ಯಾವ ಕಾರಣಕ್ಕೂ ರೈತರ ಒಕ್ಕಲೆಬ್ಬಿಸಲ್ಲ: ಕಿಮ್ಮನೆ ಭರವಸೆ

kimmane rathnakar

ಶಿವಮೊಗ್ಗ: ಸ್ಥಗಿತಗೊಂಡಿರುವ ತುಂಗಭದ್ರಾ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ. ರಾಜ್ಯ ಸರ್ಕಾರ ರೈತರ ಪರವಾಗಿದೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಭರವಸೆ ನೀಡಿದ್ದಾರೆ.

ಈ ವಿಷಯದಲ್ಲಿ ಅನೇಕ ಗೊಂದಲಗಳಿವೆ. ಈ ವಿಚಾರವನ್ನು ಕೆಲವರು ರಾಜಕೀಯಗೊಳಿಸುತ್ತಿದ್ದಾರೆ. ಪ್ರತಿಪಕ್ಷದವರು ಆಡಳಿತ ಪಕ್ಷದತ್ತ ಬೊಟ್ಟು ಮಾಡುವುದು ಸಹಜ. ಆದರೆ ಕಾಂಗ್ರೆಸ್‌ಗೆ ಈ ವಿಷಯದಲ್ಲಿ ಸ್ಪಷ್ಟತೆಯಿದೆ. ಒಕ್ಕಲೆಬ್ಬಿಸಲು ಸಹಕರಿಸುವ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡು ನ್ಯಾಯಾಲಯಗಳಲ್ಲಿ ಎರಡು ತೀರ್ಪುಗಳು ಪ್ರಕಟಗೊಂಡಿವೆ. ಒಂದು ಕಡೆ ಕಾರ್ಖಾನೆ ಪರವಾಗಿ ತೀರ್ಪು ಬಂದಿದೆ. ಮತ್ತೊಂದೆಡೆ ರೈತರ ಪರವಾಗಿ ಜಯ ಸಿಕ್ಕಿದೆ. ನ್ಯಾಯಾಲಯಗಳ ನಡುವೆ ಮಾಹಿತಿ ವಿನಿಮಯದ ಕೊರತೆಯಿದೆ. ಹೀಗಾಗಿ ಗೊಂದಲ ಉಂಟಾಗಿದೆ. ನ್ಯಾಯಾಲಯಕ್ಕೆ ವಾಸ್ತವ ಸಂಗತಿ ವಿವರಿಸಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ಶೀಘ್ರದಲ್ಲೇ ಅಡ್ವೋಕೇಟ್ ಜನರಲ್ ಅವರನ್ನು ಭೇಟಿಯಾಗಿ ಕಾನೂನು ಹೋರಾಟದ ಬಗ್ಗೆ ಚರ್ಚಿಸಲಾಗುವುದು. ಸಿಎಂಗೆ ವಿಷಯವನ್ನು ಮನವರಿಕೆ ಮಾಡಿಕೊಡಲಾಗುವುದು. ರೈತರು ಈ ವಿಷಯದಲ್ಲಿ ಆತಂಕಪಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ಸೃಷ್ಟಿಯಾಗುತ್ತಿರುವ ವದಂತಿಗಳಿಗೆ ಯಾರೂ ಕಿವಿಗೊಡುವ ಅಗತ್ಯವಿಲ್ಲ ಎಂದರು.
ಈಗಾಗಲೇ ನೂರಾರು ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಸಕ್ಕರೆ ಕಾರ್ಖಾನೆಯದ್ದು ಎಂದು ಹೇಳಲಾಗುವ ಭೂಮಿಯಲ್ಲಿ ಸರ್ಕಾರಿ ಕಚೇರಿಗಳು, ಶಾಲೆಗಳು, ಆಸ್ಪತ್ರೆಗಳು, ಜನವಸತಿ ಪ್ರದೇಶಗಳಿವೆ. ಹೀಗಾಗಿ ಎಲ್ಲವನ್ನೂ ತೆರವುಗೊಳಿಸುವುದು ಸಾಧ್ಯವಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ ಎಂದು ಹೇಳಿದರು.
ಸದಾಶಿವಪುರದಲ್ಲಿ ಸುಮಾರು 166 ಎಕರೆ ಜಾಗವನ್ನು ರೈತರಿಗೆ ಸರ್ಕಾರವೇ ಮಂಜೂರು ಮಾಡಿದೆ. ರೈತರಿಗೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ನೀಡಿದೆ. ನಮ್ಮ ಪಕ್ಷ ಎಲ್ಲ ವಿವರಗಳನ್ನೂ ಕಲೆ ಹಾಕುತ್ತಿದೆ. ಸಕ್ಕರೆ ಕಾರ್ಖಾನೆಗೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಿದ್ದ ಗಡುವು ಮುಗಿದಿದೆ. ಯಾವುದೇ ಕಾರ್ಖಾನೆಗೆ 50 ಎಕರೆಗಿಂತ ಹೆಚ್ಚಿನ ಭೂಮಿಯನ್ನು ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ಮದ್ರಾಸ್ ಹೈಕೋರ್ಟ್‌ನ ತೀರ್ಪಿನ ಪ್ರಕಾರ ಎಲ್ಲ ಭೂಮಿ ನಮ್ಮದು ಎಂದು ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದವರು ಹೇಳುತ್ತಿದ್ದಾರೆ. ರಾಜ್ಯ ಹೈಕೋರ್ಟ್‌ನಲ್ಲಿ ರೈತರ ವಾದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಈ ವಿಷಯದಲ್ಲಿ ಬಿಜೆಪಿಯವರು ವ್ಯಕ್ತಿಗತ ಆರೋಪ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜ.12ಕ್ಕೆ ಅಂತಿಮ ಗಡುವು ನೀಡಲಾಗಿದ್ದು ಅಷ್ಟರೊಳಗೆ ರೈತರನ್ನು ಒಕ್ಕಲೆಬ್ಬಿಸಲಾಗುವುದು ಎಂಬುದು ಕೇವಲ ವದಂತಿ. ಕಾನೂನಾತ್ಮಕವಾಗಿ ಇದು ಸಾಧ್ಯವೂ ಇಲ್ಲ ಎಂದು ವಿವರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಎಸ್.ಪಿ.ದಿನೇಶ್, ಎನ್.ರಮೇಶ್, ಚಂದ್ರಭೂಪಾಲ್, ವಿಜಯಕುಮಾರ್, ಜಿ.ಡಿ.ಮಂಜುನಾಥ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು

Share This Article

ಬೆಟ್ಟದ ನೆಲ್ಲಿಕಾಯಿ ಜ್ಯೂಸ್​ನಿಂದ ಆಗುವ ಪ್ರಯೋಜನಗಳಿವು; ನಿಮಗಾಗಿ ಹೆಲ್ತಿ ಟಿಪ್ಸ್​​​ | Health Tips

ತಾಜಾ ಹಣ್ಣಿನ ಜ್ಯೂಸ್​ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ನಮ್ಮ ದೇಹಕ್ಕೆ ಅಗತ್ಯವಿರುವ ಜೀವಸತ್ವಗಳು, ಖನಿಜಾಂಶಗಳನ್ನು…

ತೂಕ ಇಳಿಸಲು ಮೆಂತ್ಯ ಉತ್ತಮ ಮಾರ್ಗ; ಬಳಸುವ ವಿಧಾನ ಇಲ್ಲಿದೆ | Health Tips

ಪ್ರಸ್ತುತ ಜೀವನಶೈಲಿಯಲ್ಲಿ ಬೊಜ್ಜು ಕರಗಿಸುವುದು ಮತ್ತು ತೂಕ ಇಳಿಸುವುದು ದೊಡ್ಡ ಸವಾಲಾಗಿದೆ. ತೂಕ ಇಳಿಸಲು ಹಲವಾರು…

ಈ ಸಮಸ್ಯೆಗಳಿರುವ ಜನರು, ಅಪ್ಪಿತಪ್ಪಿಯೂ ಸಹ ಬಿಸಿನೀರನ್ನು ಕುಡಿಯಬಾರದು! hot water

hot water: ಸಾಮಾನ್ಯವಾಗಿ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.  ವಯಸ್ಕರು…