More

    ಸಂಧಾನಕ್ಕೆ ಬಂದ್ರಾ ಸಚಿವ ಸೋಮಣ್ಣ?

    ಪರಶುರಾಮ ಭಾಸಗಿ ವಿಜಯಪುರ

    ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಪದೇ ಪದೇ ಸ್ವಪಕ್ಷೀಯರ ವಿರುದ್ಧ ಹಿಗ್ಗಾಮುಗ್ಗಾ ಭಾಷಣ ಬಿಗಿಯುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಸುಮ್ಮನಿರಿಸಲೆಂದೇ ವಸತಿ ಸಚಿವ ವಿ. ಸೋಮಣ್ಣ ಸಂಧಾನಕಾರರಾಗಿ ಬಂದರಾ?
    ಒಂದೊಮ್ಮೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಬೈದಾಡಿಕೊಂಡಿದ್ದ ಇದೇ ಸಚಿವ ವಿ. ಸೋಮಣ್ಣ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇದೀಗ ಪರಸ್ಪರ ಹೊಗಳಿ ಹೊನ್ನಶೂಲಕ್ಕೇರಿಸಿಕೊಂಡಿದ್ದು ನೋಡಿದರೆ ಸಹಜವಾಗಿಯೇ ಇಂಥದ್ದೊಂದು ಅನುಮಾನ ಕಾಡುತ್ತಿದೆ. ಮಾತ್ರವಲ್ಲ ಭಾಷಣದುದ್ದಕ್ಕೂ ಒಬ್ಬರಿಗೊಬ್ಬರು ಹಾಡಿ ಹೊಗಳಿದ್ದು ನೋಡಿದರೆ ತೆರೆ ಮರೆಯಲ್ಲೇನೋ ಕಸರತ್ತು ನಡೆದಿರಲೇಬೇಕೆಂಬ ಮಾತು ಪಕ್ಷದ ಆಂತರಿಕ ವಲಯದಲ್ಲಿ ಅನುರಣಿಸುತ್ತಿದೆ.
    ಅಂದ ಹಾಗೆ ಇಷ್ಟೆಲ್ಲಾ ಹೊಗಳಿಕೆಗೆ ವೇದಿಕೆಯಾಗಿದ್ದು ನಗರ ಹೊರವಲಯದ ಮಹಾನಗರ ಪಾಲಿಕೆ ಜಾಗೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ 1493(ಜಿ ಪ್ಲಸ್ 1 ಮಾದರಿ) ಮನೆಗಳ ಶಂಕು ಸ್ಥಾಪನೆ ಕಾರ್ಯಕ್ರಮ. ಭಾಷಣದುದ್ದಕ್ಕೂ ಅಭಿವೃದ್ಧಿಗಿಂತ ಹೊಗಳಿಕೆಯೇ ಪ್ರಧಾನವಾಗಿದ್ದು, ಚರ್ಚೆಗೆ ಎಡೆಮಾಡಿತು.

    ಸಿಎಂ ಸಂದೇಶ ತಲುಪಿಸಿದ ಸೋಮಣ್ಣ

    ಶಾಸಕ ಯತ್ನಾಳ ಖುಷಿಯಿಂದಿದ್ದರೆ ನಾವೆಲ್ಲ ಖುಷಿ ಎಂಬ ಸಂದೇಶವನ್ನು ಸಿಎಂ ಯಡಿಯೂರಪ್ಪ ಅವರೇ ನನ್ನ ಮೂಲಕ ಕಳುಹಿಸಿದ್ದಾಗಿ ಸಚಿವ ವಿ. ಸೋಮಣ್ಣ ತಿಳಿಸಿದರು. ಕಾರ್ಯಕ್ರಮಕ್ಕೆ ಬರುವ ಮುನ್ನ ಸಿಎಂ ಅವರನ್ನು ಭೇಟಿ ಮಾಡಲಾಗಿ ‘ಏನಪ್ಪ ತರಾತುರಿಯಲ್ಲಿ ಕಾರ್ಯಕ್ರಮ ಫಿಕ್ಸ್ ಮಾಡಿದೆಯಲ್ಲ’ ಎಂದು ತಮಾಷೆ ಮಾಡಿದರು. ಆಗ, ‘ಯತ್ನಾಳರು ಮೊದಲೇ ಎಕೆ-47 ಇದ್ದಂತೆ ಪದೇ ಪದೇ ಕಾರ್ಯಕ್ರಮ ಮುಂದೆ ಹಾಕಲಾಗಲ್ಲ’ ಎಂದಾಗ ಸಿಎಂ ಸಹ ‘ಯತ್ನಾಳ ಖುಷಿಯೇ ನಮ್ಮ ಖುಷಿ’ ಎಂಬ ಸಂದೇಶ ರವಾನಿಸಿದರೆಂದು ಸಚಿವ ಸೋಮಣ್ಣ ತಿಳಿಸಿದರು.
    ‘ನಿನ್ನೆ ಯತ್ನಾಳರೊಂದಿಗೆ ಔಪಚಾರಿಕವಾಗಿ ಮಾತನಾಡಿರುವೆ. ನಾವೆಲ್ಲ ರಾಜ್ಯಕ್ಕೆ ಒಂದು ಸಂದೇಶ ಕಳುಹಿಸಬೇಕಿದೆ. ಯತ್ನಾಳರದ್ದು ಮಗುವಿನಂಥ ಮನಸ್ಸು. ನಿಷ್ಕಲ್ಮಷವಾದುದು. ಕೆಲವೊಮ್ಮೆ ಜಗಳಾಡುತ್ತೇವೆ. ಮನೆ ಎಂದ ಮೇಲೆ ಇದೆಲ್ಲಾ ಇದ್ದಿದ್ದೆ. ಈಗ ನೋಡಿ ಯತ್ನಾಳ ಎಷ್ಟು ಖುಷಿಯಾಗಿದ್ದಾರೆ. ಎನ್ನುವ ಮೂಲಕ ವಿ. ಸೋಮಣ್ಣ ಯತ್ನಾಳರೊಳಗಿನ ಆಂತರಿಕ ಬದಲಾವಣೆ ತೋರಿಸಲೆತ್ನಿಸಿದರು.

    ಯತ್ನಾಳರಿಂದ ಡೆಡ್‌ಲೈನ್

    ಪ್ರತಿಯಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ವಿ. ಸೋಮಣ್ಣ ಪರ ಇನ್ನಿಲ್ಲದ ಆದರ ತೋರಿದರು. ನನ್ನ ಹಾಗೂ ಸೋಮಣ್ಣ ನಡುವೆ ಯಾವುದೇ ಜಗಳವಿಲ್ಲ. ಕೆಲವರಿಗೆ ಜಗಳ ಹಚ್ಚುವುದೇ ಉದ್ಯೋಗವಾಗಿದೆ. ನನ್ನ ಹಾಗೂ ಸೋಮಣ್ಣ ಅವರ ನಡುವಿನ ಸಂಭಾಷಣೆಯನ್ನು ಎಡಿಟ್ ಮಾಡಿ ಪ್ರಚಾರ ಮಾಡುತ್ತಾರೆ. ಅಂಥವರಿಗೆ ಅದೇ ಉದ್ಯೋಗ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಒಂದು ಕುಟುಂಬ, ಒಂದು ಮನೆ ಎಂದರೆ ಜಗಳ ಸಾಮಾನ್ಯ, ಜಗಳವಾಡುವ ತಂದೆ- ಮಕ್ಕಳು ಮತ್ತೆ ಕೂರುವುದಿಲ್ಲವೇ? ಎನ್ನುವ ಮೂಲಕ ಹಿಂದಿನ ಮನಸ್ತಾಪಕ್ಕೆ ತೆರೆ ಎಳೆದರು.
    ಯಡಿಯೂರಪ್ಪ ಅವರ ಅವಧಿಯಲ್ಲಿ ನಾನೆಂದೂ ಸಿಎಂ ಆಗಲ್ಲ ಎಂದಿದ್ದ ಯತ್ನಾಳರು ಇದೀಗ ಮತ್ತದೇ ಮಾತು ಪುನರುಚ್ಚರಿಸುವುದರ ಜತೆಗೆ ನ.25 ರವರೆಗೂ ಕಾಯಿರಿ ಎನ್ನುವ ಮೂಲಕ ಮತ್ತೆ ಕುತೂಹಲ ಹೆಚ್ಚಿಸಿದರು. ನಾನು ಮಂತ್ರಿ ಆಕಾಂಕ್ಷಿಯಲ್ಲ. ಜಿಲ್ಲೆಯಲ್ಲಿ ಯಾರಿಗಾದರೂ ಮಂತ್ರಿ ಮಾಡಿ ಎನ್ನುತ್ತಲೇ ನ. 25 ರ ಡೆಡ್‌ಲೈನ್ ನೀಡಿದ್ದು ಕುತೂಹಲಕ್ಕೆ ಕಾರಣವಾಯಿತು.
    ಈ ಮಧ್ಯೆ ‘ಯತ್ನಾಳರೊಂದಿಗಿನ ಸಂಧಾನ ಯಶಸ್ವಿಯಾಯಿತೇ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿ. ಸೋಮಣ್ಣ, ‘ಎಲ್ಲಾ ಆಗಿದೆ ನೀವೇ ನೋಡಿ ಯತ್ನಾಳ ಎಷ್ಟು ಖುಷಿ ಖುಷಿಯಾಗಿದ್ದಾರೆ’ ಎಂದು ಮುಗುಳ್ನಕ್ಕು ಮುನ್ನಡೆದಿದ್ದು ಇದೊಂದು ರಾಜಿ ಸಂಧಾನದ ಕಾರ್ಯಕ್ರಮ ಎಂಬುದಕ್ಕೆ ಪುಷ್ಟಿ ನೀಡಿತು.

    ಪ್ರಮುಖರ ಗೈರು

    ಸಿಎಂ ಯಡಿಯೂರಪ್ಪ ಅವರೇ ಭೂಮಿ ಪೂಜೆ ನೆರವೇರಿಸಬೇಕಿದ್ದ ಕಾರ್ಯಕ್ರಮ ತರಾತುರಿಯಲ್ಲಿ ನಿಗದಿಯಾಗಿದ್ದರ ಹಿಂದೆ ಸಂಧಾನ ಸೂತ್ರವೇ ಅಡಗಿರುವ ಲೆಕ್ಕಾಚಾರವಿದೆ. ಸದರಿ ಕಾರ್ಯಕ್ರಮಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವೆ, ಸಂಸದರು ಹಾಗೂ ಕೆಲ ಶಾಸಕರು ಸಹ ಇಲ್ಲದಿರುವುದು ಇದೊಂದು ಪೂರ್ವ ನಿಯೋಜಿತವಲ್ಲದ ಕಾರ್ಯಕ್ರಮ ಎಂಬುದು ಸ್ಪಷ್ಟವಾಯಿತು. ಪಕ್ಷದ ಬಹುತೇಕ ಕಾರ್ಯಕರ್ತರು ಮತ್ತು ಮುಖಂಡರು ಕಾರ್ಯಕ್ರಮದಿಂದ ದೂರವುಳಿದಿದ್ದು ಸಹ ಪಕ್ಷದ ಆಂತರಿಕ ಭಿನ್ನಮತ ಬಯಲಾಗಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts