More

    ನೇತ್ರಾವತಿ ನದಿಗೆ ವರ್ಟಿಕಲ್ ಲಿಫ್ಟ್ ಡ್ಯಾಂ

    ಶ್ರವಣ್‌ಕುಮಾರ್ ನಾಳ ಪುತ್ತೂರು

    ತಾಲೂಕಿನ ಬಿಳಿಯೂರು ಗ್ರಾಮದ ಕಡಪುವಿನಲ್ಲಿ ನೇತ್ರಾವತಿ ನದಿಗೆ ವರ್ಟಿಕಲ್ ಲಿಫ್ಟ್ ಅಣೆಕಟ್ಟು (ಸೇತುವೆ ಆಧಾರಿತ ಕಿಂಡಿ ಅಣೆಕಟ್ಟು ) ನಿರ್ಮಾಣ ಯೋಜನಾ ಕಾಮಗಾರಿ ಭರದಿಂದ ಸಾಗುತ್ತಿದೆ.

    ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ಹಲವು ಊರುಗಳನ್ನು ಬೆಸೆಯಲು ಸೇತುವೆ, ಕೃಷಿಗೆ ನೀರು ಒದಗಿಸಲು ಕಿಂಡಿ ಅಣೆಕಟ್ಟು ನಿರ್ಮಾಣ ಹಂತದಲ್ಲಿದೆ. ಮೂರು ತಿಂಗಳ ಹಿಂದೆಯಷ್ಟೇ ಸಚಿವ ಮಾಧುಸ್ವಾಮಿ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, 2022ರ ಮಾರ್ಚ್‌ಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    46.70 ಕೋಟಿ ರೂ. ವೆಚ್ಚ: ಪಶ್ಚಿಮವಾಹಿನಿ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ಮೂಲಕ 46.70 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಳಿಯೂರಿನಿಂದ ಬೆಳ್ತಂಗಡಿ ತಾಲೂಕಿನ ತೆಕ್ಕಾರೆಗೆ ಸಂಪರ್ಕ ಕಲ್ಪಿಸುವ ಸೇತುವೆ ಇದು. ರಾಷ್ಟ್ರೀಯ ಹೆದ್ದಾರಿಯ ಪೆರ್ನೆಯಿಂದ ಬೆಳ್ತಂಗಡಿಯ ಬಾಜಲ್‌ಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ಬಂಟ್ವಾಳ, ಪುಂಜಾಲಕಟ್ಟೆ, ಬೆಳ್ತಂಗಡಿಯ ಕೆಲ ಪ್ರದೇಶಗಳಿಗೆ ಸಂಚಾರ ಹತ್ತಿರವಾಗಲಿದೆ.

    ವಿದ್ಯುತ್ ಚಾಲಿತ ತಂತ್ರಜ್ಞಾನ: ಇದು ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಥಮ ವರ್ಟಿಕಲ್ ಲಿಫ್ಟ್ ಮಾದರಿಯ ಅಣೆಕಟ್ಟು. ಈ ಡ್ಯಾಂ ನಿರ್ಮಾಣದಿಂದ 7ರಿಂದ 10 ಕಿ.ಮೀ. ವ್ಯಾಪ್ತಿಯ ತನಕದ ಕೃಷಿ ಭೂಮಿಗೆ ನೀರೊದಗಲಿದೆ. ನದಿ ಮಟ್ಟದಲ್ಲಿ 6 ಮೀಟರ್ ಅಗಲದ ಕಿಂಡಿ, 4 ಮೀಟರ್ ಎತ್ತರದಲ್ಲಿ ಜಲಮಟ್ಟವಿರಲಿದೆ. 42 ಗೇಟ್‌ಗಳಿವೆ. 41 ಫಿಲ್ಲರ್‌ಗಳಿವೆ. ಇಲ್ಲಿ ಗೇಟು ಅಳವಡಿಕೆ ಪ್ರಕ್ರಿಯೆ ವಿದ್ಯುತ್ ಚಾಲಿತ ಹಾಗೂ ಮ್ಯಾನುವೆಲ್ ತಂತ್ರಜ್ಞಾನಗಳನ್ನು ಹೊಂದಲಿದೆ ಎಂದು ಇಲಾಖೆ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

    ಸೇತುವೆ ಆಧಾರಿತ ಅಣೆಕಟ್ಟು: ಉಭಯ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ಉದ್ದ 306 ಮೀ.ನಷ್ಟಿರಲಿದೆ. ಸೇತುವೆಯ ಅಗಲ 6.50 ಮೀಟರ್ ಇದ್ದು, ಇದರಲ್ಲಿ 1 ಮೀಟರ್ ಪಾದಚಾರಿ ಸಂಚಾರಕ್ಕೆ ಬಳಕೆಯಾಗಲಿದೆ. ಸೇತುವೆ ಆಧಾರಿತ ಕಿಂಡಿ ಅಣೆಕಟ್ಟು ನಿರ್ಮಾಣದ ಕಾಲಾವಧಿ 18 ತಿಂಗಳು. ಈಗಾಗಲೇ ಮೂರು ತಿಂಗಳಲ್ಲಿ 153 ಮೀ.ನಷ್ಟು ಅಡಿಪಾಯ ಕಾಮಗಾರಿ ಪೂರ್ಣಗೊಂಡು ಫಿಲ್ಲರ್ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ದ.ಕ ಜಿಲ್ಲಾ ಸಣ್ಣ ನೀರಾವರಿ ಇಲಾಖೆ ಎಇಇ ಸಂದೀಪ್ ತಿಳಿಸಿದ್ದಾರೆ.

    ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಥಮ ವರ್ಟಿಕಲ್ ಲಿಫ್ಟ್ ಕಿಂಡಿ ಅಣೆಕಟ್ಟು ಇದು. ಈಗಾಗಲೇ ಶೇ.45ರಿಂದ 50ರಷ್ಟು ಕಾಮಗಾರಿ ಆಗಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಒಂದು ಭಾಗ ಪೂರ್ತಿ ಆದ ಮೇಲೆ ಉಳಿದ ಅರ್ಧಭಾಗದ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಮಳೆಗಾಲದ ಅವಧಿ ಬರುವ ಮೊದಲು ನದಿ ತಳಭಾಗದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಉಳಿದ ಕಾಮಗಾರಿ ನಂತರ ಕೈಗೊಳ್ಳಲಾಗುವುದು.
    ಸಂಜೀವ ಮಠಂದೂರು ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts