More

    ಗುಮ್ಮಟನಗರಿಯಲ್ಲಿ ಜನ ಜೀವನ ಸಹಜ ಸ್ಥಿತಿಗೆ

    ವಿಜಯಪುರ: ಎಲ್ಲೆಂದರಲ್ಲಿ ವಾಹನಗಳ ಓಡಾಟ, ಬೆಳಗ್ಗೆಯಿಂದಲೇ ತೆರೆದ ಅಂಗಡಿ-ಮುಂಗಟ್ಟುಗಳು, ಬಾರ್‌ಗಳ ಮುಂದೆ ಸರತಿ ಸಾಲು, ಪ್ರಮುಖ ರಸ್ತೆಗಳಲ್ಲಿ ಹೆಚ್ಚಿದ ಜನಸಂದಣಿ….!
    ಲಾಕ್‌ಡೌನ್ ಸಡಿಲಿಕೆಯಾಗಿದ್ದೇ ತಡ ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಸೋಮವಾರ ಬೆಳಗ್ಗೆ ಕಂಡು ಬಂದ ದೃಶ್ಯಗಳಿವು. ಕಿತ್ತಳೆ ವಲಯದಲ್ಲಿ ಕಾಣಿಸಿಕೊಂಡ ಜಿಲ್ಲೆಯಲ್ಲಿ ಇನ್ನೂ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೂ ಅದನ್ನು ಲೆಕ್ಕಿಸದೇ ಜನ ಬೀದಿಗಿಳಿದಿದ್ದು ಕಂಡು ಬಂತು. ಇದನ್ನು ಗಮನಿಸಿದರೆ ಜನ ಈವರೆಗೆ ಕರೊನಾ ಭಯಕ್ಕಿಂತ ಪೊಲೀಸರ ಭಯಕ್ಕಾಗಿ ಮನೆಯಲ್ಲಿದ್ದರೆಂಬುದು ಸಾಬೀತಾಗಲಿದೆ.

    ಸಂಚಾರಿ ದಟ್ಟಣೆ

    ಬೈಕ್ ಮತ್ತು ಕಾರ್‌ಗಳ ಓಡಾಟ ಹೆಚ್ಚಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಕಂಡು ಬಂತು. ಹೀಗಾಗಿ ಕೇಂದ್ರ ಬಸ್ ನಿಲ್ದಾಣ, ಮಹಾತ್ಮ ಬಸವೇಶ್ವರ ವೃತ್ತ, ಗಾಂಧಿ ವೃತ್ತಗಳ ಸಿಗ್ನಲ್‌ಗಳನ್ನು ಕಾರ್ಯಾರಂಭಿಸಲಾಗಿತ್ತು. ಸಂಚಾರಿ ಪೊಲೀಸರು ಎಂದಿನಂತೆ ಕರ್ತವ್ಯ ನಿರತರಾಗಿದ್ದು ಮಾಸ್ಕ್ ಧರಿಸಿ ಓಡಾಡುವಂತೆ ಸೂಚಿಸುತ್ತಿರುವುದು ಕಂಡು ಬಂತು. ನಗರ ಬಸ್ ಸಂಚಾರ ಸ್ಥಗಿತಗೊಂಡಿದ್ದು ಅಲ್ಲೊಂದು ಇಲ್ಲೊಂದು ಆಟೋ ರಸ್ತೆಗಳಿದಿದ್ದು ಗೋಚರಿಸಿತು.

    ಲಾಕ್‌ಡೌನ್ ಅನುಭವ ಮಾಯ

    ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಬಹುತೇಕ ಅಂಗಡಿಗಳು ತೆರೆದಿದ್ದವು. ಬಟ್ಟೆ ಅಂಗಡಿಗಳು, ಕಿರಾಣಿ, ಇಸ್ತ್ರಿ ಅಂಗಡಿ, ಬೇಕರಿ, ಇಲೆಕ್ಟ್ರಾನಿಕ್ಸ್ ಮಳಿಗೆಗಳು, ಪುಸ್ತಕ ಮಳಿಗೆ, ತರಕಾರಿ-ಹಣ್ಣು ಮಾರಾಟ ಮಳಿಗೆ, ಮಾಂಸದ ಮಳಿಗೆಗಳು ಎಂದಿನಂತೆ ವಹಿವಾಟು ನಡೆಸಿದ್ದವು. ಕೆಲವು ಹೋಟೆಲ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆ ಕಲ್ಪಿಸಲಾಗಿತ್ತು.
    ಲಾಲಬಹಾದುದ್ದೂ ಶಾಸ್ತ್ರಿ ಮಾರುಕಟ್ಟೆ ಸ್ಥಗಿತಗೊಂಡಿದ್ದು ಬಿಟ್ಟರೆ ಸರಾಫ್ ಬಜಾರ್, ಕೆಸಿ ಮಾರುಕಟ್ಟೆ, ನವಬಾಗ್ ರಸ್ತೆ, ಸಿದ್ಧೇಶ್ವರ ದೇವಸ್ಥಾನ ರಸ್ತೆ, ಬಾಗಲಕೋಟೆ ರಸ್ತೆ, ರಾಮಮಂದಿರ ರಸ್ತೆ, ಸ್ಯಾಟ್‌ಲೈಟ್ ಬಸ್ ನಿಲ್ದಾಣ, ಇಟಗಿ ಪೆಟ್ರೋಲ್ ಪಂಪ್ ಮುಂತಾದ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.

    ತವರಿಗೆ ಆಗಮಿಸಿದ ಕಾರ್ಮಿಕರು

    ರಾಜಧಾನಿ ಸೇರಿದಂತೆ ವಿವಿಧ ಭಾಗಗಳಿಗೆ ದುಡಿಯಲು ಹೋಗಿದ್ದ ನೂರಾರು ಕಾರ್ಮಿಕರು ಸೋಮವಾರ ತವರಿಗೆ ಆಗಮಿಸಿದರು. ಸರ್ಕಾರದಿಂದ ಕಲ್ಪಿಸಲಾಗಿದ್ದ ಬಸ್ ಸೇವೆಯಿಂದಾಗಿ ಬೆಳಗ್ಗೆಯೇ ಕಾರ್ಮಿಕರು ಕೇಂದ್ರ ಬಸ್ ನಿಲ್ದಾಣ ತಲುಪಿದರು. ಆದರೆ, ಮುಂದೆ ಸ್ವಗ್ರಾಮಕ್ಕೆ ತೆರಳುವುದು ಹೇಗೆಂದು ತಿಳಿಯದೇ ಚಿಂತಾಕ್ರಾಂತರಾಗಿದ್ದರು. ಕೆಲವರು ಖಾಸಗಿ ವಾಹನಗಳ ಮೊರೆ ಹೋದರೆ ಇನ್ನೂ ಕೆಲವರು ಸಂಬಂಧಿಗಳಿಗೆ ದೂರವಾಣಿ ಕರೆ ಮಾಡುವಲ್ಲಿ ತಲ್ಲೀನರಾಗಿದ್ದರು.
    ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ಚಹಾ ಹಾಗೂ ಉಪಹಾರದ ವ್ಯವಸ್ಥೆ ಇಲ್ಲದ ಕಾರಣ ಪರದಾಡಬೇಕಾಯಿತು. ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಹೊಟ್ಟೆ ಹಸಿದು ಕಂಗಾಲಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಹಾಗೂ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ ನೇತೃತ್ವ ಪಕ್ಷದ ಪದಾಧಿಕಾರಿಗಳು ಉಪಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

    ಗುಮ್ಮಟನಗರಿಯಲ್ಲಿ ಜನ ಜೀವನ ಸಹಜ ಸ್ಥಿತಿಗೆ
    ಗುಮ್ಮಟನಗರಿಯಲ್ಲಿ ಜನ ಜೀವನ ಸಹಜ ಸ್ಥಿತಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts