಟ್‌ಗೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ ತಪ್ಪದೇ ಸೀಲ್ ಹಾಕಬೇಕು. ಗ್ರಾಮಾಂತರ ಪ್ರದೇಶದವರನ್ನು ಸಮೀಪದ ಶಾಲೆ ಅಥವಾ ವಸತಿ ಶಾಲೆಗಳಲ್ಲಿ ಅವಶ್ಯಕ ಮೂಲ ಸೌಕರ್ಯಗಳೊಂದಿಗೆ ಸಾಂಸ್ಥಿಕ ಕ್ವಾರಂಟೈನ್‌ಗೊಳಿಸಬೇಕು. ನಗರ ಪ್ರದೇಶದವರನ್ನು ಹೋಮ್‌ಕ್ವಾರಂಟೈನ್‌ಗೊಳಿಸಬೇಕು. ಕರೊನಾ ಲಕ್ಷಣವುಳ್ಳವರನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ಸೂಚಿಸಿದರು.

    ಪ್ರಯಾಣಿಕರ ಮೇಲೆ ಕಣ್ಗಾವಲು

    ಕರೊನಾ ಲಕ್ಷಣ ಇಲ್ಲದ ದ್ವಿತೀಯವರ್ಗದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡುವುದರ ಜೊತೆಗೆ 12ನೇ ದಿನದಂದು ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಬೇಕು. ತೃತೀಯ ವರ್ಗದ ಪ್ರಯಾಣಿಕರನ್ನು ಹೋಮ್‌ಕ್ವಾರಂಟೈನ್‌ಗೊಳಿಸುವುದರ ಜೊತೆಗೆ ನೆರೆಹೊರೆಯವರನ್ನು ಕಣ್ಗಾವಲು ಇಡುವ ಬಗ್ಗೆ ನೋಟಿಸ್ ಜಾರಿಗೊಳಿಸಬೇಕು. ಜಿಲ್ಲೆಯಿಂದ ಅಂತರ್‌ಜಿಲ್ಲೆಗೆ ಪ್ರಯಾಣ ಬೆಳೆಸುವವರಿಗೆ ಸೇವಾ ಸಿಂಧುದಲ್ಲಿ ಕಡ್ಡಾಯ ನೋಂದಣಿಯ ಜೊತೆಗೆ ಪ್ರತಿ ಬಸ್‌ಗಳಲ್ಲಿ ನೋಡಲ್ ಸಿಬ್ಬಂದಿಯೊಂದಿಗೆ ಮಧ್ಯದಲ್ಲಿ ಎಲ್ಲಿಯೂ ನಿಲ್ಲದೆ ಮುಖ್ಯ ಸ್ಥಳಕ್ಕೆ ತಲುಪಿಸಬೇಕು ಎಂದು ಅವರು ಸೂಚಿಸಿದರು.

    ಖಾಸಗಿ ವಾಹನದಿಂದ ಅಂತರ್‌ರಾಜ್ಯ ಪ್ರಯಾಣಕ್ಕೆ ಹೋಗುವವರಿಗೆ ಇ-ಪಾಸ್ ಆಧಾರದ ಮೇಲೆ ಚೆಕ್‌ಪೋಸ್ಟ್‌ದಲ್ಲಿ ಅನುಮತಿ ಕಲ್ಪಿಸಬೇಕು. ಗ್ರಾಮಾಂತರ ಪ್ರದೇಶಕ್ಕೆ ಆಗಮಿಸುವ ಪ್ರಯಾಣಿಕರಿಗೆ ಆಯಾ ಗ್ರಾಪಂ ಪಿಡಿಒಗಳ ಮೂಲಕ ಶಾಲೆಯಲ್ಲಿ ಅವಶ್ಯಕ ಮೂಲ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು ಎಂದು ಸೂಚಿಸಿದರು.

    ಜಿಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಸ್ನೆಹಲ್ ಲೊಖಂಡೆ, ವಿಜಯಪುರ ತಹಸೀಲ್ದಾರ್ ಮೋಹನಕುಮಾರಿ, ಜಿಲ್ಲಾ ಆರೋಗ್ಯಾಧಿಕಾರಿ ಮಹೇಂದ್ರ ಕಾಪ್ಸೆ ಮತ್ತಿತರರಿದ್ದರು.

    ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts