More

    ಬೀಡಾಡಿ ದನಗಳ ನಿಯಂತ್ರಣಕ್ಕೆ ಕಠಿಣ ಕ್ರಮ

    ವಿಜಯಪುರ: ಜಿಲ್ಲೆಯಲ್ಲಿ ಅದರಲ್ಲಿಯೂ ವಿಜಯಪುರ ನಗರದಲ್ಲಿ ಬಿಡಾಡಿ ದನಗಳ ನಿಯಂತ್ರಣಕ್ಕಾಗಿ ಕೇವಲ ಎಚ್ಚರಿಕೆ ನೀಡದೆ ಕಠಿಣಕ್ರಮಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರಾಣಿ ದಯಾ ಸಂಘದ ಸಭೆ ನಡೆಸಿದ ಅವರು, ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದರು.

    ಅದರಂತೆ ಸಾರ್ವಜನಿಕರಿಂದ ಹಾಗೂ ಪೊಲೀಸ್ ಇಲಾಖೆಯಿಂದ ದೂರುಗಳು ದಾಖಲಾಗಿರುವ ಪ್ರಯುಕ್ತ, ಬೀಡಾಡಿ ದನಗಳನ್ನು ನಿಯಂತ್ರಣದಲ್ಲಿಡುವ ಕುರಿತು ಜಾನುವಾರು ಮಾಲೀಕರಿಗೆ ಈಗಾಗಲೇ ಮಹಾನಗರ ಪಾಲಿಕೆಯಿಂದ ಅನೇಕ ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಮಾಲೀಕರು ತಮ್ಮ ದನಗಳ ರಕ್ಷಣೆಗೆ ತಮ್ಮ ಅಧೀನದಲ್ಲಿಟ್ಟುಕೊಳ್ಳಲು ಪತ್ರಿಕಾ ಪ್ರಕಟಣೆ ಹಾಗೂ ಧ್ವನಿವರ್ಧಕ ಮೂಲಕ ತಿಳುವಳಿಕೆ ನೀಡಲಾಗಿದೆ. ಅದಾಗ್ಯೂ ಬಿಡಾಡಿ ದನ, ಕರುಗಳ ಮಾಲೀಕರು ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದರು.

    ಆ.30ರ ನಂತರ ಯಾರಾದರೂ ಬಿಡಾಡಿ ದನಗಳನ್ನು ರಸ್ತೆ ಮೇಲೆ ಬಿಟ್ಟಲ್ಲಿ ಅಂತಹ ದನಗಳನ್ನು ವಾರಸುದಾರರಿಲ್ಲದ ಜಾನುವಾರುಗಳೆಂದು ಪರಿಗಣಿಸಿ ಮಹಾನಗರ ಪಾಲಿಕೆಯ ಸುಪರ್ದಿಗೆ ತೆಗೆದುಕೊಂಡು ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸುವುದು ಮತ್ತು ಗೋಶಾಲೆಯಿಂದ ಬಿಡಾಡಿ ದನಗಳನ್ನು ಬಿಡಿಸಿಕೊಳ್ಳಲು ಮಾಲೀಕರೂ ಮುಂದೆ ಬಂದಲ್ಲಿ ಮೊದಲ ಬಾರಿಗೆ 10,000 ರೂ. ದಂಡ ವಿಧಿಸುವುದು ಮತ್ತು 2ನೇ ಬಾರಿ ರಸ್ತೆ ಮೇಲೆ ಮಾಲೀಕರು ಪುನಃ ಜಾನುವಾರು ಬಿಟ್ಟಲ್ಲಿ ನೇರವಾಗಿ ಗೋಶಾಲೆಯ ಸುಪರ್ದಿಗೆ ನೀಡಿ ಯಾವುದೇ ಕಾರಣಕ್ಕೂ ಮರಳಿ ಮಾಲೀಕರಿಗೆ ನೀಡದಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

    ಜಿಲ್ಲೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಸರ್ಕಾರದಿಂದ ಗೋಶಾಲೆ ಸ್ಥಾಪಿಸಲು ಅಥವಾ ಜಿಲ್ಲೆಯಲ್ಲಿ ಪ್ರತಿಷ್ಠಿತ ಟ್ರಸ್ಟ್‌ಗಳ ಮುಖಾಂತರ ನಿರ್ವಹಣೆಗೊಳ್ಳುತ್ತಿರುವ ಗೋಶಾಲೆಗಳ ಸಹಯೋಗದೊಂದಿಗೆ ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಸಹಕಾರ ಕೊಡುವ ಅನುದಾನ ಉಪಯೋಗಿಸುವ ಕುರಿತು ಸಭೆಯಲ್ಲಿ ದೀರ್ಘವಾಗಿ ಚರ್ಚಿಸಲಾಯಿತು. ಅಲ್ಲದೆ, ಸಂರಕ್ಷಣೆ ಹಾಗೂ ದೀರ್ಘಕಾಲಿಕ ಪ್ರಯೋಜನ ದೃಷ್ಟಿಯಿಂದ ಜಿಲ್ಲೆಯಲ್ಲಿರುವ ಶ್ರೀ ಸಿದ್ಧೇಶ್ವರ ಸಂಸ್ಥೆಯ ರಾಮನಗೌಡ ಬ. ಪಾಟೀಲ ಗೋರಕ್ಷಾ ಕೇಂದ್ರ ಕಗ್ಗೋಡ ಗೋಶಾಲೆ, ಶ್ರೀ ಪ್ರಮೋದಾತ್ಮಕ ಗೋ ಸಂರಕ್ಷಣಾ ಕೇಂದ್ರ ಯಲಗೂರಗೆ ಸರ್ಕಾರ ಕೊಡುವ ಅನುದಾನ ನೀಡಬೇಕೆಂದು ತಿಳಿಸಿದರು.

    ಅಲ್ಲದೆ, ಜಿಲ್ಲೆಯಲ್ಲಿ ಗೋಸಂರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ ಮೂರು ಗೋಶಾಲೆಗಳಿಗೆ ತಲಾ 2,16,200 ರೂ.ಗಳನ್ನು ನಿರ್ವಹಣೆ ಅನುದಾನವಾಗಿ ಉಪಯೋಗಿಸಲು ಮಂಜೂರಾತಿಗೆ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

    ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿ ಡಾ. ಪ್ರಾಣೇಶ ಜಹಗೀರದಾರ, ಎಸ್‌ಪಿ ಆನಂದಕುಮಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts