More

    ಬಂಪರ್ ಬಾಳೆ ಬೆಳೆ ತೆಗೆದ ಪಶುವೈದ್ಯ

    ಕೌಸ್ತುಭ ಹೆಗಡೆ ಆನಂದಪುರ
    ಕೃಷಿ ಕುಟುಂಬದಿಂದ ಬಂದತಹ ಅನೇಕರು ದೊಡ್ಡ ದೊಡ್ಡ ವೃತ್ತಿಯಲ್ಲಿದ್ದರೂ ಬಿಡುವಿನ ವೇಳೆ ಅನೇಕರು ಬಹು ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಇದೇ ರೀತಿ ಪರಿಶ್ರಮ ವಹಿಸಿ ಬಾಳೆ ಕೃಷಿ ನಡೆಸಿ ಬಂಪರ್ ಬೆಳೆ ತೆಗೆಯುತ್ತಿದ್ದಾರೆ ಸೊರಬದ ಪಶುವೈದ್ಯ ಟೋಕಪ್ಪ.

    ಸೊರಬ ತಾಲೂಕಿನ ಹೊಸಬಾಳೆ ಗ್ರಾಮದಲ್ಲಿ ಟೋಕಪ್ಪ ಅವರು 6 ಎಕರೆ ವಿಸ್ತೀರ್ಣದಲ್ಲಿ ಕಳೆದ ವರ್ಷ ಅಡಕೆ ಸಸಿ ನಾಟಿ ಮಾಡಿ ಅವುಗಳ ನಡುವೆ ಒಟ್ಟು 4,500 ನೇಂದ್ರ ಬಾಳೆ ಗಿಡ ನೆಟ್ಟಿದ್ದರು. ಈ ವರ್ಷದ ಫೆಬ್ರವರಿ ಮೊದಲ ವಾರ ಒಂದು ಗಡ್ಡೆಗೆ 12 ರೂ.ನಂತೆ ಖರೀದಿಸಿ ನಾಟಿ ಮಾಡಿದ್ದಾರೆ. ಅಡಕೆ ಸಸಿಗಳ ನಡುವೆ ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ 6 ಅಡಿ ಬರುವಂತೆ ಬಾಳೆ ಸಸಿ ನಾಟಿ ಮಾಡಿದ್ದಾರೆ. ಒಂದು ಅಡಿ ಆಳ ಮತ್ತು ಎರಡು ಅಡಿ ಚೌಕಾಕಾರದ ಗುಂಡಿ ನಿರ್ಮಿಸಿದ್ದರು.
    ಸಸಿ ನೆಡುವಾಗ ಗೆದ್ದಲು ಹತ್ತದಂತೆ ಗುಂಡಿಗೆ ಸರಾಸರಿ 5 ಗ್ರಾಂ ಥಿಮೆಟ್ ಹಾಕಿದ್ದರು. ಸಸಿ ನೆಟ್ಟ 10 ದಿನಕ್ಕೆ ಸಾವಯವ ಗೊಬ್ಬರ ನೀಡಿದ್ದರು. ನಂತರ 30 ದಿನಕ್ಕೆ 19:19 ಕಾಂಪ್ಲೆಕ್ಸ್ ಗೊಬ್ಬರ ಹಾಕಿ ಮೇಲ್ಮಣ್ಣು ನೀಡಿದ್ದರು. ಸ್ಪಿಂಕ್ಲರ್ ಅಳವಡಿಸಿ ನೀರಿನ ವ್ಯವಸ್ಥೆ ಮಾಡಿದ್ದು, ಸಸಿ ನೆಟ್ಟ 60 ದಿನಕ್ಕೆ ಸರಾಸರಿ 20 ಗ್ರಾಂ.ನಷ್ಟು ಗೊಬ್ಬರ ನೀಡಿ ಕೃಷಿ ಮುಂದುವರೆಸಿದ್ದರು.
    90 ದಿನಕ್ಕೆ ಮತ್ತೆ ಗೊಬ್ಬರ ನೀಡಿ ಮಣ್ಣು ಏರಿಸಿಕೊಟ್ಟರು. ಅಕ್ಟೋಬರ್ ಸುಮಾರಿಗೆ ಬಾಳೆಗೊನೆ ಬಿಟ್ಟು ಡಿಸೆಂಬರ್ ಎರಡನೇ ವಾರದಿಂದ ಕಟಾವು ಆರಂಭವಾಗಿದೆ. ಸರಾಸರಿ 18 ಕಿ.ಗ್ರಾಂ. ತೂಕದ ಬಾಳೆ ಗೊನೆ ದೊರೆತಿದ್ದು, ಮೊದಲ ಹಂತದಲ್ಲಿ 4 ಟನ್ ಬಾಳೆಗೊನೆ ಮಾರಾಟ ಮಾಡಿದ್ದಾರೆ. ಟನ್ ಒಂದಕ್ಕೆ 22 ಸಾವಿರ ರೂ.ನಂತೆ ಮಾರಾಟವಾಗಿದ್ದು, ವ್ಯಾಪಾರಸ್ಥರು ಜಮೀನಿನ ಬಳಿಯೇ ಬಂದು ಕಟಾವು ಮಾಡಿ ಖರೀದಿಸಿದ್ದಾರೆ. ಒಟ್ಟು 4,500 ಬಾಳೆ ಮರದಿಂದ 45 ಟನ್ ಬಾಳೆಗೊನೆ ಫಸಲು ಸಿಗಲಿದೆ. ಜ.15ರ ಸುಮಾರಿಗೆ 2ನೇ ಹಂತದ ಕಟಾವು ಸಿದ್ಧಗೊಳ್ಳಲಿದೆ.
    ಬಾಳೆ ಕಾಯಿ ಚಿಪ್ಸ್, ಹಪ್ಪಳ, ಪೌಡರ್ ಇತ್ಯಾದಿಗಾಗಿ ನೇಂದ್ರ ಬಾಳೆಗೆ ಸಾಕಷ್ಟು ಬೇಡಿಕೆಯಿದೆ. ಬೆಳಗ್ಗೆ, ಸಂಜೆ ಹಾಗೂ ರಜಾ ದಿನಗಳಂದು ಜಮೀನಿಗೆ ಆಗಮಿಸಿ ಕೂಲಿಯಾಳುಗಳ ಜತೆ ತಾವೂ ಸಹ ಪರಿಶ್ರಮದ ಕೃಷಿ ನಡೆಸುವ ಟೋಕಪ್ಪ, ಮಾದರಿ ರೈತರಂತೆ ಕಾರ್ಯ ನಡೆಸುತ್ತಿದ್ದಾರೆ. ಮಾಹಿತಿಗಾಗಿ (ಮೊ.9740682453) ಸಂಪರ್ಕಿಸಬಹುದು.

    ಸಂಬಂಧಿಕರ ಜಮೀನನ್ನು ಲೀಸ್‌ಗೆ ಪಡೆದು ಅಡಕೆ ಮತ್ತು ಬಾಳೆ ಕೃಷಿ ನಡೆಸಿದ್ದೇನೆ. ಆರಂಭದಿಂದಲೂ ಕೃಷಿ ಕ್ಷೇತ್ರದ ಬಗ್ಗೆ ಅತ್ಯಂತ ಆಸಕ್ತಿ ಇರುವ ಕಾರಣ ಸಮಯ ಸಿಕ್ಕಾಗಲೆಲ್ಲ ಅತ್ಯಂತ ಮುತುವರ್ಜಿ ವಹಿಸಿ ಕೂಲಿಯಾಳುಗಳ ಮೂಲಕ ಕೃಷಿ ನಿರ್ವಹಣೆ ಮಾಡುತ್ತಿದ್ದೇನೆ. ಕರಾವುಕ್ಕಾಗಿ ಕೃಷಿ ಕೈಗೊಂಡರೆ ರೈತರಿಗೆ ಸಕಷ್ಟು ಲಾಭ ಸಿಗಲಿದೆ ಎಂಬುದು ನನ್ನ ಅನುಭವದ ಮಾತು.
    ಟೋಕಪ್ಪ, ಪಶು ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts