More

    ಸಂವಿಧಾನದ ಮೌಲ್ಯ ಎತ್ತಿಹಿಡಿಯೋಣ

    ವಿಜಯಪುರ: ಸ್ವಾತಂತ್ರಾೃ ನಂತರದ ದಿನಗಳಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡಲಾಗಿದೆಯಾದರೂ ಇನ್ನೂ ಹಲವಾರು ಸಮಸ್ಯೆಗಳು ಮತ್ತು ಸವಾಲುಗಳಿವೆ. ಇವುಗಳನ್ನು ತೊಡೆದು ಹಾಕುವ ಮೂಲಕ ನಮ್ಮ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ. ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲಾ ಹೇಳಿದರು.
    ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಜ್ಞಾನಶಕ್ತಿ ಆವರಣದಲ್ಲಿ ಮಂಗಳವಾರ ನಡೆದ 72ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
    ನಮ್ಮ ಸಂವಿಧಾನದ ಆಶಯಗಳನ್ನು ದಿನನಿತ್ಯದ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಿದೆ ಎಂದರು.
    ಈ ದೇಶದ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಯುವಕರನ್ನು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಬೇಕಿದೆ. ಈ ಹಿನ್ನೆಲೆ ಯುವ ಶಕ್ತಿಯ ಸದ್ಬಳಕೆಗೆ ಸೂಕ್ತ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ ಎಂದು ಹೇಳಿದರು.
    ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕಿದೆ. ಬಡತನ, ಅಜ್ಞಾನ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಸಮಾಜದಲ್ಲಿ ಕ್ಷೋಭೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ವಿಜೇತ ಕ್ರೀಡಾ ಪಟು ಮಾಲಾಶ್ರೀ ಮತ್ತು ಕ್ರೀಡಾ ತರಬೇತಿದಾರ ವಿಶ್ವನಾಥ ನಡಕಟ್ಟಿ ಅವರನ್ನು ಕುಲಪತಿಗಳು ಸನ್ಮಾನಿಸಿದರು.

    ಹರೀಶ ಹೆಗಡೆ ಅವರ ನೇತೃತ್ವದಲ್ಲಿ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ದೇಶಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿನಿಯರು ಆಕರ್ಷಕ ಮತ್ತು ಸಾಹಸಮಯ ಕರಾಟೆ ಪ್ರದರ್ಶನ ನೀಡಿದರು.
    ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ. ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ ಮತ್ತಿತರರಿದ್ದರು. ಕ್ರೀಡಾ ನಿರ್ದೇಶಕಿ ಡಾ. ಜ್ಯೋತಿ ಉಪಾಧ್ಯೆ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಹನುಮಂತಯ್ಯ ಪೂಜಾರಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts