More

    ಅಕ್ಕಮಹಾದೇವಿ ವಿವಿ ಹೆಸರಲ್ಲಿ ರಾಜಕೀಯ ಸಲ್ಲ..!

    ವಿಜಯಪುರ: ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹೆಸರಿನಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಹೇಳಿದರು.ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿರುವ ಶ್ರೇಯಸ್ಸು ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಹೇಳಿಕೆ ನೀಡಿರುವುದು ಅತ್ಯಂತ ಹಾಸ್ಯಾಸ್ಪದ. ಅಕ್ಕಮಹಾದೇವಿ ಮಹಿಳಾ ವಿವಿಯಾಗಿ ನಾಮಕರಣ ಮಾಡಿರುವುದು ಕಾಂಗ್ರೆಸ್ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಸಾರಥ್ಯದಲ್ಲಿ ಬೃಹತ್ ಸಮಾರಂಭ ಆಯೋಜನೆ ಮಾಡಿ ನಾಮಕರಣ ಮಾಡಿರುವ ಸಂಗತಿ ಜನತೆಗೆ ಗೊತ್ತಿದೆ. ಈ ಸತ್ಯ ಗೊತ್ತಿದ್ದರೂ ಕಾರಜೋಳರು ಇದು ಬಿಜೆಪಿ ಸರ್ಕಾರದ ಶ್ರೇಯಸ್ಸು ಎಂದು ಹೇಳಿಕೆ ನೀಡಿರುವುದು ಹಾಸ್ಯಸ್ಪದ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    1999ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಿಎಂ ಆಗಿದ್ದ ಸಂದರ್ಭದಲ್ಲಿ ಮಹಿಳಾ ವಿ.ವಿ. ಘೋಷಣೆ ಮಾಡಿದ್ದರು, ನಂತರ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರು ವಿಶ್ವವಿದ್ಯಾಲಯವನ್ನು ಲೋಕಾರ್ಪಣೆ ಮಾಡಿದ್ದರು. ಅಂದಿನ ಉನ್ನತ ಶಿಕ್ಷಣ ಸಚಿವ ಜಿ.ಪರಮೇಶ್ವರ ಮೂಲ ಸೌಕರ್ಯ ಒದಗಿಸಿದರು. ಹೀಗೆ ಮಹಿಳಾ ವಿವಿಗೆ ಅನೇಕ ಕೊಡುಗೆ ನೀಡಿರುವ ಶ್ರೇಯಸ್ಸು ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಹೊರತು ಬಿಜೆಪಿಗೆ ಅಲ್ಲ ಎಂದರು.

    ಮಹಿಳಾ ವಿವಿಗೆ 2016ರಂದು ವಿಶೇಷ ಸಭೆ ನಡೆದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅಕ್ಕ ಮಹಾದೇವಿ ಹೆಸರಿಡಲು ಆಗ್ರಹಿಸಿದ್ದರು. ಆಗ ಎಂ.ಬಿ. ಪಾಟೀಲರು ವಿವಿಗೆ ಅಕ್ಕಮಹಾದೇವಿ ಹೆಸರಿಡುವ ವಾಗ್ದಾನ ಮಾಡಿದ್ದರು. ಸಿದ್ದರಾಮಯ್ಯ ಅವರ ಮನವೊಲಿಸಿ ಒಪ್ಪಿಸಿದರು. ನಂತರ ಗೆಜೆಟ್ ಅಧಿಸೂಚನೆ ಹೊರಡಿಸಲಾಯಿತು. 2017ರಲ್ಲಿ ಮಹಿಳಾ ವಿವಿಗೆ ನಾಡಿನ ಮಠಾಧೀಶರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಅಕ್ಕಮಹಾದೇವಿ ಹೆಸರಿಡಲಾಯಿತು. ಹಿರಿಯರಾದ ಸಚಿವ ಗೋವಿಂದ ಕಾರಜೋಳರು ವಿನಾಕಾರಣ ಕಾಂಗ್ರೆಸ್ ಟೀಕಿಸುವ ಚಟಕ್ಕೆ ಅಂಟಿಕೊಂಡಂತಿದೆ, ನಮ್ಮ ಸಾಧನೆಗೆ ಅವರ ಲೇಬಲ್ ಅಂಟಿಸಿಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

    ವಿಜಯಪುರದಲ್ಲಿ ವಿಮಾನ ನಿಲ್ದಾಣ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಹೊರತು ವಿಮಾನ ನಿಲ್ದಾಣ ಸಹ ನಮ್ಮ ಅವಧಿಯಲ್ಲಿ ಆಗಿದೆ ಎಂದು ನಾವು ಹೇಳುವುದಿಲ್ಲ, ಆ ರೀತಿ ಹೇಳಿದರೆ ಅದು ಮೂರ್ಖತನ ಆಗುತ್ತದೆ. ಆದರೆ ಸಚಿವ ಕಾರಜೋಳರು ವಿನಾಕಾರಣ ಕಾಂಗ್ರೆಸ್ ಟೀಕೆ ಮಾಡುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಡಾ. ಗಂಗಾಧರ ಸಂಬಣ್ಣಿ, ಸುರೇಶ ಗೊಣಸಗಿ, ಸುಭಾಷ ಕಾಲೇಭಾಗ, ತಮ್ಮಣ್ಣ ಮೇಲಿನಕೇರಿ, ವಸಂತ ಹೊನಮೋಡೆ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts