More

    ಕೊಲೆ ಮಾಡುವುದಾದರೆ ಜಾಗ ಖಾಲಿ ಮಾಡಿ

    ವಿಜಯಪುರ: ಎಸ್‌ಡಿಪಿಐ ಮತ್ತು ಪಿಎಫ್‌ಐ ಬಿಜೆಪಿಯ ಬಿ-ಟೀಮ್ ಎಂಬ ವಿರೋಧ ಪಕ್ಷಗಳ ಆರೋಪ ನೂರಕ್ಕೆ ನೂರು ಸತ್ಯ. ಬಿಜೆಪಿಗೆ ದೇಶದ ಮತ್ತು ಹಿಂದೂ ಕಾರ್ಯಕರ್ತರ ಸುರಕ್ಷತೆ ಬೇಕಿಲ್ಲ. ಅಧಿಕಾರವೇ ಮುಖ್ಯವಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಕಿಡಿಕಾರಿದರು.ಕೆರೂರನಲ್ಲಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ದರ್ಗಾ ಜೈಲ್‌ನಲ್ಲಿರುವ ಹಿಂದು ಕಾರ್ಯಕರ್ತರನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    ಈ ಹಿಂದೆ ರಾಜ್ಯದ ಸಂಸದರು, ಶಾಸಕರು ಎಸ್‌ಡಿಪಿಐ ಹಾಗೂ ಪಿಎಫ್‌ಐ ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪಿಎಫ್‌ಐ, ಎಸ್‌ಡಿಪಿಐ ಕ್ಯಾನ್ಸರ್ ಇದ್ದಂತೆ. ಇವರು ಭಯೋತ್ಪಾದಕರು. ಇವರು ಕುರಾನ್ ಆಧಾರದಂತೆ ನಡೆಯುವ ಪ್ರಜಾಪ್ರಭುತ್ವ ವಿರೋಧಿಗಳು. ಇಂಥ ಸಂಘಟನೆ ಬ್ಯಾನ್ ಬಗ್ಗೆ ಬಿಜೆಪಿಯವರು ಮಾತಾಡುತ್ತಿಲ್ಲ. ಅವರ ಮೂಲಕ ಅಧಿಕಾರಕ್ಕೆ ಬರಬೇಕೆಂಬುದು ಬಿಜೆಪಿಗರ ಉದ್ದೇಶ. ಮುಂದಿನ ತಿಂಗಳಿಂದ ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಮಾಡಲು ಹೋರಾಟ ನಡೆಸಲಾಗುವುದು ಎಂದರು.

    ಕೆರೂರ ಘಟನೆಗೆ ಖಂಡನೆ
    ಕೆರೂರನಲ್ಲಿ ನಡೆದ ಘಟನೆಯನ್ನು ಖಂಡಿಸಿದ ಮುತಾಲಿಕ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಆಸ್ಪತ್ರೆಯಲ್ಲಿದ್ದು, ಕೆಲವರು ಜೈಲಿನಲ್ಲಿದ್ದಾರೆ. ಪಟ್ಟಣದ ಮೂಲಕ ಇಸ್ಲಾಂ ಹೇಗೆ ಹರಡುತ್ತಿದೆ ಎಂಬುದು ಈ ಘಟನೆಯಿಂದ ಗೊತ್ತಾಗಲಿದೆ. ಭಯೋತ್ಪಾದನೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಕುಕೃತ್ಯ ಸಾಕ್ಷಿ. ಹಿಂದು ಹುಡುಗಿಯರನ್ನು ಚುಡಾಯಿಸುವುದನ್ನು ತಡೆಯಲು ಹೋದಾಗ ಈ ಘಟನೆ ನಡೆದಿದೆ. ಇನ್ಮುಂದೆ ಇದು ನಡೆಯಲ್ಲ. ಹಿಂದು ಸಮಾಜ ಜಾಗೃತವಾಗಿದೆ. ಹೋರಾಟ ಮಾಡುವುದಾದರೆ ದೇಶದ ಸಂವಿಧಾನದ ಆಧಾರದ ಮೇಲೆ ಮಾಡಿ. ಅದನ್ನು ಬಿಟ್ಟು ಚಾಕು ಅಥವಾ ತಲವಾರ್ ಹಿಡಿದುಕೊಂಡು ಬರಲು ಇದು ತಾಲಿಬಾನ್ ಅಲ್ಲ ಎಂದು ಮುಸ್ಲಿಮರ ವಿರುದ್ಧ ಕಿಡಿಕಾರಿದರು.

    ಸಿದ್ದುಗೆ ಹಣ ವಾಪಸ್
    ಸಿದ್ದರಾಮಯ್ಯ ಅವರು ನೀಡಿದ ಹಣ ವಾಪಸ್ ಮಾಡಿದ ಅಲ್ಪಸಂಖ್ಯಾತ ಮಹಿಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುತಾಲಿಕ್, ಮುಸ್ಲಿಮರನ್ನು ಕಾಂಗ್ರೆಸ್ ಎಲ್ಲಿಯವರೆಗೆ ಮತಬ್ಯಾಂಕ್ ಆಗಿ ಉಪಯೋಗಿಸಿದೆ ಎಂಬುದು ಇದರಿಂದ ಗೊತ್ತಾಗಿದೆ. ಅವರೂ ಕಿಮ್ಮತ್ತು ಕೊಡುತ್ತಿಲ್ಲ ಎಂಬುದಕ್ಕೆ ಕೆರೂರಿನ ಮುಸ್ಲಿಂ ಮಹಿಳೆ ಹಣ ಮರಳಿ ಎಸೆದಿದ್ದೇ ಸಾಕ್ಷಿ. ನೀವು ಬೆಳೆಸಿದ ಭಯೋತ್ಪಾದಕರು, ಗೂಂಡಾಗಳು ಈಗ ತಿರುಗಿ ಬಿದ್ದಿದ್ದಾರೆ. 2047ಕ್ಕೆ ಇಸ್ಲಾಂ ರಾಷ್ಟ್ರ ಘೋಷಣೆ ಮಾಡುವುದಾಗಿ ಬಿಹಾರದಲ್ಲಿ ಸಿಕ್ಕಿರುವ ಭಯೋತ್ಪಾದಕರು ಹೇಳಿದ್ದಾರೆ. ಇದು ಕಾಂಗ್ರೆಸ್‌ಅನ್ನೂ ನುಂಗಿ ಹಾಕುತ್ತದೆ. ತಲವಾರ್, ಕೊಲೆ ಮುಖ್ಯ ಎಂದರೆ ಮುಸ್ಲಿಮರಿಗೆ ಈ ದೇಶದಲ್ಲಿ ಜಾಗ ಇಲ್ಲ. ಬೇರೆ ಎಲ್ಲಾದರೂ ಹೋಗಿ ಬದುಕಿ ಎಂದರು.

    ಸರ್ಕಾರದ ವಿರುದ್ಧ ಆಕ್ರೋಶ
    ಹರ್ಷನ ಕೊಲೆಯ ನಂತರ ಹಿಂದುಗಳ ಮೇಲೆ ಐದು ಬಾರಿ ಹಾಡುಹಗಲೇ ಹಲ್ಲೆಯಾಯಿತು. ಶಿವಮೊಗ್ಗದಲ್ಲಿ ಎಲ್ಲ ನಾಯಕರು ಹಿಂದು ಜನಪ್ರತಿನಿಧಿಗಳಿದ್ದರೂ ಕೊಲೆಯಾಗುತ್ತಿದೆ ಎಂದರೆ ಏನರ್ಥ? ಹರ್ಷ ಕೊಲೆ ಇನ್ನೂ ಹಸಿ ಹಸಿಯಾಗಿದ್ದಾಗಲೇ ಕೊಲೆಗಡುಕರು ಜೈಲಲ್ಲಿ ವಿಡಿಯೋ ಕಾಲ್ ಮಾಡಿ ಆನಂದವಾಗಿ ಮಾತನಾಡುತ್ತಾರೆ ಎಂದರೆ ಜೈಲುಗಳೇನು ಹಾಸ್ಟೆಲ್‌ಗಳಾ? ಬಿಜೆಪಿಯ ವೈಫಲ್ಯವಿದು. ಇದರಿಂದ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಹಿಂದುಗಳು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.

    ಸೋನಿಯಾಗಾಂಧಿ ಮೂಲಕ ಮುಂದಿನ ಮೂರು ತಲೆ ಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆಂಬ ಮಾಜಿ ಸ್ಪೀಕರ್ ರಮೇಶಕುಮಾರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುತಾಲಿಕ್, ಕಾಂಗ್ರೆಸ್‌ನವರು ಏನು ಮಾಡಿದ್ದಾರೆಂಬುದು ರಮೇಶ ಕುಮಾರ ಬಾಯಿ ಮೂಲಕ ಹೊರಬಂದಿದೆ. ಹೀಗಾಗಿ ಮೊಘಲರು, ಬ್ರಿಟಿಷರ ರೂಪದಲ್ಲಿ ಕ್ರೈಸ್ತರು, ನೆಹರು ಮನೆತನದ ಮೂಲಕ ದೇಶವನ್ನು ಈವರೆಗೂ ಲೂಟಿ ಮಾಡಿದ್ದಾರೆ. ಇದನ್ನು ತಡೆಯುವ ಶಕ್ತಿ ಪ್ರಧಾನಿ ಮೋದಿ ಹಾಗೂ ಯೋಗಿ ಅವರಿಗೆ ಬರಲಿ ಎಂದು ವಿನಂತಿಸುವೆ ಎಂದರು.

    ಚುನಾವಣೆಗೆ ನಿಲ್ಲಲ್ಲ
    ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಮುತಾಲಿಕ್, ನಮ್ಮಂಥ ಹೋರಾಟಗಾರರಿಗೆ, ಹಿಂದುತ್ವವಾದಿಗಳಿಗೆ ಸದ್ಯದ ರಾಜಕೀಯದಲ್ಲಿ ಅವಕಾಶ ಇಲ್ಲ. ಕಳ್ಳರು, ಭ್ರಷ್ಟರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ ಇದೆ. ಹೀಗಾಗಿ ನಿಶ್ಚಿತವಾಗಿ ಚುನಾವಣೆಗೆ ನಿಲ್ಲಲ್ಲ ಎಂದು ಪ್ರಮೋದ ಮುತಾಲಿಕ್ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts