More

    ಎಲ್ಲ ಪ್ರಶ್ನೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ; ಡಾ.ಪಾವಗಡ ಪ್ರಕಾಶರಾವ್ ಅಭಿಮತ

    ಬೆಂಗಳೂರು: ಜಗತ್ತಿನ ಎಲ್ಲ ಗ್ರಂಥಗಳಲ್ಲಿನ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ಸಿಗುವುದು ಭಗವದ್ಗೀತೆಯಲ್ಲಿ ಮಾತ್ರ ಎಂದು ವಿದ್ವಾಂಸ ಡಾ. ಪಾವಗಡ ಪ್ರಕಾಶರಾವ್ ಅಭಿಪ್ರಾಯಿಸಿದ್ದಾರೆ. ಮಲ್ಲೇಶ್ವರದಲ್ಲಿ ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಅಖಂಡ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

    ಭಗವದ್ಗೀತೆ ಜಗತ್ತಿನ ಮೇರುಕೃತಿಯಾಗಿದ್ದು, ಇದರಲ್ಲಿ ಜಗತ್ತಿನ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ. ಇದನ್ನು ಸ್ವತಃ ವಿದೇಶೀಯರೇ ಒಪ್ಪಿಕೊಂಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವಾರು ಖ್ಯಾತನಾಮರಿಗೆ ದಿಗ್ದರ್ಶನ ಮಾಡಿಸಿದ ಭಗವದ್ಗೀತೆಯು ವಿಶ್ವಮಾನ್ಯ ಗ್ರಂಥ. ಅಖಂಡ ಗೀತಾ ಪಾರಾಯಣದಂತಹ ಕಾರ್ಯಕ್ರಮದಿಂದ ವಿಶ್ವಪರಂಪರೆಯಲ್ಲಿ ಗೀತೆಯನ್ನು ಕೊಂಡಾಡುವಂತಾಗುತ್ತಿದೆ ಎಂದು ಅವರು ವಿವರಿಸಿದರು.

    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 500ಕ್ಕೂ ಹೆಚ್ಚು ಜನರು ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಪಾರಾಯಣ ಮಾಡಿದರು. ಜೊತೆಗೆ ಅಯೋಧ್ಯೆಯ ಶ್ರೀರಾಮಮಂದಿರದ ಉದ್ಘಾಟನೆಯ ಪ್ರಯುಕ್ತ ಲಕ್ಷಗಳ ಸಂಖ್ಯೆಯಲ್ಲಿ ಶ್ರೀರಾಮನಾಮ ತಾರಕಮಂತ್ರ ಜಪವನ್ನೂ ನಡೆಸಿದರು. ಕಾರ್ಯಕ್ರಮದಲ್ಲಿ ಸಂಸ್ಕೃತ ಕಲಿಕೆಯ ವಿವಿಧ ಆಯಾಮಗಳ ಪರಿಚಯ ಹಾಗೂ ಮೈತ್ರೀ ಪ್ರತಿಷ್ಠಾನವು ಪ್ರಕಟಿಸಿದ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇದೇ ವೇಳೆ ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಧರ್ಮಾ ಸಂಸ್ಕೃತ ದಿನದರ್ಶಿಕೆಯನ್ನು ವಿದ್ವಾಂಸ ಡಾ. ಪಾವಗಡ ಪ್ರಕಾಶರಾವ್ ಬಿಡುಗಡೆ ಮಾಡಿದರು.

    ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥನಾರಾಯಣ, ಪ್ರತಿಷ್ಠಾನದ ಅಧ್ಯಕ್ಷ ಡಾ.ಗಣಪತಿ ಹೆಗಡೆ, ಸಂಚಾಲಕರಾದ ಎ.ಜಿ.ನಾಯಕ್, ಬದರಿನಾಥ್ ಮುಂತಾದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts