More

    ವರ್ಷಾಂತ್ಯಕ್ಕೆ ವಿಜಯಪುರ ಡಿಸಿಸಿ ಬ್ಯಾಂಕ್ ಶತಮಾನೋತ್ಸವ: ಶಾಸಕ ಶಿವಾನಂದ ಪಾಟೀಲ ಹೇಳಿಕೆ

    ವಿಜಯಪುರ : ರಾಜ್ಯದಲ್ಲೇ 103 ವರ್ಷ ಕಳೆದು 104ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವವನ್ನು ವರ್ಷಾಂತ್ಯಕ್ಕೆ ಆಚರಿಸಲಾಗುವುದು ಎಂದು ಬ್ಯಾಂಕ್‌ನ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ಹೇಳಿದರು.

    ಬ್ಯಾಂಕಿನ ಶತಮಾನೋತ್ಸವ ಸಮಾರಂಭವನ್ನು ಈ ಹಿಂದೆ ಆಚರಿಸಲು ಉದ್ದೇಶಿಸಿದ್ದು ಕೋವಿಡ್ ಪರಿಸ್ಥಿತಿಯಿಂದ ಮುಂದೂಡಲಾಗಿದೆ. ಪ್ರಸ್ತುತ ಶಶಮಾನೋತ್ಸವದ ಸವಿನೆನಪಿನಲ್ಲಿ ನಿರ್ಮಿತ ಶತಮಾನೋತ್ಸವ ಭವನದ ಕಟ್ಟಡ ಕಾರ್ಯ ಪೂರ್ಣಗೊಂಡಿದೆ. ಬ್ಯಾಂಕಿನ ಸದಸ್ಯರು, ಸಹಕಾರ ಸಂಘ-ಸಂಸ್ಥೆಗಳು, ಸರ್ಕಾರ, ರೈತರು ಹಾಗೂ ಗ್ರಾಹಕರ ಸಹಯೋಗದೊಂದಿಗೆ ಡಿಸೆಂಬರ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿಜಯಪುರ ನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    1919 ರಲ್ಲಿ ಸ್ಥಾಪಿತಗೊಂಡ ಡಿಸಿಸಿ ಬ್ಯಾಂಕ್ 103 ವರ್ಷಗಳ ಸಾರ್ಥಕ ಸೇವೆಗೈದಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಅಭಿವೃದ್ಧಿ ಸಾಧಿಸುವುದರೊಂದಿಗೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಜಿಲ್ಲಾದ್ಯಂತ 43 ಶಾಖೆಗಳು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. ಇನ್ನೂ 9 ಶಾಖೆಗಳ ಆರಂಭಕ್ಕೆ ಅನುಮತಿ ದೊರೆತಿರುವುದರಿಂದ ಶೀಘ್ರದಲ್ಲಿ ನೂತನ ಶಾಖೆಗಳನ್ನು ಕಾರ್ಯರಂಭಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    2020-21 ನೇ ಸಾಲಿನಲ್ಲಿ 3746.24 ಕೋಟಿ ರೂ. ಬ್ಯಾಂಕ್ ದುಡಿಯುವ ಬಂಡವಾಳ ಹೊಂದಿದ್ದು, 2021-22 ನೇ ಸಾಲಿನ ವರ್ಷಾಂತ್ಯಕ್ಕೆ 4157.97 ಕೋಟಿ ರೂ.ಗಳಷ್ಟಾಗಿದೆ. ಪ್ರಸಕ್ತ ವರ್ಷದಲ್ಲಿ 411.73 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಒಟ್ಟು 18 ಕೋಟಿ ರೂ. ಲಾಭಗಳಿಸಿದ್ದು, ನಿಯಮಾನುಸಾರ 5.05 ಕೋಟಿ ರೂ. ತೆರಿಗೆ ಪಾವತಿಸಲಾಗಿದೆ. ಒಟ್ಟು 12.95 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು.

    2434.70 ಕೋಟಿ ರೂ.ಸಾಲ ವಿತರಣೆ
    ವಿವಿಧ ಕೃಷಿಯೇತರ ಉದ್ದೇಶಗಳಿಗಾಗಿ ಸಾಲ ನೀಡುತ್ತಿದ್ದು, 2021-22 ನೇ ಸಾಲಿನಲ್ಲಿ ಕೃಷಿಗಾಗಿ 1352.84 ಕೋಟಿ ರೂ. ಹಾಗೂ ಕೃಷಿಯೇತರ ಉದ್ದೇಶಗಳಿಗೆ 1081.86 ಕೋಟಿ ರೂ. ಒಟ್ಟಾರೆ 2434.70 ಕೋಟಿ ರೂ. ಸಾಲ ವಿತರಿಸಲಾಗಿದೆ. ಬ್ಯಾಂಕಿನ ಒಟ್ಟಾರೆ ಸಾಲ ವಸೂಲಾತಿಯು ಶೇ.90.10 ರಷ್ಟಾಗಿದೆ. ವರ್ಷಾಂತ್ಯಕ್ಕೆ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣವು ಶೇ.6.45 ರಷ್ಟಿದ್ದು, ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣವು ಶೇ.1.40 ರಷ್ಟು ಇದೆ. 2020-21 ನೇ ಸಾಲಿನ ಬ್ಯಾಂಕಿನ ವ್ಯವಹಾರದ ಗಾತ್ರ 5059.61 ಕೋಟಿ ರೂ. ಗಳಷ್ಟಿದ್ದದ್ದು, 2021-22 ನೇ ಸಾಲಿಗೆ 5464.07 ಕೋಟಿ ರೂ.ಗಳಷ್ಟಾಗಿದೆ. ಇದರಿಂದ ಪ್ರಸಕ್ತ ವರ್ಷದಲ್ಲಿ 404.46 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ ಎಂದರು.

    ರೈತರಿಗೆ ಕೃಷಿ ಸಾಲ
    ಪ್ರಸ್ತುತ ಬ್ಯಾಂಕು ಫ್ಯಾಕ್ಸುಗಳ ಮೂಲಕ ಹಾಗೂ ನೇರವಾಗಿ 2,16,729 ರೈತರಿಗೆ ಕೃಷಿ ಸಾಲವನ್ನು ನೀಡಿದೆ. ಈ ಪೈಕಿ 2021-22ನೇ ಸಾಲಿನಲ್ಲಿ 17,187 ಹೊಸ ಸದಸ್ಯರಿಗೆ 117.65 ಕೋಟಿ ರೂ. ಬೆಳೆ ಸಾಲ ವಿತರಿಸಲಾಗಿದೆ. ಆರಂಭದಲ್ಲಿ ರೈತರಿಗೆ ಅವರ ಅರ್ಹತೆ ಹಾಗೂ ಭದ್ರತೆ ಆಧರಿಸಿ 55 ಸಾವಿರ ರೂ. ಸಾಲ ನೀಡುತ್ತಿದ್ದು ಸರ್ಕಾರದ ಶೂನ್ಯ ಬಡ್ಡಿ ದರ ಯೋಜನೆಯಡಿ ಗರಿಷ್ಟ 3 ಲಕ್ಷ ರೂ.ಗಳವರೆಗೆ ಬೆಳೆ ಸಾಲ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ತೋಟಗಾರಿಕೆ, ನೀರಾವರಿ, ಕೃಷಿ ಯಂತ್ರೋಪಕರಣ, ಹೈನುಗಾರಿಕೆ, ಕುರಿ ಸಾಕಾಣಿಕೆ, ಮೀನುಗಾರಿಕೆ ಇತ್ಯಾದಿ ಉದ್ದೇಶಗಳಿಗಾಗಿ ಶೇ.3 ರ ರಿಯಾಯಿತಿ ಬಡ್ಡಿ ದರದಲ್ಲಿ ತಲಾ ರೈತರಿಗೆ ಗರಿಷ್ಟ 10 ಲಕ್ಷ ರೂ.ಗಳವರೆಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಮುಂದಿನ ಯೋಜನೆಗಳು
    ಬ್ಯಾಂಕು 2022-23 ನೇ ಸಾಲಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಸಮರ್ಪಕ ಕಾರ್ಯನಿರ್ವಹಣೆಗೆ ಕ್ರಮವಿಟ್ಟು ಈಗಿರುವ 4158 ಕೋಟಿ ರೂ. ದುಡಿಯುವ ಬಂಡವಾಳವನ್ನು 4580 ಕೋಟಿ ರೂ.ಗೆ ಹೆಚ್ಚಿಸಿ ಒಟ್ಟು 6100 ಕೋಟಿ ರೂ. ವ್ಯವಹಾರ ನಿರ್ವಹಿಸಿ 14 ಕೋಟಿ ರೂ. ನಿವ್ವಳ ಲಾಭ ಗಳಿಸಲು ಯೋಜನೆಯನ್ನು ರೂಪಿಸಿ ಜಾರಿಗೊಳಿಸಲಾಗಿದೆ. ಬ್ಯಾಂಕು ಕೋಡ್-ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದು, ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಸೇವೆ ಆರಂಭಿಸಲಾಗುತ್ತಿದೆ. ರೈತರಿಗೆ ಸ್ಥಾನಿಕವಾಗಿ ಮತ್ತು ತ್ವರಿತ ಹಣಕಾಸು ವ್ಯವಹಾರಕ್ಕಾಗಿ ಫ್ಯಾಕ್ಸುಗಳ ಮಟ್ಟದಲ್ಲಿ ಮೈಕ್ರೋ ಎಟಿಎಂ ಅಳವಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. 2022-23 ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟು 2.69 ಲಕ್ಷ ರೈತರಿಗೆ 1684 ಕೋಟಿ ರೂ. ಕೃಷಿ ಸಾಲ ವಿತರಣೆಗೆ ಗುರಿ ಹೊಂದಿದ್ದು, ಈ ಪೈಕಿ 19,500 ಹೊಸ ರೈತರಿಗೆ 113 ಕೋಟಿ ರೂ.ಸಾಲ ವಿತರಿಸಲು ಉದ್ದೇಶಿಸಲಾಗಿದೆ. ಜತೆಗೆ ಸಹಕಾರಿ ಭವನ ನಿರ್ಮಾಣ ಮಾಡಲು ಚಿಂತನೆ ನಡೆದಿದೆ ಎಂದರು.


    ಬ್ಯಾಂಕ್‌ಗಳ ಖಾಸಗೀಕರಣಕ್ಕೆ ವಿರೋಧ
    ಕೇಂದ್ರ ಸರ್ಕಾರ ಸಹಕಾರಿ ಬ್ಯಾಂಕ್‌ಗಳ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ತೀರ್ಮಾನಿಸಿರುವುದು ರೈತ ಸಮುದಾಯಕ್ಕೆ ಅತ್ಯಂತ ಮಾರಕವಾಗಿದೆ. ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ಒದಗಿಸುತ್ತಿರುವ ಸಹಕಾರಿ ಬ್ಯಾಂಕ್‌ಗಳು ಖಾಸಗಿಯವರ ಹಿಡಿತಕ್ಕೆ ಸಿಕ್ಕರೆ, ರೈತರ ಹಾಗೂ ಬಡ ಜನರ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಡಲಿದೆ. ಕೂಡಲೇ ಕೇಂದ್ರ ಸರ್ಕಾರ ಆ ನಿರ್ಧಾರದಿಂದ ಹಿಂದೆ ಸರಿದು ದೇಶದ ಸಮಸ್ತ ರೈತರ ಹಿತ ಕಾಯಬೇಕು ಎಂದು ಶಿವಾನಂದ ಪಾಟೀಲ ತಿಳಿಸಿದರು.

    ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಶೇಖರ ದಳವಾಯಿ, ಸೋಮನಗೌಡ ಬಿರಾದಾರ, ಕಲ್ಲನಗೌಡ ಪಾಟೀಲ, ಹಣಮಂತರಾಯ ಪಾಟೀಲ, ಸಂಯುಕ್ತಾ ಪಾಟೀಲ, ಗುರುಶಾಂತ ನಿಡೋಣಿ, ಸುರೇಶ ಬಿರಾದಾರ, ರಾಜೇಶ್ವರಿ ಹೆಬ್ಬಾಳ, ಅರವಿಂದ ಪೂಜಾರಿ, ಎಂ.ಜಿ.ಪಾಟೀಲ, ಎಸ್.ಎಸ್.ಶಿಂಧೆ, ಸಿ.ಎಸ್.ನಿಂಬಾಳ, ವಿಕಾಸ ರಾಠೋಡ, ಜೆ. ಕೊಟ್ರೇಶಿ, ಎಸ್.ಡಿ.ಬಿರಾದಾರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts