More

    ವಿಜಯನಗರ ಜಿಲ್ಲಾ ಪಂಚಾಯಿತಿ ಮುಡಿಗೇರಿದ ನರೇಗಾ ಪ್ರಶಸ್ತಿಗಳು

    ಹೊಸಪೇಟೆ: ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು 2022-23ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುವಲ್ಲಿ ಸಾಧನೆ ಮಾಡಿದ ಕಾರಣ ವಿಜಯನಗರ ಜಿಪಂ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

    ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಅತ್ಯುತ್ತಮ ಒಗ್ಗೂಡಿಸುವಿಕೆ, ಶಿಕ್ಷಣ ಸ್ನೇಹಿ ಪಂಚಾಯತ್, ರೈತ ಬಂಧು ಪಂಚಾಯತ್ ಹಾಗೂ ಜಲಸಂಜೀವಿನಿ ಪಂಚಾಯತ್ ವಿಭಾಗಗಳಲ್ಲಿ ವಿಜಯನಗರ ಜಿಪಂ ಪ್ರಶಸ್ತಿ ಪಡೆದುಕೊಂಡಿದೆ. ಮಾ. 24ರ ಬೆಂಗಳೂರಿನಲ್ಲಿ ನಡೆಯಲಿರುವ ‘ಗಾಂಧಿ ಗ್ರಾಮ ಪುರಸ್ಕಾರ’ ಹಾಗೂ ‘ನರೇಗಾ ಹಬ್ಬ’ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಿದೆ.

    ಡಣಾಪುರ ಗ್ರಾಮ ಪಂಚಾಯಿತಿಯಲ್ಲಿ ಎನ್‌ಆರ್‌ಎಲ್‌ಎಂ ಮೂಲಕ ನಿಗದಿ ಪಡಿಸಿದ್ದ 325 ಮಾನವದಿನಗಳ ಗುರಿಗೆ 2463 ಮಾನವ ದಿನಗಳನ್ನು ಸೃಜಿಸಿ ಶೇ.757.85 ಸಾಧನೆ ಮಾಡಿದೆ. ಇದಕ್ಕಾಗಿ ‘ಅತ್ಯುತ್ತಮ ಒಗ್ಗೂಡಿಸುವಿಕೆ’ ವಿಭಾಗದಲ್ಲಿ ಜಿಲ್ಲಾ ಪುರಸ್ಕಾರಕ್ಕೆ ಭಾಜನವಾಗಿದೆ.

    ಹೂವಿನ ಹಡಗಲಿ ತಾಲೂಕಿನ ಒಟ್ಟು 141 ಸರ್ಕಾರಿ ಶಾಲೆಗಳಿಗೆ ತಡೆಗೋಡೆ, 11 ಶಾಲೆಗಳಿಗೆ ಅಡುಗೆ ಕೋಣೆ, 137 ಶಾಲೆಗಳಿಗೆ ಶೌಚಗೃಹ, 106 ಶಾಲೆಗಳಿಗೆ ಪೌಷ್ಟಿಕ ತೋಟ, 127 ಶಾಲೆಗಳಿಗೆ ಆಟದ ಮೈದಾನ, 141 ಶಾಲೆಗಳಿಗೆ ಮಳೆನೀರು ಕೊಯ್ಲು ಘಟಕಗಳನ್ನು ನಿರ್ಮಿಸಿದ ಕಾರಣ ‘ಶಿಕ್ಷಣ ಸ್ನೇಹಿ ಪಂಚಾಯತ್’ ಪುರಸ್ಕಾರಕ್ಕೆ ಪಾತ್ರವಾಗಿದೆ.

    ಹರಪನಹಳ್ಳಿ ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳ 524 ಹೆಕ್ಟೇರ್‌ಅನ್ನು 321 ಹೆಕ್ಟೇರ್ ಹೊಸ ಪ್ರದೇಶ ವಿಸ್ತರಿಸಿ, ನರೇಗಾ ಯೋಜನೆಯಡಿ 243 ಹೆಕ್ಟೇರ್ ಪ್ರದೇಶ ವಿಸ್ತರಣೆ ಕೈಗೊಂಡು 21 ವಿವಿಧ ತೋಟಗಾರಿಕೆ ಬೆಳೆಗಳನ್ನು ಅನುಷ್ಠಾನ ಮಾಡಿದ್ದಕ್ಕಾಗಿ ‘ರೈತ ಬಂಧು ಪಂಚಾಯತ್’ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

    ಜಲಸಂವೀನಿ ಯೋಜನೆಯಡಿ ಗ್ರಾಮದ ಸಾಮಾನ್ಯ ಮಾಹಿತಿಯನ್ನು ಕ್ರೋಡೀಕರಿಸಿ ಗ್ರಾಮಕ್ಕೆ ಬೇಕಾಗುವ ನೀರಿನ ಲಭ್ಯತೆಗೆ ಅನುಗುಣವಾಗಿ ನೀರಿನ ಆಯ-ವ್ಯಯವನ್ನು ಸಿದ್ಧಪಡಿಸಿ, ಮುಂದಿನ ಮೂರು ವರ್ಷಗಳಿಗೆ ದಿಬ್ಬದಿಂದ ಕಣಿವೆ ಮಾದರಿಯಲ್ಲಿ ಕ್ರಿಯಾಯೋಜನೆಯನ್ನು ವೈಜ್ಞಾನಿಕವಾಗಿ ಸಿದ್ದಪಡಿಸಿದ ಕಾರಣ ಜಿಲ್ಲೆಯ ಕೊಟ್ಟೂರು ತಾಲೂಕಿನ ಅಲಬೂರು ಗ್ರಾಮ ಪಂಚಾಯಿತಿ ‘ಜಲಸಂಜೀವಿನಿ ಪಂಚಾಯತ್’ ಪುರಸ್ಕಾರಕ್ಕೆ ಪಾತ್ರವಾಗಿದೆ.

    ವಿಜಯನಗರ ಜಿಲ್ಲೆಯ ಜಿಪಂ ವತಿಯಿಂದ ನರೇಗಾ ಯೋಜನೆಯಡಿ ಹತ್ತು ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ವಿನೂತನ ಕಾರ್ಯಕ್ರಮಗಳನ್ನು ಜನರಿಗೆ ಉದ್ಯೋಗ ಒದಗಿಸುವ ಜತೆಗೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪೂರಕವಾಗಿವೆ. ಎಲ್ಲ ಯೋಜನೆಗಳು ನಿಗದಿತ ಅವಧಿಯಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, ಗಮನಾರ್ಹ. ಜಿ.ಪಂ. ಸಿಬ್ಬಂದಿಯ ಪರಿಶ್ರಮದಿಂದ ಪ್ರಶಸ್ತಿಗಳು ಬಂದಿದ್ದು, ಜಿಲ್ಲೆಯ ಕೀರ್ತಿ ಹೆಚ್ಚಿದೆ.
    ಸದಾಶಿವ ಬಿ.ಪ್ರಭು
    ವಿಜಯನಗರ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts