More

    ಮುಹೂರ್ತ ನಿಗದಿಗೆ ಬಿಎಸ್‌ವೈ ಮೊರೆ !

    ಪರಶುರಾಮ ಭಾಸಗಿ ವಿಜಯಪುರ

    ಐತಿಹಾಸಿಕ ಜಿಲ್ಲೆಯ ಬಹುದಿನದ ಬೇಡಿಕೆಯಾದ ವಿಮಾನ ನಿಲ್ದಾಣ ಕಾಮಗಾರಿಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಶಂಕುಸ್ಥಾಪನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಜಿಲ್ಲಾಡಳಿತ ಸಿಎಂ ಅಣತಿಗಾಗಿ ಎದುರು ನೋಡುತ್ತಿದೆ !
    ಈಗಾಗಲೇ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಡಿಗಲ್ಲು ಸಮಾರಂಭ ನೆರವೇರುತ್ತಿದ್ದಂತೆ ಕಾಮಗಾರಿ ಚುರುಕು ಪಡೆಯಲಿದೆ. ಸ್ಥಳೀಯ ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಎಸ್. ಆಲೂರ ಗುತ್ತಿಗೆ ಜವಾಬ್ದಾರಿ ಹೊತ್ತಿದ್ದು, ಕಾಮಗಾರಿ ಪೂರ್ಣಗೊಳಿಸಲು ವರ್ಷದ ಕಾಲಾವಧಿ ನೀಡಲಾಗಿದೆ. ಯೋಜನೆಯ ವಿಸ್ತೃತ ವರದಿ ಸಿದ್ಧಪಡಿಸಲು ಕೇಂದ್ರ ಸರ್ಕಾರ ಸ್ವಾಮ್ಯದ ಮೆ.ರೈಟ್ಸ್ ಕಂಪನಿಯನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.
    ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಯಡಿಯೂರಪ್ಪ ಅವರಿಂದ ದಿನಾಂಕ ಪಡೆಯಲು ಯತ್ನಿಸುತ್ತಿದ್ದು, ತಿಂಗಳಾಂತ್ಯಕ್ಕೆ ಶಂಕು ಸ್ಥಾಪನೆ ನೆರವೇರುವ ಎಲ್ಲ ಸಾಧ್ಯತೆಗಳಿವೆ.

    ಎರಡು ಹಂತದ ಕಾಮಗಾರಿ

    ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನೆರವೇರಲಿದೆ. ಮೊದಲ ಹಂತದಲ್ಲಿ ರನ್‌ವೇ, ಟ್ಯಾಕ್ಸಿವೇ ಹಾಗೂ ಏಫ್ರಾನ್ ಒಳಗೊಂಡ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. ಅದಕ್ಕಾಗಿ 95 ಕೋಟಿ ರೂ.ಅನುದಾನ ನಿಗದಿಪಡಿಸಲಾಗಿದೆ.
    ಎರಡನೇ ಹಂತದಲ್ಲಿ ಬಾಕಿ ಉಳಿದ ಕಾಮಗಾರಿಗಳಾದ ಟರ್ಮಿನಲ್ ಕಟ್ಟಡ, ಎಟಿಸಿ, ಪೂರಕ ಕಟ್ಟಡಗಳು, ಏರ್‌ಸೈಡ್ ಕಾಮಗಾರಿಗಳು ನೆರವೇರಲಿವೆ. ಅದಕ್ಕಾಗಿ 125 ಕೋಟಿ ರೂ.ಮೀಸಲಿಡಲಾಗಿದೆ. ಒಟ್ಟಾರೆ 220 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ.

    70 ಪ್ರಯಾಣಿಕರ ಆಸನ ಸಾಮರ್ಥ್ಯ

    ಸದ್ಯಕ್ಕೆ 70 ಪ್ರಯಾಣಿಕರ ಆಸನ ಸಾಮರ್ಥ್ಯ ಹೊಂದಿರುವ ಎಟಿಆರ್-72 ಮಾದರಿಯ ವಿಮಾನಗಳ ಕಾರ್ಯಾಚರಣೆಗಾಗಿ ನಿಲ್ದಾಣದ ರೂಪುರೇಷೆ ಸಿದ್ಧಪಡಿಸಲಾಗಿದೆ. ಪ್ರತಿ ಗಂಟೆಗೆ 200 ಪ್ರಯಾಣಿಕರನ್ನು ನಿಭಾಯಿಸಲು ಪ್ರಯಾಣಿಕರ ಟರ್ಮಿನಲ್ ಕಟ್ಟಡ ನಿರ್ಮಿಸಲಾಗುತ್ತಿದೆ. ಹಗಲು ವಾಣಿಜ್ಯ ಕಾರ್ಯಾಚರಣೆಗಾಗಿ ವಿಮಾನ ಬಳಸಲಾಗುತ್ತಿದೆ.
    ಭವಿಷ್ಯದಲ್ಲಿ ಬೇಡಿಕೆ ಆಧಾರದ ಮೇಲೆ ಬೋಯಿಂಗ್ ಬಿ-737 ಅಥವಾ ಏರ್‌ಬಸ್ ಎ-320 ಮಾದರಿ ವಿಮಾನಗಳನ್ನು ನಿಭಾಯಿಸಲು ವಿಮಾನ ನಿಲ್ದಾಣದ ವಿಸ್ತರಣೆಗೆ ಬೇಕಾದ ಜಮೀನನ್ನು ಕಾಯ್ದಿರಿಸಲಾಗಿದೆ.
    ಒಟ್ಟಿನಲ್ಲಿ ದಶಕದ ಬೇಡಿಕೆಯಾದ ವಿಮಾನ ನಿಲ್ದಾಣ ಕಾಮಗಾರಿ ಕೊನೆಗೂ ಆರಂಭಗೊಳ್ಳುತ್ತಿದ್ದು, ಇದರಿಂದ ಸಾಕಷ್ಟು ಉದ್ಯೋಗವಕಾಶ ಸೃಷ್ಟಿಯಾಗುವುದರ ಜತೆಗೆ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಚಟುವಟಿಕೆ ಗಣನೀಯವಾಗಿ ಹೆಚ್ಚಲಿವೆ. ಪ್ರಾದೇಶಿಕ ಅಸಮತೋಲನ ಸರಿದೂಗಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

    ಮೇಲ್ವಿಚಾರಣೆ ಮತ್ತು ಸ್ಥಳ ವಿವರ

    ನಗರದಿಂದ 15 ಕಿ.ಮೀ. ಅಂತರದಲ್ಲಿರುವ ಬುರಾಣಪುರ ಹಾಗೂ ಮದಭಾವಿ ಗ್ರಾಮಗಳ ಮಧ್ಯೆ ವಿಮಾನ ನಿಲ್ದಾಣಕ್ಕೆ 727 ಎಕರೆ ಜಮೀನು ಮೀಸಲಿಡಲಾಗಿದೆ. 63.46 ಕೋಟಿ ರೂ. ವೆಚ್ಚದಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ-50ರ ಮೂಲಕ ನಿಲ್ದಾಣ ತಲುಪಬಹುದಾಗಿದೆ.
    ನಿಲ್ದಾಣ ನಿರ್ಮಾಣ, ಕಾರ್ಯಾಚರಣೆ ಮತ್ತು ಹಣ ಬಿಡುಗಡೆಯ ಕಾರ್ಯವನ್ನು ಕರ್ನಾಟಕ ಸರ್ಕಾರದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ನೋಡಿಕೊಳ್ಳುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ನೇತೃತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಜಿಲ್ಲಾಡಳಿತದ ಅಡಿ ರಾಜ್ಯ ಲೋಕೋಪಯೋಗಿ ಇಲಾಖೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.

    ಯೋಜನೆಯ ಹಿನ್ನೋಟ

    ರಾಜ್ಯ ಸರ್ಕಾರ 2010 ರಲ್ಲೇ ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಚೆನ್ನೈನ ‘ಮಾರ್ಗ್’ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಕೇಂದ್ರ ಸರ್ಕಾರದ ಸಹಾಯದೊಂದಿಗೆ ಅಂದಾಜು 100 ಕೋಟಿ ರೂ. ಅನುದಾನ ಕಾಯ್ದಿರಿಸುವ ಒಪ್ಪಂದ ಕೂಡ ಆಗಿತ್ತು. ಆದರೆ, ಜಾಗ ಸಮತಟ್ಟು ಮಾಡಲು ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ಮಾರ್ಗ್ ಕಂಪನಿ 2012ರಲ್ಲಿ ಹಿಂದೆ ಸರಿಯಿತು. ಬಳಿಕ 2014ರಲ್ಲಿ ರಾಜ್ಯ ಸರ್ಕಾರ ಕಂಪನಿಯನ್ನು ಯೋಜನೆಯಿಂದ ಹೊರಹಾಕಿತು. ಜುಲೈ 2015ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ತಂಡ ವಿಜಯಪುರಕ್ಕೆ ಭೇಟಿ ನೀಡಿ ಜಾಗದ ಮರು ಪರಿಶೀಲನೆ ನಡೆಸಿತು. ರಾಷ್ಟ್ರೀಯ ವಿಮಾನ ಯಾನ ನೀತಿ 2016ರನ್ವಯ ವಿಜಯಪುರದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಬಹುದೆಂದು ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಕಳೆದ ಜೂ.30ರಂದು ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರಕ್ಕೆ ಪತ್ರ ಬರೆದರು. ಇಷ್ಟೆಲ್ಲ ಆಗು ಹೋಗುಗಳ ಬಳಿಕ ವಿಮಾನ ನಿಲ್ದಾಣ ಕಾಮಗಾರಿ ಕನಸು ಕೈಗೂಡುತ್ತಿದೆ.

    ಜ. 4 ರಂದೇ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲಿ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಲಿದೆ.
    ಪಿ.ಸುನೀಲ್‌ಕುಮಾರ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts