More

    ದ್ವಿಶತಕ ಬಾರಿಸಿದ ಓಂಕಾರ

    ವಿಜಯಪುರ: ಅಂಡರ್-14 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೇವಲ 117 ಎಸೆತದಲ್ಲಿ 31 ಬೌಂಡರಿಗಳೊಂದಿಗೆ ದ್ವಿಶತಕ (203) ಸಾಧನೆ ಮೆರೆಯುವ ಮೂಲಕ ಬಿಸಿಲೂರಿನ ಬಾಲಕ ಅರಕೇರಿಯ ಓಂಕಾರ ಭಂಡಾರಿ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದಾನೆ.

    ಇಲ್ಲಿನ ಬಿಎಲ್‌ಡಿಇ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಕ್ರಿಕೆಟ್ ಕ್ಲಬ್ ವತಿಯಿಂದ ಅಂಡರ್-14ನ ಪಂದ್ಯಾವಳಿ ಆಯೋಜಿಸಲಾಗಿತ್ತು. ಮೂರು ದಿನ ನಡೆದ ಪಂದ್ಯಾವಳಿಯ ಅಂತಿಮ ಪಂದ್ಯ ಬುಲ್ಸ್ ರಿಂಗ್ ಕ್ರಿಕೆಟ್ ಅಕಾಡೆಮಿ ಹಾಗೂ ಕೆಸಿಸಿ ಕ್ಲಬ್ ಮಧ್ಯೆ ಗುರುವಾರ ನಡೆಯಿತು.

    ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಕೆಸಿಸಿ ನಿಗದಿತ 30 ಓವರ್‌ಗಳಲ್ಲಿ 293 ರನ್ ಪೇರಿಸಿತು. ಇದರಲ್ಲಿ ಓಂಕಾರ ಒಬ್ಬನೇ 203 ರನ್ ಗಳಿಸಿದ್ದು ವಿಶೇಷ. ನಿಖಿಲ 7 ಹಾಗೂ ಯಶ್ ಪೋರವಾಲ್ 43 ರನ್ ಗಳಿಸಿದರೆ ಓಂಕಾರ್ ಹಾಗೂ ಯಶ್ ಜತೆಯಾಟದಲ್ಲಿ 170 ಬಂದವು. ಬಳಿಕ ಬುಲ್ಸ್ ರಿಂಗ್ ಕ್ರಿಕೆಟ್ ಅಕಾಡೆಮಿಯನ್ನು 7 ವಿಕೆಟ್‌ಗೆ 248 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಕೆಸಿಸಿ ಸಫಲವಾಯಿತು. ಆ ಮೂಲಕ 45 ರನ್‌ಗಳ ಅಂತರದಿಂದ ಭರ್ಜರಿ ಜಯಪಡೆಯಿತು. ಕೆಸಿಸಿ ತಂಡದ ಓಂಕಾರ ಭಂಡಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

    ಭಂಡಾರಿಯ ಆಲ್‌ರೌಂಡ್ ಆಟ
    ಎಡಗೈ ಬ್ಯಾಟ್ಸ್‌ಮನ್ ಆಗಿರುವ ಓಂಕಾರ ಭಂಡಾರಿ ಆಕರ್ಷಕ ಬ್ಯಾಟಿಂಗ್ ಮಾಡಿದ್ದಲ್ಲದೆ, ಬೌಲಿಂಗ್‌ನಲ್ಲೂ ಸೈ ಎನ್ನಿಸಿಕೊಂಡ. ಸದರಿ ಟೂರ್ನಾಮೆಂಟ್‌ನಲ್ಲಿ ಓಂಕಾರ ಒಟ್ಟು 10 ವಿಕೆಟ್ ಪಡೆದು ಆಲ್‌ರೌಂಡ್ ಆಟ ಪ್ರದರ್ಶಿಸಿದ್ದಾನೆ. ರಾಯಚೂರು ವಲಯದಿಂದ ಕಳೆದ ವರ್ಷ 14 ವರ್ಷದೊಳಗಿನ ತಂಡಕ್ಕೆ ಓಂಕಾರ ಆಯ್ಕೆಯಾಗಿದ್ದ. ಹುಬ್ಬಳ್ಳಿಯಲ್ಲಿ ನಡೆದ ಪಂದ್ಯಾವಳಿಯಲ್ಲೂ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಓಂಕಾರನ ಆಟಕ್ಕೆ ಕೆಸಿಸಿ ಕ್ಲಬ್ ಸದಸ್ಯರಾದ ಬಸವರಾಜ ಹೊದ್ಲೂರ, ಶಫೀಕ ಅತ್ತಾರ, ಮಹೇಶ ಭಟ್ಟಿ, ಅಮಿತ ಬೂದಿ, ನಹೀಂ ಇಂಡಿಕರ ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಓಂಕಾರ ಭರವಸೆಯ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ವೇಗದ ಬಾಲ್‌ಗಳಿಗೆ ಎದೆಗುಂದದೆ ನಿರ್ಭಯವಾಗಿ ಆಡುವ ಆತನ ಆಟದ ಶೈಲಿ ಯುವರಾಜ್ ಸಿಂಗ್ ಮತ್ತು ಬ್ರಿಯಾನ್ ಲಾರಾ ಅವರನ್ನು ನೆನಪಿಸುತ್ತದೆ.
    ಪ್ರಶಾಂತ ಹಜೇರಿ ಕೆಸಿಸಿ ಕಾರ್ಯದರ್ಶಿ

    ಸ್ಥಳೀಯ ಪದ್ಮಾಂಜಲಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ತಂದೆ ಉದ್ಯಮಿಯಾಗಿದ್ದಾರೆ. ದ್ವಿಶತಕ ಬಾರಿಸಿದ್ದು ಕ್ರಿಕೆಟ್‌ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.
    ಓಂಕಾರ ಭಂಡಾರಿ , ಕ್ರಿಕೆಟ್ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts