More

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದಿನಿಂದ

    ಧಾರವಾಡ: ರಾಜ್ಯ ಚುನಾವಣೆ ಆಯೋಗದ ಆದೇಶದಂತೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಆ. 16ರಂದು ಅಧಿಸೂಚನೆ ಹೊರಡಿಸಲಾಗುವುದು. ಮಾದರಿ ನೀತಿ ಸಂಹಿತೆಯು ಆ. 16ರಿಂದ ಸೆ. 6ರವರೆಗೆ ಜಾರಿಯಲ್ಲಿರಲಿದೆ. ಅಭ್ಯರ್ಥಿಗಳಿಗೆ ಅಗತ್ಯ ವಿವಿಧ ಪರವಾನಗಿ ನೀಡಲು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ತಮ್ಮ ಕಚೇರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

    82 ವಾರ್ಡ್​ಗಳಿಗೆ ಚುನಾವಣೆ ಜರುಗಲಿದ್ದು, 8,11,537 ಮತದಾರರಿದ್ದಾರೆ. ಆ. 16ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, 23 ಕೊನೆಯ ದಿನ. 24ರಂದು ಪರಿಶೀಲನೆ ನಡೆಯಲಿದೆ. ವಾಪಸ್ ಪಡೆಯಲು 26 ಕೊನೆಯ ದಿನ. ಸೆ. 3ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ಜರುಗಲಿದೆ. ಸೆ. 6ರಂದು ಮತಗಳ ಎಣಿಕೆ ಜರುಗಲಿದೆ ಎಂದರು.

    ಜು. 9ರಂದು ಅಂತಿಮ ಮತದಾರರ ಪಟ್ಟಿ ತಯಾರಿಸಲಾಗಿದೆ. 4,03,497 ಪುರುಷ ಹಾಗೂ 4,07,954 ಮಹಿಳಾ ಹಾಗೂ 86 ಇತರೆ ಸೇರಿ 8,11,537 ಮತದಾರರಿದ್ದಾರೆ. ಅಭ್ಯರ್ಥಿಗಳು ಗರಿಷ್ಠ 3 ಲಕ್ಷ ರೂ. ವೆಚ್ಚ ನಿಗದಿಪಡಿಸಲಾಗಿದೆ. ವೆಚ್ಚ ಪರಿಶೀಲನೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, ಐಎಎಸ್ ಪ್ರೊಬೇಷನರಿ ಅಧಿಕಾರಿ ಮಾಧವ ಗಿತ್ತೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಇದ್ದರು.

    ಎರಡು ಕೇಂದ್ರಗಳಿಗೆ ನೇಮಕ: ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಅಗತ್ಯ ವಿವಿಧ ಪರವಾನಗಿ ನೀಡಲು ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಾರ್ಡ್ ನಂ. 1ರಿಂದ 30ರವರೆಗೆ ವಲಯ ಕಚೇರಿ ನಂ. 1ರ ಸಹಾಯಕ ಆಯುಕ್ತ ಆರ್. ದಶವಂತ (ಮೊ: 9741089724) ಹಾಗೂ ವಾರ್ಡ್ ನಂ. 31ರಿಂದ 82ರವರೆಗೆ ವಲಯ ಕಚೇರಿ ನಂ. 11ರ ಅಭಿವೃದ್ಧಿ ಅಧಿಕಾರಿ ಎ.ವೈ. ಕಾಂಬಳೆ (ಮೊ: 9880422978) ಅವರನ್ನು ನೇಮಿಸಲಾಗಿದೆ.

    ಮಸ್ಟರಿಂಗ್, ಡಿ ಮಸ್ಟರಿಂಗ್ ಕೇಂದ್ರಗಳು: ವಾರ್ಡ್ 1ರಿಂದ 34ರವರೆಗೆ ಧಾರವಾಡದ ಆರ್​ಎಲ್​ಎಸ್ ಪದವಿ ಪೂರ್ವ ಮಹಾವಿದ್ಯಾಲಯ, ವಾರ್ಡ್ 35ರಿಂದ 82ರವರೆಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಬಾಲಕ- ಬಾಲಕಿಯರ ಪ್ರೌಢಶಾಲೆಯನ್ನು ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರಗಳಿಗಾಗಿ ಗುರುತಿಸಲಾಗಿದೆ.

    ಮತಯಂತ್ರಗಳ ಬಳಕೆ: 82 ವಾರ್ಡ್​ಗಳಿಗೆ 837 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಚುನಾವಣೆಗೆ ಇ.ವಿ.ಎಂ ಯಂತ್ರಗಳನ್ನು ಬಳಸಲಾಗುತ್ತಿದ್ದು, ವಿವಿಪ್ಯಾಟ್ ಇರುವುದಿಲ್ಲ. ನೇಮಕಗೊಂಡ ಸೆಕ್ಟರ್ ಅಧಿಕಾರಿ, ಮೈಕ್ರೋ ಅಬ್ಸರ್​ವರ್, ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲು ನುರಿತ ಮಾಸ್ಟರ್ ಟ್ರೖೆನರ್​ಗಳನ್ನು ಗುರುತಿಸಲಾಗಿದೆ.

    ಸೆ. 6ರಂದು ಮತ ಎಣಿಕೆ: 82 ವಾರ್ಡ್ ಗಳ ಮತ ಎಣಿಕೆಯನ್ನು ಸೆ. 6ರಂದು ಬೆಳಗ್ಗೆ 8 ಗಂಟೆಯಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ನಡೆಸಲಾಗುವುದು.

    ದೂರು ನಿರ್ವಹಣೆಗೆ ಸಹಾಯವಾಣಿ: ಚುನಾವಣೆಗೆ ಸಂಬಂಧಿಸಿದ ದೂರುಗಳ ನಿರ್ವಹಣೆಗಾಗಿ ಸಹಾಯವಾಣಿ ತೆರೆಯಲಾಗಿದೆ. ದೂ: 0836-2213888, 2213869, 2213886 ಮತ್ತು 2213889ಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

    ಮಾದರಿ ನೀತಿ ಸಂಹಿತೆ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆ. 16ರಿಂದ ಸೆ. 6ರವರೆಗೆ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಚಿವರು, ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ಸಾರ್ವಜನಿಕ ಸೇವೆಯಲ್ಲಿರುವ ಇತರ ನೌಕರರಿಗೆ ಮಾದರಿ ನೀತಿ ಸಂಹಿತೆ ಅನ್ವಯ.

    ಯಾವುದಕ್ಕೆ ಅವಕಾಶ: ಪಾಲಿಕೆ ಚುನಾವಣೆ ಪೂರ್ವದಲ್ಲಿ ಆರಂಭಿಸುವ, ಜಾರಿಯಲ್ಲಿರುವ ಕಾಮಗಾರಿಗಳನ್ನು ಮುಂದುವರಿಸಲು, ಹಣ ಪಾವತಿಸಲು ಅವಕಾಶ. ನೆರೆಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಪರಿಹಾರ ಅಥವಾ ಸೌಲಭ್ಯ ನೀಡಬಹುದು. ಸಾಂಸ್ಕೃತಿಕ ಹಾಗೂ ಧಾರ್ವಿುಕ ಸಭೆ- ಸಮಾರಂಭ ನಡೆಸಬಹುದು. ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದರೆ ನಿಲ್ಲಿಸುವ ಅಗತ್ಯವಿಲ್ಲ. ತುರ್ತು ಸೇವೆಗೆ ನೇಮಕಾತಿ ಅವಶ್ಯವಿದ್ದರೆ ಆಯೋಗದ ಅನುಮೋದನೆ ಪಡೆದು ನೇಮಕಾತಿ ಮಾಡಬಹುದು. ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ವ್ಯಕ್ತಿಗಳು ಸಭೆ- ಸಮಾರಂಭ ನಡೆಸಬಹುದು.

    ಯಾವುದಕ್ಕೆ ನಿರ್ಬಂಧ: ಹೊಸ ಕಾಮಗಾರಿಗೆ ನಿರ್ಬಂಧಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸಚಿವರು, ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಮತ್ತು ಇತರ ಸಭೆಗೆ ಅವಕಾಶವಿಲ್ಲ. ರಾಜಕೀಯ ನಾಯಕರ ಉಪಸ್ಥಿತಿಯ ಸಮಾರಂಭಕ್ಕೆ ನಿಷೇಧ. ರಾಜಕೀಯ ವ್ಯಕ್ತಿಗಳು ಸಭೆಯಲ್ಲಿ ಭಾಗವಹಿಸಿ ಮತದಾರರ ಮೇಲೆ ಪರಿಣಾಮ ಬೀರುವ ಘೊಷಣೆ, ಹೇಳಿಕೆ ಅಥವಾ ಆಶ್ವಾಸನೆಗಳನ್ನು ನೀಡುವಂತಿಲ್ಲ. ರಾಜಕೀಯ ವ್ಯಕ್ತಿಗಳು ಜಿಲ್ಲಾ ಅಥವಾ ತಾಲೂಕು ಮಟ್ಟದಲ್ಲಿ ಅವರ ಸಾಮಾನ್ಯ ಕರ್ತವ್ಯ ನಿರ್ವಹಣೆಗೆ ಒದಗಿಸಲಾಗಿರುವ ವಾಹನವನ್ನು ಚುನಾವಣೆ ಪ್ರಚಾರ ಅಥವಾ ಚುನಾವಣೆ ಸಂಬಂಧಿತ ಸಭೆಗಳಿಗೆ ಬಳಸುವಂತಿಲ್ಲ. ನೇಮಕಾತಿ ಪಟ್ಟಿಯನ್ನು ಪ್ರಕಟಿಸುವಂತಿಲ್ಲ. ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಅವಕಾಶವಿಲ್ಲ. ನಗರ, ಪುರ, ಪಟ್ಟಣ ಪ್ರದೇಶದಲ್ಲಿ ಶಾಸಕ- ಸಚಿವರು ಕಾರ್ಯಕ್ರಮ ಆಯೋಜಿಸಿ ಮತದಾರರ ಮೇಲೆ ಪ್ರಭಾವ ಬೀರುವಂಥ ಸಮಾರಂಭ ನಡೆಸುವುದನ್ನು ನಿಷೇಧ. ಪರವಾನಗಿ ಪಡೆಯದೆ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನ ಮಾಡುವಂತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿನ ಪೊಲೀಸ್ ಹಾಗೂ ಇತರ ಇಲಾಖೆಗಳ ಸರ್ಕಾರಿ ನೌಕರರನ್ನು ಆಯೋಗದ ಅನುಮತಿ ಇಲ್ಲದೆ ವರ್ಗಾವಣೆ ಮಾಡುವಂತಿಲ್ಲ.

    ಸದಾಚಾರ ಸಂಹಿತೆ ತಂಡಗಳ ನೇಮಕ: ಸದಾಚಾರ ಸಂಹಿತೆ ತಂಡಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ. 82 ವಾರ್ಡ್​ಗಳಿಗೆ ವಾಣಿಜ್ಯ ತೆರಿಗೆ, ಅಬಕಾರಿ, ಪೊಲೀಸ್ ಇಲಾಖೆ ಹಾಗೂ ವಿಡಿಯೋಗ್ರಾಫರ್​ಗಳನ್ನು ಒಳಗೊಂಡ 8 ಮಾದರಿ ನೀತಿ ಸಂಹಿತೆ ತಂಡಗಳು ಕಾರ್ಯನಿರ್ವಹಿಸಲಿವೆ. ಜಿಲ್ಲಾ ನೋಡಲ್ ಅಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, (ಮೊ: 9731008189, 7018897824) ಅವರನ್ನು ನೇಮಿಸಲಾಗಿದೆ. ವಾರ್ಡ್ 1ರಿಂದ 10ರವರೆಗೆ ಧಾರವಾಡ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಹಾಯಕ ಕೃಷಿ ನಿರ್ದೇಶಕ (ಜಾರಿ ದಳ) ರಾಘವೇಂದ್ರ ಬಮ್ಮಿಗಟ್ಟಿ (ಮೊ: 8277931274), ವಾರ್ಡ್ 11ರಿಂದ 20ರವರೆಗೆ ಧಾರವಾಡ ಎಪಿಎಂಸಿ ಕಾರ್ಯದರ್ಶಿ ವಿ.ಜಿ. ಹಿರೇಮಠ (ಮೊ: 9901421363), ವಾರ್ಡ್ 21ರಿಂದ 30ರವರೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣ ಜಾನುವಾರು ಸಂವರ್ಧನ ಮತ್ತು ತರಬೇತಿ ಉಪ ನಿರ್ದೇಶಕ ರಮೇಶ ದೊಡಮನಿ (ಮೊ: 9916190345), ವಾರ್ಡ್ 31ರಿಂದ 40ರವರೆಗೆ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಟೇಶ ಎಚ್.ಟಿ. (ಮೊ: 9902821359), ವಾರ್ಡ್ 41ರಿಂದ 51ರವರೆಗೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ ಮಡಿವಾಳಪ್ಪ (ಮೊ: 8867495018), ವಾರ್ಡ್ 52ರಿಂದ 61ರವರೆಗೆ ಹುಬ್ಬಳ್ಳಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿ.ವೈ. ರ್ಯಾಗಿ, ವಾರ್ಡ್ 62ರಿಂದ 71ರವರೆಗೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕ್ವಾಲಿಟಿ ಕಂಟ್ರೋಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಂದ್ರ ಹುರಕಡ್ಲಿ (ಮೊ: 9980516931), ವಾರ್ಡ್ 72ರಿಂದ 82ರವರೆಗೆ ಹುಬ್ಬಳ್ಳಿ ಪಂಚಾಯತ್ ರಾಜ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಆರ್. ವೀರಕರ (ಮೊ: 8277071511) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

    ಬಿಜೆಪಿ ಉಸ್ತುವಾರಿಗಳ ನೇಮಕ: ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದಲ್ಲಿ ನಡೆಯಲಿರುವ ಮೂರು ಮಹಾನಗರಪಾಲಿಕೆಗಳ ಚುನಾವಣೆಗೆ ಸಂಬಂಧಿಸಿ ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ರಾಜ್ಯಸಮಿತಿ ಉಪಾಧ್ಯಕ್ಷ ನಿರ್ಮಲಕುಮಾರ ಸುರಾಣಾ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ನೇಮಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಉಸ್ತುವಾರಿಗಳಾಗಿ ರಾಜ್ಯದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ, ಕ್ಷೇತ್ರದ ಸಂಸದರು, ಶಾಸಕರು ಮತ್ತು ಪಕ್ಷದ ಪ್ರಮುಖರು ಚುನಾವಣೆ ಉಸ್ತುವಾರಿ ತಂಡದಲ್ಲಿರುತ್ತಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ತಿಳಿಸಿರುವುದಾಗಿ ಜಿಲ್ಲಾ ಮಾಧ್ಯಮ ವಕ್ತಾರ ರವಿ ನಾಯಕ ಪ್ರಕಟಣೆಯಲ್ಲಿ ಹೇಳಿದ್ದಾರೆ.

    ಪೊಲೀಸ್ ಠಾಣೆಗೆ ಆಯುಧ ಒಪ್ಪಿಸಲು ಸೂಚನೆ: ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಲೈಸೆನ್ಸ್ ಹೊಂದಿದ ಬಂದೂಕು ಹಾಗೂ ಆಯುಧಗಳನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಲು ಅವುಗಳ ಮಾಲೀಕರಿಗೆ ಸೂಚಿಸಲಾಗಿದೆ. ಚುನಾವಣೆ ಅವಧಿಯಲ್ಲಿ ಆಯುಧ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಅವುಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಟ್ಟು ಸ್ವೀಕೃತಿ ಪತ್ರ ಪಡೆಯಬೇಕು. ಚುನಾವಣೆ ಪ್ರಕ್ರಿಯೆ ಮುಗಿದು ಒಂದು ವಾರದ ನಂತರ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳು ಆಯುಧಗಳನ್ನು ಬಿಡುಗಡೆ ಮಾಡಿ ಲೈಸೆನ್ಸ್​ದಾರರಿಗೆ ನೀಡಲಿದ್ದಾರೆ. ಈ ಆದೇಶ ಉಲ್ಲಂಘಿಸಿದವರನ್ನು ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಕಾಯ್ದೆ 1973 ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951ರ ಅಡಿ ದಂಡನೆಗೆ ಗುರಿಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತ ಲಾಭೂರಾಮ್ ತಿಳಿಸಿದ್ದಾರೆ. ಈ ಆದೇಶವು ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ, ಸಿಬ್ಬಂದಿಗೆ ಅನ್ವಯಿಸುವುದಿಲ್ಲ. ಬ್ಯಾಂಕ್ ಹಾಗೂ ಇತರ ಖಾಸಗಿ ಸಂಸ್ಥೆಗಳ ಸುರಕ್ಷತೆಗಾಗಿ ರಾಷ್ಟ್ರೀಕೃತ ಅಥವಾ ಸಂಸ್ಥೆಯ ಬ್ಯಾಂಕುಗಳಿಗೆ ಮತ್ತು ಸರ್ಕಾರವು ಪೂರೈಸಿದ ಆಯುಧ ಹೊಂದಿರುವ ವಿವಿಧ ಇಲಾಖೆ ರಕ್ಷಣಾ ಸಿಬ್ಬಂದಿಗೆ ಇದು ಅನ್ವಯಿಸುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts