More

    ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಮತ ಎಣಿಕೆಗೆ ಸಕಲ ಸಿದ್ಧತೆ

    ವಿಜಯಪುರ: ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಅ.31ರಂದು ನಗರದ ವಿ.ಬಿ.ದರಬಾರ ಹೈಸ್ಕೂಲ್‌ನಲ್ಲಿ ನಡೆಯಲಿದ್ದು, ಮತ ಎಣಿಕೆಗಾಗಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

    ಅ.31ರಂದು ಬೆಳಗ್ಗೆ 7.30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯನ್ನು ಆಯಾ ಚುನಾವಣಾಕಾರಿಗಳು ಹಾಗೂ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುವುದು. ಬೆಳಗ್ಗೆ 8 ಗಂಟೆಯವರೆಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ತದನಂತರ ವಿದ್ಯುನ್ಮಾನ ಮತಯಂತ್ರದಲ್ಲಿ ದಾಖಲಾಗಿರುವ ಮತಗಳ ಎಣಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಮತ ಎಣಿಕೆ ಕಾರ್ಯವು ಒಟ್ಟು 7 ಕೊಠಡಿಗಳಲ್ಲಿ ನಡೆಯಲಿದ್ದು, ಪ್ರತಿ ಕೊಠಡಿಯಲ್ಲಿ ಒಟ್ಟು 5 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 35 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ವಾರ್ಡ್‌ಗೆ ಒಂದು ಟೇಬಲ್ ವ್ಯವಸ್ಥೆ ಮಾಡಿದ್ದು, ಎಲ್ಲ ವಾರ್ಡ್‌ಗಳ ಮತ ಎಣಿಕೆ ಕಾರ್ಯ ಏಕಕಾಲದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

    ವಿವಿಧ ಸುತ್ತುಗಳಲ್ಲಿ ಮತ ಎಣಿಕೆ
    ವಾರ್ಡ್ ಸಂಖ್ಯೆ 15ರ ಒಂದು ವಾರ್ಡ್‌ಗೆ 3 ಸುತ್ತುಗಳು, ವಾರ್ಡ್ ಸಂ.26ರ ಒಂದು ವಾರ್ಡ್‌ಗೆ 5 ಸುತ್ತು, ವಾರ್ಡ್ ಸಂ.4,5,6,9 ಹಾಗೂ 17ರ ವಾರ್ಡ್‌ಗಳಿಗೆ 6 ಸುತ್ತುಗಳು, ವಾರ್ಡ್ ಸಂ.10, 25, 27, 33, 34 ಹಾಗೂ 35ರ ವಾರ್ಡ್‌ಗಳಿಗೆ 7 ಸುತ್ತುಗಳು, ವಾರ್ಡ್ ಸಂ.01, 12, 24, 32ರ ವಾರ್ಡ್‌ಗಳಿಗೆ 8 ಸುತ್ತುಗಳು, ವಾರ್ಡ್ ಸಂ.19, 28, 30 ಹಾಗೂ 31 ರ ವಾರ್ಡ್‌ಗಳಿಗೆ 9 ಸುತ್ತುಗಳು, ವಾರ್ಡ್ ಸಂ.02, 03, 13, 16, 23 ಹಾಗೂ 29ರ ವಾರ್ಡ್‌ಗಳಿಗೆ 10 ಸುತ್ತುಗಳು, ವಾರ್ಡ್ ಸಂ.14 ಹಾಗೂ 20ರ ವಾರ್ಡ್‌ಗಳಿಗೆ 11 ಸುತ್ತುಗಳು, ವಾರ್ಡ್ ಸಂ. 7,8,11,18 ಹಾಗೂ 22ರ ವಾರ್ಡ್‌ಗಳಿಗೆ 12 ಸುತ್ತುಗಳು ಹಾಗೂ ವಾರ್ಡ್ ಸಂಖ್ಯೆ 21ರ ಒಂದು ವಾರ್ಡಿಗೆ 13 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಮಾಹಿತಿ ನೀಡಿದ್ದಾರೆ.

    179 ಅಧಿಕಾರಿ, ಸಿಬ್ಬಂದಿ ನಿಯೋಜನೆ
    ಮಹಾನಗರ ಪಾಲಿಕೆಯ 35 ವಾರ್ಡ್‌ಗಳ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ 35 ಮತ ಎಣಿಕೆ ಮೇಲ್ವಿಚಾರಕರು, 35 ಮತ ಎಣಿಕೆ ಸಹಾಯಕರು, 7 ಮತ ಎಣಿಕೆ ಡಾಟಾ ಎಂಟ್ರಿ ಮೇಲ್ವಿಚಾರಕರು, 7 ಕಂಪ್ಯೂಟರ್ ಆಪರೇಟರ್, 35 ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸುವ ಸಿಬ್ಬಂದಿ ಹಾಗೂ ಇತರ ಕಾರ್ಯಗಳಿಗಾಗಿ 60 ಜನರು ಸೇರಿದಂತೆ 179 ಜನರನ್ನು ನಿಯೋಜಿಸಲಾಗಿದೆ.

    ಪೊಲೀಸ್ ಬಂದೋಬಸ್ತ್
    ಮತ ಎಣಿಕೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮೂವರು ಡಿವೈಎಸ್‌ಪಿ, ಎಂಟು ಜನ ಸಿಪಿಐ, 32 ಪಿಎಸ್‌ಐ, 35 ಎಎಸ್‌ಐ, 76 ಹೆಡ್ ಕಾನ್‌ಸ್ಟೇಬಲ್, 128 ಪೊಲೀಸ್ ಕಾನ್‌ಸ್ಟೇಬಲ್, 17 ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ನಾಲ್ವರು ಐಆರ್‌ಬಿ ಹಾಗೂ ಆರು ಡಿಎಆರ್ ತುಕಡಿಗಳನ್ನು ಪೊಲೀಸ್ ಇಲಾಖೆಯಿಂದ ನಿಯೋಜಿಸಲಾಗಿದೆ.

    ಮತ ಎಣಿಕೆ ಕೇಂದ್ರ ಪ್ರವೇಶ
    ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿ, ರಾಜ್ಯ ಚುನಾವಣಾ ಆಯೋಗದಿಂದ ಅನುಮತಿ ಹೊಂದಿದ ವ್ಯಕ್ತಿಗಳು ಹಾಗೂ ಜಿಲ್ಲಾ ಚುನಾವಣಾಕಾರಿಗಳಿಂದ ಅಧಿಕೃತ ಪಾಸ್ ಪಡೆದ ಮಾಧ್ಯಮದವರು, ಸ್ಪರ್ಧಿಸಿದ ಅಭ್ಯರ್ಥಿ, ಅವರ ಚುನಾವಣಾ ಏಜೆಂಟರು ಮತ್ತು ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.

    ಪಾರ್ಕಿಂಗ್ ವ್ಯವಸ್ಥೆ
    ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ದಿನದಂದು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ
    ಅಧಿಕಾರಿ-ಸಿಬ್ಬಂದಿ, ಅಭ್ಯರ್ಥಿ ಹಾಗೂ ಮತ ಎಣಿಕೆ ಏಜೆಂಟರುಗಳ ವಾಹನ ನಿಲುಗಡೆಗೆ ದರಬಾರ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts