More

    ಬಿಜೆಪಿ ಚಟುವಟಿಕೆ ಬಿರುಸು: ಸಿಎಂ-ಸಂತೋಷ್ ಭೇಟಿ ಕುತೂಹಲ, ಸಚಿವಾಕಾಂಕ್ಷಿಗಳ ಲಾಬಿ

    ಬೆಂಗಳೂರು: ಸಂಪುಟ ಭರ್ತಿ ವಿಚಾರವಾಗಿ ಬಿಜೆಪಿಯಲ್ಲಿ ಬಿಸಿಬಿಸಿ ವಾತಾವರಣ ಇರುವಾಗಲೇ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಚರ್ಚೆ ನಡೆಸಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಎಂ.ಟಿ.ಬಿ.ನಾಗರಾಜ್, ಮುನಿರತ್ನ, ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಪ್ರಯತ್ನಶೀಲರಾಗಿದ್ದಾರೆ. ಇದೇ ವೇಳೆ ಪಕ್ಷದ ಶಾಸಕರು ಸಚಿವ ಸ್ಥಾನಕ್ಕೆ ಮುಗಿಬಿದ್ದಿದ್ದಾರೆ. ಈ ಬೆಳವಣಿಗೆ ನಡೆದಿರುವಾಗಲೇ ಬಿ.ಎಲ್.ಸಂತೋಷ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.

    ಸಂಪುಟ ವಿಸ್ತರಣೆ ಕುರಿತು ಪಕ್ಷದ ವರಿಷ್ಠರ ಸಂದೇಶವನ್ನು ಸಂತೋಷ್ ಹೊತ್ತು ತಂದಿರಬಹುದೇ? ಯಾರನ್ನು ಕೈಬಿಟ್ಟು ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಕಟೀಲ್ ಸಿಎಂ ಜತೆ ಚರ್ಚೆ ನಡೆಸಿದರೇ ಎಂಬಿತ್ಯಾದಿಯಾಗಿ ಊಹಾಪೋಹ ಹರಿದಾಡಿದೆ. ಸಂತೋಷ್ ಅವರು ದೆಹಲಿ ರಾಜಕಾರಣದಲ್ಲಿ ಮುಳುಗಿದ ಮೇಲೆ ಬೆಂಗಳೂರಿಗೆ ಬಂದಾಗಲೆಲ್ಲ ಯಡಿಯೂರಪ್ಪ ಭೇಟಿ ಮಾಡುವುದು ವಾಡಿಕೆ ಮಾಡಿಕೊಂಡಿದ್ದಾರೆ. ಈ ಬಾರಿಯೂ ಅವರದ್ದು ಇಂಥದ್ದೇ ಒಂದು ಭೇಟಿ. ಭೇಟಿ ವೇಳೆ ಗ್ರಾ.ಪಂ. ಚುನಾವಣೆಗೆ ರಾಜ್ಯ ಘಟಕದ ತಯಾರಿ ಬಗ್ಗೆ ಮಾಹಿತಿ ನೀಡಿದ್ದಾರೆ ಮತ್ತು ಸಂಪುಟದ ಬಗ್ಗೆಯೂ ಸಣ್ಣ ಪ್ರಮಾಣದಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ಪ್ರತ್ಯೇಕ ಕೊಠಡಿಯಲ್ಲಿ ಅರ್ಧತಾಸು ಚರ್ಚೆ ನಡೆಸಿದ್ದು, ಯಾವೆಲ್ಲ ವಿಚಾರದಲ್ಲಿ ನಿರ್ಧಾರ ಮಾಡಿದ್ದಾರೆ ಎಂಬುದು ಖಚಿತವಾಗಿಲ್ಲ. ಗ್ರಾಮ ಪಂಚಾಯಿತಿ ತಯಾರಿ ಬಗ್ಗೆ ನಡೆದ ಸಭೆಯಲ್ಲಿ ಸಿಎಂ ಪಾಲ್ಗೊಳ್ಳಬೇಕಿತ್ತು. ಕಾರ್ಯದೊತ್ತಡ ಕಾರಣ ಅಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಕಟೀಲ್ ಅವರು ಸಿಎಂ ಭೇಟಿ ಮಾಡಿ ಸಭೆಯ ನಿರ್ಧಾರವನ್ನು ವಿವರಿಸಿದರೆಂದು ತಿಳಿದುಬಂದಿದೆ.

    ಏಳು ಸ್ಥಾನ ತುಂಬಿಕೊಳ್ಳಲು ಸಂಪುಟದಲ್ಲಿ ಅವಕಾಶವಿದೆ. ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಮುನಿರತ್ನಗೆ ಸಚಿವ ಸ್ಥಾನ ಕೊಡುವುದು ಅನಿವಾರ್ಯ. ಇವರೊಂದಿಗೆ ಸಿ.ಪಿ.ಯೋಗೇಶ್ವರ್ ಪ್ರಬಲ ಆಕಾಂಕ್ಷಿ. ಮಸ್ಕಿ ಕ್ಷೇತ್ರದಿಂದ ಪ್ರತಾಪ್​ಗೌಡ ಗೆಲುವು ಸಾಧಿಸಿದಲ್ಲಿ ಅವರಿಗೊಂದು ಸ್ಥಾನ ಮೀಸಲಿಡಬೇಕಾಗುತ್ತದೆ. ಹೀಗಾಗಿ ಉಳಿಯುವ 3 ಸ್ಥಾನಕ್ಕೆ ಪಕ್ಷದ ಕಡೆಯಿಂದ ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಅಂಗಾರ, ಸುನೀಲ್​ಕುಮಾರ್, ರಾಮದಾಸ್, ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸಿದ್ದು ಸವದಿ, ಮುರುಗೇಶ್ ನಿರಾಣಿ, ರಾಜೂ ಗೌಡ, ಶಿವನಗೌಡ ನಾಯ್್ಕ ಅರವಿಂದ ಲಿಂಬಾವಳಿಯಾಗಿ 13ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇತ್ತೀಚೆಗಷ್ಟೇ ಪಕ್ಷದ ಜವಾಬ್ದಾರಿ ತೆಗೆದುಕೊಂಡ ಸಿ.ಟಿ.ರವಿ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದು, ಆ ಸ್ಥಾನ ಚಿಕ್ಕಮಗಳೂರಿಗೆ ನೀಡಬೇಕಾಗುತ್ತದೆ, ಅದು ಎಂ.ಪಿ.ಕುಮಾರಸ್ವಾಮಿಗೆ ಖಚಿತ ಎನ್ನಲಾಗುತ್ತಿದೆ. ಹಾಲಿ ಸಚಿವೆ ಶಶಿಕಲಾ ಜೊಲ್ಲೆ ಕೈಬಿಟ್ಟರೆ ಮಹಿಳಾ ಕೋಟಾದಡಿ ಪೂರ್ಣಿಮಾಗೆ ಅವಕಾಶ ನೀಡಬೇಕಾಗುತ್ತದೆ, ಯಾರನ್ನೇ ಕೈಬಿಟ್ಟರೂ ಅವರಿಗೊಬ್ಬ ಪರ್ಯಾಯ ಇದ್ದಾರೆ. ಹೀಗಾಗಿ ಪ್ರಬಲರಿಗೆ ಹೇಗೆ ಅವಕಾಶ ಕಲ್ಪಿಸಬೇಕೆಂಬುದೇ ಸಿಎಂಗೆ ತಲೆನೋವಾಗಿದೆ.

    ಸಚಿವರುಗಳ ದೆಹಲಿ ಯಾತ್ರೆ?: ಸಂಪುಟ ವಿಸ್ತರಣೆ ಸರ್ಕಸ್ ನಡೆಯುತ್ತಿರುವ ಬೆನ್ನಲ್ಲಿಯೇ ಸಚಿವರುಗಳ ದೆಹಲಿ ಯಾತ್ರೆ ಸಹಜವಾಗಿ ಕುತೂಹಲ ಕೆರಳಿಸುತ್ತಿದೆ. ಕಂದಾಯ ಸಚಿವ ಆರ್.ಅಶೋಕ್ ಮತ್ತು ವಸತಿ ಸಚಿವ ವಿ.ಸೋಮಣ್ಣ ದೆಹಲಿಗೆ ತೆರಳಿರುವುದು ಕುತೂಹಲ ಹೆಚ್ಚಿಸಿದೆ. ಇಲಾಖೆ ಕೆಲಸದ ನಿಮಿತ್ತ ಸಚಿವರು ಭೇಟಿ ನೀಡಿದ್ದಾರೆಂಬ ವಿವರಣೆ ನೀಡಲಾಗುತ್ತಿದೆ ಆದರೂ, ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿಯೇ ಹೋಗಿದ್ದಾರೆ ಎನ್ನಲಾಗುತ್ತಿದೆ. ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸ್ವಾಮೀಜಿಗಳು, ಮುಖಂಡರು ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಬೇಕು ಎಂದು ಬೇಡಿಕೆ ಸಲ್ಲಿಸಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

    ಯೋಗೇಶ್ವರ್ ಚರ್ಚೆ: ಸಚಿವ ರಮೇಶ್ ಜಾರಕಿಹೊಳಿ ಅವರು ಸಚಿವಾಕಾಂಕ್ಷಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಬಿ.ಎಲ್.ಸಂತೋಷ್ ಭೇಟಿ ಮಾಡಿ ಬಂದರು. ಸಭೆ ಮುಗಿದ ಬಳಿಕ ಸಿ.ಪಿ.ಯೋಗೇಶ್ವರ್ ಬೇಸರದಲ್ಲಿ ಹೊರಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ ಸಿದ್ಧತೆ

    ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಸಮಾವೇಶಗಳನ್ನು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ನೇತೃತ್ವದಲ್ಲಿ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ಸಂಘಟನಾ ಸಭೆ ನಡೆಸಲಾಯಿತು. ಪಂಚರತ್ನ ಹಾಗೂ ಪಂಚಸೂತ್ರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ಧರಿಸಲಾಯಿತು. ನ.27ರಿಂದ ಡಿ.3ರ ತನಕ ಸಮಾವೇಶಗಳನ್ನು ನಡೆಸಲಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಪೇಜ್ ಪ್ರಮುಖ್ ನೇಮಕ ಮಾಡಲಾಗಿತ್ತು. ಈಗ ಪಂಚರತ್ನ ಹಾಗೂ ಪಂಚಸೂತ್ರಗಳನ್ನು ಜಾರಿ ಮಾಡಲಾಗುತ್ತದೆ. ಪಂಚಸೂತ್ರದಲ್ಲಿ ವಾರ್ ರೂಂಗಳು ಕಾರ್ಯ ನಿರ್ವಹಿಸಲಿವೆ. ಇದಲ್ಲದೆ ಕುಟುಂಬ ಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ ಎಂದು ಸಭೆ ಬಳಿಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಗ್ರಾಮ ಸ್ವರಾಜ್ ಸಮಾವೇಶಗಳನ್ನು ನಡೆಸುವ ಸಲುವಾಗಿ ನಳಿನ್​ಕುಮಾರ್ ಕಟೀಲ್, ಈಶ್ವರಪ್ಪ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಹಾಗೂ ಅಶೋಕ್ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಆ ತಂಡಗಳಲ್ಲಿ ಶಾಸಕರು ಹಾಗೂ ಸಂಸದರು ಇರುತ್ತಾರೆ ಎಂದರು.

    ಬಿಜೆಪಿ ಚಟುವಟಿಕೆ ಬಿರುಸು: ಸಿಎಂ-ಸಂತೋಷ್ ಭೇಟಿ ಕುತೂಹಲ, ಸಚಿವಾಕಾಂಕ್ಷಿಗಳ ಲಾಬಿ

    ಕಾಂಗ್ರೆಸ್​ಗೆ ಅಭ್ಯರ್ಥಿಗಳೇ ಇಲ್ಲ

    ಬೆಂಗಳೂರು: ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್​ಗೆ ಮಸ್ಕಿ ಹಾಗೂ ಬಸವಕಲ್ಯಾಣದಲ್ಲಿ ಅಭ್ಯರ್ಥಿಗಳೇ ಇಲ್ಲ. ಬೇರೆ ಪಕ್ಷದಿಂದ ಅಭ್ಯರ್ಥಿಗಳನ್ನು ಸೆಳೆಯುವ ಸ್ಥಿತಿಗೆ ಆ ಪಕ್ಷ ಬರಬಾರದಿತ್ತು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಸಿಎಂ ಕಾರ್ಯತಂತ್ರ ರೂಪಿಸುತ್ತಾರೆ. ಎರಡು ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದು ಸುದ್ದಿಗಾರರಿಗೆ ತಿಳಿಸಿದರು. ಪಕ್ಷದ ಅಧ್ಯಕ್ಷರು ನನಗೆ ಬಸವಕಲ್ಯಾಣದಲ್ಲಿ ಕೆಲಸ ಮಾಡಲಿಕ್ಕೆ ಸೂಚಿಸಿದ್ದಾರೆ. ಅದರಂತೆ ಕೆಲಸ ಮಾಡುತ್ತಿದ್ದೇನೆ. ಮಾಜಿ ಶಾಸಕ ಖೂಬಾ ಅವರೊಂದಿಗೆ ಬೂತ್ ಮಟ್ಟದಿಂದ ಸಂಘಟನೆ ಮಾಡುತ್ತಿದ್ದೇನೆ. ಈಗಾಗಲೆ ಒಮ್ಮೆ ಭೇಟಿ ನೀಡಿದ್ದೇನೆ. ಇನ್ನೊಮ್ಮೆ ಭೇಟಿ ಮಾಡುತ್ತೇನೆ ಎಂದ ವಿಜಯೇಂದ್ರ, ದೆಹಲಿಗೆ ವೈಯಕ್ತಿಕ ಕೆಲಸದ ಮೇಲೆ ಭೇಟಿ ಮಾಡಿದ್ದೆ. ಪಕ್ಷದ ಯಾವುದೇ ಮುಖಂಡರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸದೆ ವಿಧಿ ಇಲ್ಲ

    ತುಮಕೂರು: ಒಕ್ಕಲಿಗ ಸಮುದಾಯದ ಅಪೇಕ್ಷೆಯಂತೆ ಅಭಿವೃದ್ಧಿ ನಿಗಮ ರಚಿಸದೆ ವಿಧಿ ಇಲ್ಲ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಒಂದು ಜನಾಂಗ, ಒಂದು ಭಾಷಿಕರಿಗೆ ಅಭಿವೃದ್ಧಿ ನಿಗಮ ರಚಿಸಿದಾಗ ಎಲ್ಲರೂ ಅಪೇಕ್ಷೆ ಪಡುತ್ತಾರೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಅಭಿವೃದ್ಧಿ ನಿಗಮ ರಚನೆಯಾಗುತ್ತದೆ, ನಿಗಮಗಳ ರಚನೆ ವಿಚಾರವಾಗಿ ಜನರ ಭಾವನೆಗಳಿಗೆ ಪೂರಕವಾಗಿ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ್ಲ ಉಳಿದ ಅವಧಿಗೂ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts