More

    ಸರ್ಕಾರಿ-ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಸ್ಪಂದಿಸಲಿ

    ವಿಜಯಪುರ: ಕರೊನಾ ಮಹಾಮಾರಿ ಸಂದರ್ಭದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ರೋಗಿಗಳ ಜತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಸಾಮಾನ್ಯ ಜನ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಆಸ್ಪತ್ರೆಗಳ ಸುಧಾರಣೆಯತ್ತ ಜಿಲ್ಲಾಡಳಿತ ಗಮನ ಹರಿಸಬೇಕೆಂದು ಪ್ರಗತಿಪರ ಸಂಘಟನೆಗಳ ವೇದಿಕೆ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
    ಕರೊನಾ ಮಹಾಮಾರಿ ದಿನೇ ದಿನೆ ಹೆಚ್ಚುತ್ತಿದೆ. ಆದರೆ, ಇಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಬಡಪಾಯಿಗಳು. ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಿದರೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಗಮನಾರ್ಹ ಸಂಗತಿ ಎಂದರೆ ಕೋವಿಡ್ ಸೆಂಟರ್‌ಗಳೇ ಸಮಸ್ಯೆಗಳ ಆಗರವಾಗಿವೆ. ವಿದ್ಯುತ್, ಕುಡಿಯುವ ನೀರು, ಪೌಷ್ಟಿಕ ಆಹಾರದ ಅಭಾವ ಕಾಡುತ್ತಿದೆ. ಸಕಾಲಕ್ಕೆ ಔಷಧೋಪಚಾರ ಸಿಗದೆ ಜನ ಖಾಸಗಿ ಆಸ್ಪತ್ರೆಯತ್ತ ಮುಖಮಾಡಿದರೆ ಅಲ್ಲೂ ಸುಲಿಗೆ ಹೆಚ್ಚಾಗಿದೆ. ರೋಗಿಯೊಬ್ಬನಿಗೆ ಕನಿಷ್ಠ 8 ಸಾವಿರದಿಂದ 10ಲಕ್ಷಕ್ಕೂ ಅಧಿಕ ಬಿಲ್ ಮಾಡುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರು ಇನ್ನಿಲ್ಲದ ನರಕಯಾತನೆ ಅನುಭವಿಸುವಂತಾಗಿದೆ ಎಂದು ವೇದಿಕೆ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದರು.
    ಬಡವರು ಸೋಂಕಿಗೆ ಒಳಗಾದರೆ ಹೋಂ ಕ್ವಾರಂಟೈನ್ ಆಗುವುದು ಕಷ್ಟ. ಅವಿಭಕ್ತ ಕುಟುಂಬವಿದ್ದರಂತೂ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಸರ್ಕಾರ ಅಂಥ ಕುಟುಂಬಗಳಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರಾದರೂ ಈವರೆಗೂ ಯಾರೂ ಅಂಥ ಕಾರ್ಯ ಕೈಗೊಂಡಿಲ್ಲ ಎಂದರು.

    ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಿ

    ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ದರ ನಿಗದಿಪಡಿಸಿದರೂ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ನಿಯಮ ಪಾಲನೆಯಾಗುತ್ತಿಲ್ಲ. ಆಯುಷ್ಮಾನ್ ಭಾರತ, ಬಿಪಿಎಲ್ ಮತ್ತು ಯಶಸ್ವಿನಿ ಕಾರ್ಡ್‌ಗಳು ಕರೊನಾ ರೋಗಿಗಳಿಗೆ ಅನ್ವಯವಾಗುತ್ತಿಲ್ಲ. ಆದ್ದರಿಂದ ಜನರು ಸರ್ಕಾರಿ ಆಸ್ಪತ್ರೆಯ ಸಹವಾಸವೇ ಬೇಡವೆನ್ನುತ್ತಿದ್ದಾರೆ. ಇದರಿಂದ ಚಿಕಿತ್ಸೆ ತೆಗೆದುಕೊಳ್ಳದೆ ರೋಗಿ ಸಾವನ್ನಪ್ಪುತ್ತಿದ್ದಾರೆಂದು ವೇದಿಕೆ ಪದಾಧಿಕಾರಿಗಳು ತಿಳಿಸಿದರು.
    ಜಿಲ್ಲಾಧ್ಯಕ್ಷ ಭೀಮಶಿ ಕಲಾದಗಿ, ಬಿ.ಭಗವಾನ ರೆಡ್ಡಿ, ಅಕ್ರಂ ಮಾಶ್ಯಾಳಕರ. ಇರ್ಫಾನ್ ಶೇಖ್, ಸಿದ್ದಲಿಂಗ ಬಾಗೇವಾಡಿ, ದಾನಪ್ಪ ಸೋರಗೊಂಡ, ಪ್ರಭುಗೌಡ ಪಾಟೀಲ, ಸುರೇಶ ಬಿಜಾಪುರ, ದಸ್ತಗಿರ ಉಕ್ಕಲಿ, ದಾನಯ್ಯ ಮಠ, ಸದಾನಂದ ಮೋದಿ, ಪರಶುರಾಮ ಗೋಟೂರ ಮತ್ತಿತರರಿದ್ದರು.

    ಹಕ್ಕೊತ್ತಾಯಗಳು

    • ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಹೆಚ್ಚಿನ ಮೂಲ ಸೌಲಭ್ಯಗಳನ್ನು ಒದಗಿಸಬೇಕು.
    • ಸರ್ಕಾರಿ ಕಾರ್ಯಕ್ರಮಗಳಾದ ಆಯುಷ್ಮಾನ್ ಭಾರತ, ಬಿಪಿಎಲ್ ಮತ್ತು ಯಶಸ್ವಿನಿ ಕಾರ್ಡ್‌ಗಳ ವ್ಯವಸ್ಥೆಗಳನ್ನು ವಿಶೇಷವಾಗಿ ಕರೊನಾ ರೋಗಿಗಳಗೋಸ್ಕರ ಮುಂದುವರಿಸಬೇಕು.
    • ಕರೊನಾದಿಂದ ಮೃತಪಟ್ಟ ವ್ಯಕ್ತಿಗಳ ಶವವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರ ಸಮಯದಲ್ಲಿ ನಡೆಯುವಂಥ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಸಂಪ್ರದಾಯದಂತೆ ಶವ ಸಂಸ್ಕಾರ ನಡೆಸಲು ಅವಕಾಶ ನೀಡಬೇಕು.
    ಸರ್ಕಾರಿ-ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಸ್ಪಂದಿಸಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts