More

    ಮಕ್ಕಳಿಗಿಲ್ಲ ಹೊಸ ಅಂಗನವಾಡಿ ಭಾಗ್ಯ

     ಬೆಳಕವಾಡಿ: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಹೊಸ ಕಟ್ಟಡ ನಿರ್ಮಾಣಗೊಂಡು ಎಂಟು ತಿಂಗಳು ಕಳೆದರೂ ಉದ್ಘಾಟನಾ ಭಾಗ್ಯ ದೊರೆಯದೆ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಯಲ್ಲೇ ಪುಟಾಣಿ ಮಕ್ಕಳು ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.

    ಗ್ರಾಮ ಪಂಚಾಯಿತಿ ಪಕ್ಕದಲ್ಲೇ ಇಂತಹ ಅಪಾಯಕಾರಿ ಅಂಗನವಾಡಿ ಕೇಂದ್ರವನ್ನು ನಡೆಸಲಾಗುತ್ತಿದೆ. ಸುಮಾರು 30ಕ್ಕೂ ಹೆಚ್ಚು ಮಕ್ಕಳು ಮುರಿದು ಬೀಳುತ್ತಿರುವ ಛಾವಣಿ ಹಾಗೂ ಗೋಡೆ ಬಿರುಕು ಬಿಟ್ಟಿರುವ ಕೊಠಡಿಯಲ್ಲಿ ನಿತ್ಯ ಆಟೋಟಗಳನ್ನು ಆಡುತ್ತಾ ಕಾಲ ದೂಡುತ್ತಿವೆ. ಈ ಕೊಠಡಿಯ ಛಾವಣಿಗೆ ಅಳವಡಿಸಿರುವ ಮರದ ಪಟ್ಟಿಗಳಿಗೆ(ಜಂತಿ) ಗೆದ್ದಲು ಹತ್ತಿದ್ದು, ಗೆದ್ದಲನ್ನು ತಿನ್ನಲು ಹಾವು ಬಂದು ಹೋಗಿರುವುದಕ್ಕೆ ಪೊರೆ ಬಿಟ್ಟಿರುವುದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಅಲ್ಲದೆ ಛಾವಣಿ ಕುಸಿಯುವ ಹಂತ ತಲುಪಿದೆ.

    ಈ ಕೇಂದ್ರದ ಸಮೀಪವೇ 12 ಲಕ್ಷ ರೂ. ವೆಚ್ಚದಲ್ಲಿ ಹೊಸದೊಂದು ಅಂಗನವಾಡಿ ಕಟ್ಟಡವನ್ನು ನಿರ್ಮಿಸಿ 8 ತಿಂಗಳು ಕಳೆದಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಶಾಸಕರು ಉದ್ಘಾಟನೆ ಮಾಡದೆ ಕೇಂದ್ರವನ್ನು ಸ್ಥಳಾಂತರಿಸಲು ಸಾಧ್ಯವಿಲ್ಲವೆಂದು ಸ್ವಾಮಿನಿಷ್ಠೆ ಮೆರೆಯುತ್ತಿದ್ದಾರೆ. ಇದರಿಂದ ಬೇಸತ್ತ ಪಾಲಕರು ಕಟ್ಟಡದ ಶಿಥಿಲಾವಸ್ಥೆಯ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

    ಇನ್ನಾದರೂ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದವರು ಇಲ್ಲಿನ ಶಿಶು ಕೇಂದ್ರದ ನೂತನ ಕಟ್ಟಡವನ್ನು ಸ್ಥಳಾಂತರಿಸುವರೇ ಕಾದು ನೋಡಬೇಕಿದೆ.

    ನಾಮಫಲಕ ಇಲ್ಲದ ಕಾರಣ ಉದ್ಘಾಟನೆ ಕಾಣದ ಕಟ್ಟಡ:
    ಮೂರು ತಿಂಗಳ ಹಿಂದೆ ಗ್ರಾಮದಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರ ಹಾಗೂ ಅಂಗನವಾಡಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಡಾ.ಕೆ.ಅನ್ನದಾನಿ ಕಟ್ಟಡಕ್ಕೆ ನಾಮಫಲಕ ಅಳವಡಿಸಿಲ್ಲವೆಂದು ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನಷ್ಟೇ ಉದ್ಘಾಟಿಸಿ ತೆರಳಿದ್ದರು. ಅಧಿಕಾರಿಗಳು ಉದ್ಘಾಟನೆಯಾಗದೆ ಹೊಸ ಕಟ್ಟಡವನ್ನು ಬಳಸುವಂತಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಪಾಲಕರು ಗ್ರಾಪಂಗೆ ದೂರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಿಥಿಲಗೊಂಡಿರುವ ಕಟ್ಟಡದಲ್ಲಿ ಅನಾಹುತ ಸಂಭವಿಸಿದರೆ ಸ್ಥಳೀಯ ಶಾಸಕ ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ಮಾಲಿನಿ ಎಚ್ಚರಿಕೆ ನೀಡಿದ್ದಾರೆ.


    ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ ಸಾಧ್ಯವಾಗಿಲ್ಲ. ಕೂಡಲೇ ಸಂಬಂಧಪಟ್ಟವರಿಗೆ ನಾಮಫಲಕ ಸಿದ್ಧಪಡಿಸುವಂತೆ ಸೂಚಿಸುವುದರ ಜತೆಗೆ ಉದ್ಘಾಟನೆಗೆ ಶಾಸಕರಿಂದ ಸಮಯ ಪಡೆದುಕೊಂಡು ಕಾರ್ಯಕ್ರಮ ರೂಪಿಸಿ ಕಟ್ಟಡದ ಬಳಕೆಗೆ ಅವಕಾಶ ಕಲ್ಪಿಸುತ್ತೇನೆ.
    ಕುಮಾರ್, ಶಿಶು ಅಭಿವೃದ್ಧಿ ಅಧಿಕಾರಿ(ಸಿಡಿಪಿಒ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts