More

    ಪಿಯುಸಿ ಮಧ್ಯಂತರ ಪರೀಕ್ಷೆಗೆ ವಿರೋಧ

    ವಿಜಯಪುರ: ಮಧ್ಯಂತರ ಪರೀಕ್ಷೆ ನಡೆಸಲು ಮುಂದಾಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರಮವನ್ನು ವಿರೋಧಿಸಿ ಪಿಯು ಇಲಾಖೆ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವಿಜಯಪುರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

    ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ರಾಜ್ಯದ ಎಲ್ಲ ಪದವಿ ಪೂರ್ವ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಹಿತ ಕಡೆಗಣಿಸಿ ಮಧ್ಯಂತರ ಪರೀಕ್ಷೆ ಮಾಡುವ ತೀರ್ಮಾನ ತೆಗೆದುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಣಯವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈಚೆಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮತ್ತು ಕೋವಿಡ್ ಭಯದ ಹಿನ್ನೆಲೆಯಲ್ಲಿ ಬೋಧನಾ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಆದರೆ ಪಿಯು ಇಲಾಖೆಯು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ವಾಸ್ತವ ಪರಿಸ್ಥಿತಿಯನ್ನು ಅರಿಯದೆ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಗರ ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ ಮಾತನಾಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಸಾಲಿನ ದ್ವಿತೀಯ ವರ್ಷದ ಮೌಲ್ಯಮಾಪನ ಕಾರ್ಯ ಮತ್ತು ಪರೀಕ್ಷೆಗಳು ಹಳೆಯ ಪದ್ಧತಿಯಂತೆಯೇ ನಡೆಯಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯು ಮಧ್ಯಂತರ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಮುಂದೂಡಬೇಕು. ಪಿಯು ಇಲಾಖೆಯೂ ಅಧ್ಯಾಪಕರಿಗೆ ಬೋಧನೆಯನ್ನು ಹೊರತುಪಡಿಸಿ ಬೇರೆ ಬೇರೆ ಕಾರ್ಯಗಳಿಗೆ ನಿಯೋಜನೆ ಮಾಡಬಾರದು ಎಂದು ಒತ್ತಾಯಿಸಿದರು.

    ನಗರ ಕಾರ್ಯದರ್ಶಿ ಸಿದ್ದು ಪತ್ತಾರ, ಅಕ್ಷಯ ಯಾದವಾಡ, ಸಂತೋಷ ದೊಡಮನಿ, ಪಾಂಡು ಮೋರೆ, ಸಿದ್ದು ಉಪ್ಪಾರ, ಮಂಜುನಾಥ ಹಳ್ಳಿ, ಬಸವರಾಜ ಪೂಜಾರಿ, ವರ್ಷಾ ನಂದಿ, ಸುರೇಖಾ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts