More

    ಅಣೆಕಟ್ಟು ಕೆಲಸಕ್ಕೆ ಕೃಷಿ ಭೂಮಿ ಹಾಳು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಬೈಂದೂರು ತಾಲೂಕು ನಾಡ ಗ್ರಾಮ ತೆಂಕಬೈಲು ಕೃಷಿಕರ ಅನುಕೂಲಕ್ಕಾಗಿ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿದ ಕಿಂಡಿಅಣೆಕಟ್ಟು ಕಾಮಗಾರಿ ಕೃಷಿ ಬದುಕನ್ನೇ ತಲೆಕೆಳಗಾಗಿಸಿದೆ. ಮಳೆಗಾಲದ ಆರಂಭಕ್ಕೆ ಕೆಲ ಸಮಯ ಮೊದಲು ಇಲ್ಲಿ ಕಾಮಗಾರಿಗಾಗಿ ಹೊಳೆ ದಂಡೆ ಒಡೆದಿರುವುದರಿಂದ ಹಾಗೂ ಹರಿವ ನೀರಿಗೆ ತಡೆ ಉಂಟಾಗಿರುವುದರಿಂದ ನೆರೆ ನೀರು ನುಗ್ಗಿ ಕೃಷಿಕರಿಗೆ ಸಮಸ್ಯೆ ತಂದೊಡ್ಡಿದೆ.
    ತೆಂಕಬೈಲು, ಕೆಂಬೈಲು, ಜಡ್ಡಾಡಿ ಬೈಲು ಸೇರಿ ನೂರು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇದ್ದು, ಕೃಷಿ ಪ್ರದೇಶದ ಮಧ್ಯ ಭಾಗದಲ್ಲಿ ಹರಿಯುವ ಗುಳನಾಳಿ ಹೊಳೆ ಜಲಮೂಲ. ಬೇಸಿಗೆಯಲ್ಲಿ ಸೌಪರ್ಣಿಕಾ ಏತನೀರಾವರಿ ಯೋಜನೆ ಚಾನಲ್ ನೀರು ಹರಿಯುವುದು ಇದೇ ಹೊಳೆಯಲ್ಲಿ. ಹೊಳೆಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಶಿಥಿಲಗೊಂಡಿರುವ ಪರಿಣಾಮ ಅದೇ ಜಾಗದಲ್ಲಿ ಹೊಸ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಮಳೆಗಾಲಕ್ಕೆ ಒಂದು ತಿಂಗಳು ಇರುವಾಗ ಆರಂಭಗೊಂಡಿದೆ. ಆದರೆ ಸೈಕ್ಲೋನ್ ಹಾಗೂ ಅದರ ಬೆನ್ನಿಗೆ ಬಂದ ಮಳೆಯಿಂದ ಕೆಲಸ ಅರ್ಧಕ್ಕೆ ನಿಂತಿದೆ. ಅಣೆಕಟ್ಟೆಗಾಗಿ ಹೊಳೆ ದಂಡೆ ಒಡೆದಿದ್ದು, ಅಲ್ಲಲ್ಲಿ ಹರಿವ ನೀರಿಗೆ ತಡೆ ಬಿದ್ದಿದ್ದರಿಂದ ಮಳೆ ನೀರು ಗದ್ದೆಗೆ ನುಗ್ಗಿ ನೆರೆ ಸೃಷ್ಟಿ ಮಾಡುತ್ತಿದೆ. ನಿರಂತರ ನೀರು ನಿಲ್ಲುವುದರಿಂದ ನೇಜಿ ಕೊಳತು ಹೋಗಿದೆ. ಹೊಳೆ ಕೋಡಿಬಿದ್ದು ಗದ್ದೆಯಲ್ಲಿ ಹೂಳು ತುಂಬಿಸಿದೆ.

    ನಿರ್ಮಲಾ ಶೆಟ್ಟಿ ಎಂಬವರ ಗದ್ದೆಯಲ್ಲಿ ಕಾಮಗಾರಿಗಾಗಿ ಜಲ್ಲಿ, ಹಾಗೂ ಇತರ ಸಾಮಗ್ರಿ ರಾಶಿ ಹಾಕಿದ್ದು ಕೃಷಿ ಮಾಡದಂತೆ ಆಗಿದೆ. ಇದನ್ನು ಸ್ಥಳಾಂತರಿಸಲು ಕೇಳಿಕೊಂಡರೂ ಕ್ರಮಕೈಗೊಳ್ಳದೆ ಗದ್ದೆ ಹಾಳು ಬಿದ್ದಿದೆ. ಗದ್ದೆಯಲ್ಲಿ 2 ತಿಂಗಳಿಗೆ ಆಗುವಷ್ಟು ಭತ್ತ ಬೆಳೆಯುತ್ತಿತ್ತು. ನಮ್ಮ ಊಟಕ್ಕೂ ಕನ್ನ ಹಾಕಲಾಗಿದೆ ನಮಗೆ ಪರಿಹಾರ ಕೊಡೋದು ಯಾರು ಎಂದು ನಿರ್ಮಲಾ ಶೆಟ್ಟಿ ವಿಜಯವಾಣಿ ಜತೆ ಅಳಲು ತೋಡಿಕೊಂಡಿದ್ದಾರೆ.

    ಗ್ರಾಮಸ್ಥರೇ ಹೂಳು ತೆಗೆದಿದ್ದರು
    ತೆಂಕಬೈಲು, ಕೆಂಬೈಲು, ಜಡ್ಡಾಡಿಬೈಲು ಭತ್ತ ಬೆಳೆಗೆ ಗುಳನಾಳಿ ಹೊಳೆಯೇ ಆಧಾರ. ಆಲೂರು, ಹರ್ಕೂರು ನಾಡ ಗ್ರಾಮದ ಗುಡ್ಡ ಪ್ರದೇಶದ ನೀರು ಹರಿದು ಬರೋದು ಗುಳನಾಳಿ ಹೊಳೆಯಲ್ಲಿ. ಹೊಳೆ ಪಾತ್ರದಲ್ಲಿ ಮಣ್ಣಿನ ಶೇಖರಣೆಯಿಂದ ಪರಿಸರದ ನೀರಿನ ಸೆಲೆ ಕೂಡ ಬತ್ತುತ್ತಾಬಂದಿತ್ತು. ಕೃಷಿಕರು ಪ್ರತಿ ಮನೆಯಿಂದಲೂ ಇಂತಿಷ್ಟು ಎಂದು ವಂತಿಗೆ ಸೇರಿಸಿ 1 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆದಿದ್ದರು. ಯಾವಾಗ ಕಿಂಡಿ ಅಣೆಕಟ್ಟು ಕಟ್ಟುವ ನಿರ್ಧಾರಕ್ಕೆ ಬರಲಾಯಿತೋ ಅಂದೇ ತೆಂಕುಬೈಲು ಕೃಷಿಕರ ಬದುಕು ಹೈರಾಣಾಗಲು ಆರಂಭವಾಗಿದೆ.

    ಹೊಳೆ ದಂಡೆ ಒಡೆದಿದ್ದರಿಂದ ಬೈಲಿಗೆ ಹರಿದು ನೆರೆ ನುಗ್ಗುತ್ತದೆ. ಹಿಂದೆಯೂ ಜೋರು ಮಳೆ ಬಂದರೆ ನೆರೆ ಬರುತ್ತಿದ್ದು, ಮಳೆ ಕಡಿಮೆ ಆದ ನಂತರ ನೀರಿಳಿಯುತ್ತಿತ್ತು. ಆದರೆ ಈಬಾರಿ ಏರಿದ ನೆರೆ ಕಳೆದ ಹದಿನೈದು ದಿನ ಇಳಿಯದೆ ನಾಟಿ ಮಾಡಿದ ನೇಜಿ ಕೊಳೆತು ಹೋಗಿದೆ. ತೆಂಗಿನ ಮರಗಳು ಸತ್ತು ಹೋಗಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಉಳುಮೆ ಮಾಡಿ ನಾಟಿ ಮಾಡಿದ್ದು ಹೊಳೆಪಾಲಾಯಿತು. ಕಿಂಡಿ ಅಣೆಕಟ್ಟೆ ನಿರ್ಮಾಣಕ್ಕೆ ವಾಹನ ಬರಲು ಮಾಡಿದ ಹಾದಿ, ಹೊಂಡ ಎಲ್ಲ ಹಾಗೆ ಬಿಟ್ಟಿದ್ದು, ನಾವೇ ಸರಿಮಾಡಿಕೊಳ್ಳಬೇಕಾಯ್ತು.
    ಮೂಕಾಂಬು ಶೆಟ್ಟಿ, ಹಿರಿಯ ಕೃಷಿಕ ಮಹಿಳೆ ತೆಂಕುಬೈಲು

    ಜಡ್ಡಾಡಿಬೈಲು, ತೆಂಕುಬೈಲು, ಕೆಂಬೈಲು ಪರಿಸರದಲ್ಲಿ ನೂರು ಹೆಕ್ಟೇರಿಗೂ ಮಿಕ್ಕಿ ಭತ್ತದ ಕೃಷಿ ಭೂಮಿಯಿದ್ದು, ಮಳೆಗಾಲ ಆರಂಭವಾಗುವ ಒಂದು ತಿಂಗಳು ಮುಂಚೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶುರು ಮಾಡಿದ್ದರು. ಕೆಲಸ ವಿಳಂಬಗೊಳಿಸಿ, ಆ ಬಳಿಕ ಮಳೆ ನೆಪದಲ್ಲಿ ನಿಲ್ಲಿಸಲಾಗಿದೆ. ಈ ಬಗ್ಗೆ ಸಣ್ಣನೀರಾವರಿ ಇಲಾಖೆ ಗಮನಕ್ಕೆ ತಂದರೂ ಸ್ಪಂದಿಸಲಿಲ್ಲ. ನೆರೆ ನೀರು ನಿಂತು ಹಾಳಾದ ಕೃಷಿಗೆ ಪರಿಹಾರ ಕೊಡಬೇಕು. ಕಂದಾಯ, ತಹಸೀಲ್ದಾರ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಸರಿಯಾದ ಪರಿಹಾರ ನೀಡುವ ಜೊತೆ ಆಗಿರುವ ನಷ್ಟ ಸರಿಪಡಿಸಬೇಕು.
    ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ಮಾಜಿ ಉಪಾಧ್ಯಕ್ಷ, ತಾಲೂಕು ಪಂಚಾಯಿತಿ, ಕುಂದಾಪುರ

    ಸೈಕ್ಲೋನ್ ಹಿನ್ನೆಲೆಯಲ್ಲಿ ಎಲ್ಲ ಕಡೆ ಅಣೆಕಟ್ಟು ನಿರ್ಮಾಣ ಕೆಲಸದಲ್ಲಿ ವ್ಯತ್ಯಯವಾಗಿದೆ. ತೆಂಕಬೈಲು ಕಿಂಡಿ ಆಣೆಕಟ್ಟು ನಿರ್ಮಾಣ ಸಮಯದಲ್ಲಿ ಸೌಪರ್ಣಿಕಾ ಚಾನಲ್ ನೀರು ಡೈವರ್ಶನ್ ಮಾಡೋದ್ರಲ್ಲಿ ಸ್ವಲ್ಪ ಸಮಯ ಹಿಡಿಯಿತು. ಸೈಕ್ಲೋನ್ ಬೆನ್ನಿಗೆ ಮಳೆ ಶುರುವಾಗಿದ್ದರಿಂದ ಕೆಲಸಕ್ಕೆ ಸಮಸ್ಯೆ ಆಗಿದೆ. ಮಳೆ ಕಡಿಮೆಯಾದ ತಕ್ಷಣ ಕೆಲಸ ಆರಂಭಿಸಿ, ಕಿಂಡಿ ಅಣೆಕಟ್ಟು ಬಿಟ್ಟುಕೊಡಲಾಗುತ್ತದೆ. 50 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕಿಂಡಿ ಇರುವ ಅಣೆಕಟ್ಟು ನಿರ್ಮಿಸಿ, ಮರದ ಹಲಗೆ ಬದಲು ಪೈಬರ್ ಹಲಗೆ ಅಳವಡಿಕೆ ಸಿಸ್ಟಮ್ ಮಾಡಲಾಗಿದೆ.
    ನಾಗಲಿಂಗಯ್ಯ ಎಚ್., ಸಹಾಯಕ ಇಂಜಿನಿಯರ್, ಎಂಐ ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts