More

    ಗಣಿ ಇಲಾಖೆ ಅಧಿಕಾರಿ ತರಾಟೆ

    ವಿಜಯಪುರ: ಅಕ್ರಮ ಚಟುವಟಿಕೆಯಿಂದಲೇ ರಾಜ್ಯಾದ್ಯಂತ ಹೆಸರಾದ ಭೀಮಾ ತೀರದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿವರ ನೀಡಲು ಸತಾಯಿಸಿದ್ದಲ್ಲದೆ, ಸುದ್ದಿಗಾರರೊಂದಿಗೆ ಬೇಜವಾಬ್ದಾರಿಯಾಗಿ ವರ್ತಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯನ್ನು ಸಚಿವೆ ಶಶಿಕಲಾ ಜೊಲ್ಲೆ ತರಾಟೆಗೆ ತೆಗೆದುಕೊಂಡಿದ್ದಾರೆ.
    ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ ಬಳಿಕ ಸುದ್ದಿಗಾರರ ದೂರುಗಳಿಗೆ ಪ್ರತಿಕ್ರಿಯಿಸಿದ ಜೊಲ್ಲೆ, ಮಾಹಿತಿ ನೀಡಬೇಕಿರುವುದು ಅಧಿಕಾರಿ ಕರ್ತವ್ಯ. ತಕ್ಷಣಕ್ಕೆ ಮಾಹಿತಿ ಇಲ್ಲದಿದ್ದರೆ ಕಾಲಾವಕಾಶ ಕೇಳಬೇಕು. ಅದನ್ನು ಬಿಟ್ಟು ಬೇಕಾ ಬಿಟ್ಟಿ ವರ್ತಿಸೋದು ಅಲ್ಲ ಎಂದರಲ್ಲದೆ, ಸ್ಥಳದಲ್ಲಿದ್ದ ಅಧಿಕಾರಿಗೆ ತಮ್ಮ ವರ್ತನೆ ಸರಿಪಡಿಸಿಕೊಳ್ಳುವಂತೆ ತಾಕೀತು ಮಾಡಿದರು. ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹಾಗೂ ಎಸ್‌ಪಿ ಅನುಪಮ ಅಗರವಾಲ್ ಸಹ ಇದ್ದರು.

    ಅಧಿಕಾರಿಯ ಬೇಜವಾಬ್ದಾರಿ ವರ್ತನೆ

    ಗಣಿಗಾರಿಕೆ ಹಾಗೂ ಸ್ಟೋನ್ ಕ್ರಷರ್‌ಗಳಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಭೂಷಣ ಹಾಗೂ ಇನ್ನೋರ್ವ ಅಧಿಕಾರಿ ಸುಭಾಷಚಂದ್ರ ಬೋಸ್ ವರದಿಗಾರರನ್ನು ಸತಾಯಿಸಿದ್ದರು. ಕಚೇರಿಗೆ ತೆರಳಿದ ಮಾಧ್ಯಮ ಸ್ನೇಹಿತರನ್ನು ಗೋಳು ಹೊಯ್ದುಕೊಂಡಿದ್ದರು. ಮಾಹಿತಿ ನೀಡುವಾಗ ಅನವಶ್ಯಕವಾದ ಮಾತುಗಳು, ಬೇಕಾಬಿಟ್ಟಿ ವರ್ತನೆ, ವರದಿಗಾರರನ್ನು ಕಿಚಾಯಿಸುವುದು, ಅವರ ವೈಯಕ್ತಿಕ ಮಾಹಿತಿ ಕೇಳುವುದು, ಮುದ್ರಣ ಪ್ರತಿ ನೀಡದೇ ಬರೆದುಕೊಳ್ಳಿ ಎಂದು ತಪ್ಪು ತಪ್ಪಾಗಿ ಉಚ್ಚರಿಸುವುದು…. ಹೀಗೆ ವಿಚಿತ್ರವಾಗಿ ನಡೆದುಕೊಂಡಿದ್ದರು.
    ಮಾಹಿತಿ ಓದಿ ಹೇಳುವುದು, ಬರೆದುಕೊಳ್ಳುವಾಗ ಮುದ್ರಿತ ಪ್ರತಿ ನೀಡಿ ನೀವೇ ಬರೆದುಕೊಳ್ಳಿ ಎನ್ನುವುದು, ಬರೆದುಕೊಳ್ಳುವಾಗ ತಾವೇ ಓದಿ ಹೇಳುವುದಾಗಿ ಪ್ರತಿ ಕಸಿದುಕೊಳ್ಳುವುದು, ಬಳಿಕ ಮೊಬೈಲ್ ರಿಕಾರ್ಡ್ ಮಾಡಿಕೊಂಡರೆ ಬರೆದುಕೊಳ್ಳಿ ಎನ್ನುವುದು ಹೀಗೆ ದುರ್ವರ್ತನೆ ತೋರಿದ್ದರು.

    ಜಿಲ್ಲಾಧಿಕಾರಿ ಗಮನಕ್ಕೆ

    ಅಧಿಕಾರಿ ವರ್ತನೆ ಬಗ್ಗೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಅವರ ಗಮನಕ್ಕೂ ತರಲಾಗಿತ್ತಲ್ಲದೇ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಗಮನವೂ ಸೆಳೆಯಲಾಗಿತ್ತು. ಇದೀಗ ಸಚಿವೆ ಶಶಿಕಲಾ ಜೊಲ್ಲೆ ಅವರ ಗಮನಕ್ಕೆ ತರಲಾಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳಿಕ ಮಾಹಿತಿ ಕಲೆ ಹಾಕಿ ನೀಡಲು ಸೂಚಿಸಿದ್ದು ತಾವೇ ಮಾಹಿತಿ ಒದಗಿಸುವ ಭರವಸೆ ನೀಡಿದರು.
    ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಅವರು ಸಹ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಕಲ ಮಾಹಿತಿ ಕಲೆ ಹಾಕಲಾಗುತ್ತಿದ್ದು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಎಲ್ಲ ವಿವರ ಬಹಿರಂಗಪಡಿಸುವುದಾಗಿ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts