More

    ಜಾತಿ ಗಣತಿ ವಿರುದ್ಧ ಮೊಳಗಿದ ಕಹಳೆ: ಮರುಗಣತಿಗೆ ವೀರಶೈವ ಲಿಂಗಾಯತ ಮಹಾಸಭಾ ಆಗ್ರಹ

    | ನವೀನ ಎಂ.ಬಿ., ರಮೇಶ ಜಹಗೀರದಾರ್ ದಾವಣಗೆರೆ

    ವೀರಶೈವ ಲಿಂಗಾಯತ ಸಮಾಜದ ಸಂಘಟನೆಗೆ ಬಲ ತುಂಬುವ ಆಶಯ ಹೊತ್ತು ದಾವಣಗೆರೆಯಲ್ಲಿ ಶನಿವಾರ ಆರಂಭವಾದ ವೀರಶೈವ ಲಿಂಗಾಯತ ಮಹಾ ಅಧಿವೇಶನ ಜಾತಿ ಗಣತಿ ವಿರುದ್ಧ ಕಹಳೆ ಮೊಳಗಿಸುವ ಜತೆಗೆ ವೈಜ್ಞಾನಿಕ ಮಾದರಿಯ ಮರು ಗಣತಿಗೆ ಆಗ್ರಹಿಸಿತು.ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಹಕ್ಕೊತ್ತಾಯ ಮಂಡಿಸಿ, ಸಮುದಾಯಕ್ಕೆ ಅನ್ಯಾಯವಾದರೆ ಸಿಡಿದೇಳುತ್ತೇವೆ ಎಂಬ ಒಗ್ಗಟ್ಟಿನ ಸಂದೇಶವನ್ನೂ ಸಾರಿತು.

    ಅಧಿವೇಶನದಲ್ಲಿ ಭಾಗವಹಿಸಿದ್ದ ಹರ, ಗುರು, ಚರಮೂರ್ತಿಗಳು, ಗಣ್ಯರು ಜಾತಿ ಗಣತಿಗೆ ನಮ್ಮ ವಿರೋಧ ಇಲ್ಲ, ಆದರದು ವಾಸ್ತವಾಂಶಗಳಿಂದ ಕೂಡಿರಬೇಕು ಎಂದು ಪ್ರತಿಪಾದಿಸಿದರು. ವೀರಶೈವ-ಲಿಂಗಾಯತ ಧರ್ಮ ವಿಭಜಿಸಲು ಹೋಗಿ ಕೈ ಸುಟ್ಟುಕೊಂಡ ಉದಾಹರಣೆ ಇದ್ದರೂ ಜಾತಿಗಣತಿ ವಿಷಯದಲ್ಲೂ ಮತ್ತದೇ ತಪ್ಪು ಪುನರಾವರ್ತನೆ ಆದರೆ ತಕ್ಕ ಪಾಠ ಕಲಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದರು. 1990ರ ಚಿನ್ನಪ್ಪರೆಡ್ಡಿ ಆಯೋಗದ ವರದಿ ಪ್ರಸ್ತಾಪಿಸಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಆಗ ಶೇ.17 ಇದ್ದ ವೀರಶೈವ ಲಿಂಗಾಯತರ ಪ್ರಮಾಣ 33 ವರ್ಷಗಳ ಬಳಿಕ ಏರಿಕೆ ಕಾಣುವ ಬದಲು ಶೇ. 10.68ಕ್ಕೆ ಕುಸಿದಿದ್ದು ಹೇಗೆ ಎಂಬ ಪ್ರಶ್ನೆ ಮುಂದಿಟ್ಟು ಮರು ಜಾತಿಗಣತಿ ಒತ್ತಾಯಕ್ಕೆ ಸಮರ್ಥನೆ ನೀಡಿದರು.

    ಶ್ರೀ ಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಒಂದು ಹೆಜ್ಜೆ ಮುಂದಿಟ್ಟು, ಯಾವುದೇ ಸರ್ಕಾರಗಳು ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದರೆ, ನಮ್ಮ ಒಗ್ಗಟ್ಟಿನ ಜತೆ ಚೆಲ್ಲಾಟ ಆಡಿದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅರಣ್ಯ ಸಚಿವರೂ ಆದ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಜಾತಿಗಣತಿ ವೈಜ್ಞಾನಿಕವಾಗಿರಬೇಕು ಎಂದು ಪ್ರಸ್ತಾಪಿಸುವ ಮೂಲಕ ಈ ಕುರಿತ ಚರ್ಚೆಗೆ ನಾಂದಿ ಹಾಡಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ವಚನಾನಂದ ಶ್ರೀ, ಮೂರು ಸಾವಿರ ಮಠದ ಶ್ರೀ ಗುರು ರಾಜಯೋಗೀಂದ್ರ ಸ್ವಾಮೀಜಿ, ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ ಇದೇ ನಿಲುವು ವ್ಯಕ್ತಪಡಿಸಿದರು.

    ಸ್ವಾಮೀಜಿಗಳು ಒಂದಾಗಬೇಕು: ವೀರಶೈವ ಲಿಂಗಾಯತ ಒಳ ಪಂಗಡಗಳು ಮಾತ್ರವಲ್ಲ. ಮಠಾಧೀಶರೂ ಒಂದಾಗುವ ಮೂಲಕ ಸಮಾಜವನ್ನು ಸರಿದಾರಿಗೆ ತರಬೇಕು. ಈ ನಿಟ್ಟಿನಲ್ಲಿ ವೀರಶೈವ ಮಹಾಸಭಾ ಮಾರ್ಗದರ್ಶನ ನೀಡಬೇಕು ಎಂಬ ಒಕ್ಕೊರಲ ಧ್ವನಿ ಹಾಗೂ ಸೌಲಭ್ಯ ಪಡೆಯಲು ಒಳಪಂಗಡಗಳನ್ನು ಪ್ರತ್ಯೇಕವಾಗಿ ನಮೂದಿಸುವ ಬದಲು ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಹೋರಾಟಕ್ಕೆ ಧುಮುಕೋಣ ಎಂಬ ಒತ್ತಾಯವೂ ಕೇಳಿಬಂದಿತು.

    ಜಾತಿ ಕಾಲಂನಲ್ಲಿ ಒಂದೇ ಹೆಸರಿರಲಿ: ಮುಂಬರುವ ಜಾತಿ, ಜನಗಣತಿಯಲ್ಲಿ ಸಮಾಜದ ಎಲ್ಲ ಒಳಪಂಗಡಗಳು ಜಾತಿ ಕಲಂನಲ್ಲಿ ಒಂದೇ ತೆರನಾದ ಹೆಸರು ನಮೂದಿಸಿದರೆ ಸಮಾಜದ ಜನಸಂಖ್ಯೆ ನಿಖರವಾಗಿ ತಿಳಿಯಲಿದೆ. ಈ ನಿಟ್ಟಿನಲ್ಲಿ ಏನು ಬರೆಸಬೇಕು ಎಂಬ ಕುರಿತು ಮಠಾಧೀಶರು, ಪ್ರಮುಖರ ಜತೆ ರ್ಚಚಿಸಿ ತಿಳಿಸಲಾಗá-ವುದು ಎಂದು ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ಎಸ್.ವೀರಣ್ಣ ತಿಳಿಸಿದರು.

    ಹಲವು ದಶಕಗಳಿಂದ ಸಮಾಜವನ್ನು ವಿಘಟಿಸುವ ಪ್ರಯತ್ನಗಳು ನಡೆದಿವೆ. ವೀರಶೈವ ಲಿಂಗಾಯತ ಮಹಾಸಭಾ ಇದಕ್ಕೆ ಅವಕಾಶ ನೀಡುವುದಿಲ್ಲ. ಎಂಥದ್ದೇ ಪರಿಸ್ಥಿತಿ ಎದುರಾದರೂ ಸಮಾಜದ ಜತೆ ಗಟ್ಟಿಯಾಗಿ ನಿಲ್ಲುತ್ತೇವೆ. 24ನೇ ಮಹಾ ಅಧಿವೇಶನ ಸಂಘಟನೆ ನಿಟ್ಟಿನಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಿದೆ. ಎಲ್ಲರೂ ಸೇರಿ ಸುಸಂಸ್ಕೃತ, ಶಕ್ತಿವಂತ ಸಮಾಜ ಕಟ್ಟೋಣ.

    | ಡಾ.ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ

    ಜಾತಿಗಣತಿ ಮಾಡಬೇಕು ಎನ್ನುವ ಕಲ್ಪನೆಯನ್ನು ಕೊಟ್ಟಿದ್ದೇ ವೀರಶೈವ ಸಮಾಜ. ಆದರೆ, ಅದಕ್ಕೆ ಅಂಕಿ-ಅಂಶಗಳ ಆಧಾರ ಇರಬೇಕು. ಸಮಾಜದಲ್ಲಿ ಎಲ್ಲ ಸ್ತರದ ಜನರೂ ಇದ್ದಾರೆ ಎಂಬುದನ್ನು ಗಮನಿಸಬೇಕು. ಸಮಾಜಕ್ಕೆ ಅನೇಕ ಪುಣ್ಯ ಪುರುಷರ ಇತಿಹಾಸವಿದೆ. ಸಂಘಟನೆಯಲ್ಲಿ ಶಕ್ತಿಯಿದೆ. ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು.

    | ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ

    ಸಮಾಜದ ಒಗ್ಗಟ್ಟಿನ ಜತೆ ಚೆಲ್ಲಾಟ ಬೇಡ
    ದಾವಣಗೆರೆ: ಸರ್ಕಾರ ವೀರಶೈವ ಲಿಂಗಾಯತ ಸಮಾಜವನ್ನು ಕಡೆಗಣಿಸಬಾರದು. ಇದರ ಒಗ್ಗಟ್ಟಿನ ಜತೆಗೆ ಚೆಲ್ಲಾಟ ಆಡಬಾರದು ಎಂದು ಶ್ರೀಶೈಲ ಪೀಠದ ಶ್ರೀ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಎಚ್ಚರಿಕೆ ನೀಡಿದರು. ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹಿಂದೆ ವೀರಶೈವ ಬೇರೆ, ಲಿಂಗಾಯತ ಬೇರೆ ಎನ್ನುವ ವಾದಕ್ಕೆ ಪರೋಕ್ಷ ಬೆಂಬಲ ನೀಡಿ ಕೈಸುಟ್ಟುಕೊಂಡಿದ್ದು ಆಗಿದೆ. ಈಗ ಮತ್ತೆ ಈ ಸಮುದಾಯವನ್ನು ಸಂಕುಚಿತಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿ ಮತ್ತೊಮ್ಮೆ ಕೈ ಸುಟ್ಟುಕೊಳ್ಳುವುದನ್ನು ಸರ್ಕಾರ ಮಾಡಬಾರದು ಎಂದರು. ರಾಜ್ಯದ ಒಟ್ಟು ಜನಸಂಖ್ಯೆಯ ಶೇ.17 ವೀರಶೈವರಿದ್ದಾರೆ ಎಂದು 1990ರಲ್ಲಿ ಚಿನ್ನಪ್ಪರೆಡ್ಡಿ ಆಯೋಗ ಹೇಳಿತ್ತು. ಆದರೆ, ಇತ್ತೀಚಿನ ವರದಿಯ ಬಗ್ಗೆ ಇರುವ ಕೆಲವು ಕಲ್ಪನೆ ಆಧರಿಸಿ ನೋಡಿದರೆ ಆ ಸಂಖ್ಯೆ ಶೇ.10.68ಕ್ಕೆ ಇಳಿಕೆಯಾಗಿದೆ. 35 ವರ್ಷಗಳಲ್ಲಿ ಬೆಳವಣಿಗೆಯಾಗುವ ಬದಲು ಕಡಿಮೆಯಾಗಿದೆ ಎಂದರೆ ಆ ವರದಿ ಪ್ರಶ್ನಿಸಬೇಕೇ ಬೇಡವೇ ಎಂಬುದನ್ನು ಸಮಾಜ ಚಿಂತಿಸಬೇಕು ಎಂದು ನುಡಿದರು. ವೃತ್ತಿ ಆಧಾರಿತ ಒಳ ಪಂಗಡಗಳನ್ನು ಜಾತಿ ಎಂದು ಸೃಷ್ಟಿಸಿ ಗಣತಿ ಮಾಡದೆ, ಅವರು ಅನುಸರಿಸುವ ಧರ್ಮದ ಆಧಾರದ ಮೇಲೆ ಗಣತಿ ಮಾಡಿದರೆ ವೀರಶೈವರ ಸಂಖ್ಯೆ 2 ಕೋಟಿಗೂ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಅದನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಒಳ ಪಂಗಡಗಳ ಮಠಾಧೀಶರು ಆ ಸಮುದಾಯದ ಜತೆಗೆ ಸಮಗ್ರ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳ ಹಿತ ಕಾಪಾಡುವ ಚಿಂತಿಬೇಕಿದೆ ಎಂದು ಹೇಳಿದರು.

    16 ಒಳ ಪಂಗಡಗಳು ಮಾತ್ರ ಕೇಂದ್ರದ ಒಬಿಸಿ ಪಟ್ಟಿಯಲ್ಲಿವೆ, ಉಳಿದವು ವಂಚಿತವಾಗಿವೆ. ಎಲ್ಲ ಒಳ ಪಂಗಡಗಳಿಗೂ ಒಂದೇ ರೀತಿಯ ಮೀಸಲಾತಿ ಸಿಗಬೇಕು. ವೀರಶೈವ ಲಿಂಗಾಯತ ತಾತ್ವಿಕ ವಿಚಾರ ಒತ್ತಟ್ಟಿಗೆ ಇರಲಿ, ಸಾಮಾಜಿಕ, ಶೈಕ್ಷಣಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಒಂದಾಗಿ ಸಾಗಬೇಕು. ನಾವೆಲ್ಲ ಸ್ವಾಮೀಜಿಗಳೂ ಒಂದಾಗಬೇಕು.

    | ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹರಿಹರ ಪಂಚಮಸಾಲಿ ಪೀಠ

    856 ಕೋಡ್
    ಪ್ರತಿ ಧರ್ಮಕ್ಕೆ ಒಂದು ಕೋಡ್ ಇರುವಂತೆ ವೀರಶೈವ ಲಿಂಗಾಯತ ಸಮಾಜಕ್ಕೂ ಕೋಡ್ ಇರಬೇಕು ಎಂದು ಶ್ರೀಶೈಲ ಜಗದ್ಗುರುಗಳು ಪ್ರತಿಪಾದಿಸಿದರು. 856 ಎಂಬ ಕೋಡ್ ಇಟ್ಟುಕೊಳ್ಳೋಣ ಎನ್ನುವ ಸಲಹೆಯನ್ನೂ ಕೊಟ್ಟರು. 8 ಎಂದರೆ ಅಷ್ಟಾವರ್ಣ, 5 ಎಂದರೆ ಪಂಚಾಚಾರ, 6 ಎಂದರೆ ಷಟ್​ಸ್ಥಲ ಎಂದು ವಿವರಣೆ ನೀಡಿದರು. ಮಹಾಸಭೆ ಇದನ್ನು ಹೆಚ್ಚು ಪ್ರಚಾರ ಮಾಡಬೇಕು, ಜನರೂ ಇದನ್ನು ಬೆಳೆಸಬೇಕು. ಮಹಾಸಭೆಯ ಚಿಹ್ನೆಯಲ್ಲೂ ಇದನ್ನು ಬಳಸಬಹುದು ಎಂದು ತಿಳಿಸಿದರು.

    ನಾವು ಜಾತಿಗಣತಿ ವಿರೋಧಿಗಳಲ್ಲ. ಒಳ ಪಂಗಡಗಳನ್ನೂ ಒಳಗೊಂಡಂತೆ ವೈಜ್ಞಾನಿಕವಾಗಿ ಗಣತಿ ಮಾಡಬೇಕು. ಸಮಾಜದವರು ಸಂಘಟಿತರಾಗಿ ಸರ್ಕಾರಕ್ಕೆ ಒತ್ತಡ ತರಬೇಕು. ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ವೀರಶೈವ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು. ಸಮಾಜವು ವಿಘಟನೆಯಿಂದ ಸಂಘಟನೆಯತ್ತ ಹೋಗಬೇಕು.

    | ಈಶ್ವರ ಖಂಡ್ರೆ, ಸಚಿವ ಮಹಾಸಭಾ ಮಹಾ ಪ್ರಧಾನ ಕಾರ್ಯದರ್ಶಿ

    ಆನ್​ಲೈನ್ ಗಣತಿ ಮಾಡಲಿ
    ರಾಜ್ಯ ಸರ್ಕಾರ ಜಾತಿಗಣತಿ ಮಾಡುವ ಮೊದಲೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾಜದ ಜನಸಂಖ್ಯೆ ಎಷ್ಟಿದೆ ಎಂಬುದನ್ನು ಆನ್​ಲೈನ್ ಮೂಲಕ ಗಣತಿ ಮಾಡಲಿ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು. ಜಾತಿ ನಿಂದನೆ ಮಾಡಿದರೆ ಪ್ರಕರಣ ದಾಖಲಿಸುವ ರೀತಿಯಲ್ಲೇ ಸಾಮಾಜಿಕ ಜೀವನದಲ್ಲಿ ವ್ಯಕ್ತಿ ನಿಂದನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವ ವ್ಯವಸ್ಥೆ ಬರಬೇಕು ಎಂದು ಹೇಳಿದರು.

    ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು. ಈ ಉದ್ದೇಶಕ್ಕಾಗಿ 5 ಕೋಟಿ ರೂ. ಮಂಜೂರಾಗಿ 5 ವರ್ಷಗಳೇ ಕಳೆದಿದ್ದರೂ ವಿಳಂಬವಾಗಿದೆ. ಬಸವಣ್ಣ ಅವರನ್ನು ‘ರಾಜ್ಯದ ಸಾಂಸ್ಕೃತಿಕ ನಾಯಕ’ ಎಂದು ಘೊಷಿಸುವಂತೆ ಬಸವ ಬಳಗ ಆಗ್ರಹಿಸಿದೆ. ಅಧಿವೇಶನದಲ್ಲಿ ಇದು ಘೊಷಣೆಯಾಗಬೇಕು.

    | ಅಥಣಿ ವೀರಣ್ಣ ಮಹಾಸಭಾ ಉಪಾಧ್ಯಕ್ಷ

    ಮಹಾಸಭಾ ಸ್ಥಾಪಿಸಿದ ಹಾನಗಲ್ ಕುಮಾರಸ್ವಾಮಿಗಳ ವ್ಯಕ್ತಿತ್ವ ಮಾದರಿಯಾದುದು. ಸಮಾಜವೇ ದೊಡ್ಡದು ಎಂದು ಭಾವಿಸಿದವರು. ಅಂದಿನ ಕಾಲದಲ್ಲಿ ಮೌಢ್ಯ ಇತ್ತು. ಸಮಾಜದವರು ಶಿಕ್ಷಣದಲ್ಲಿ ಹಿಂದುಳಿದಿದ್ದರು. ಇದನ್ನು ಮನಗಂಡು ಅವರು ಮಹಾಸಭೆ ಕಟ್ಟಿದರು.

    | ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮೂರು ಸಾವಿರ ಮಠ, ಹುಬ್ಬಳ್ಳಿ

    ವೈಜ್ಞಾನಿಕವಲ್ಲದ ಜಾತಿಗಣತಿ ನಮಗೆ ಬೇಕಿಲ್ಲ. ರಾಜ್ಯದಲ್ಲಿ ನಮ್ಮ ಸಮಾಜದ ಜನಸಂಖ್ಯೆ ಒಂದೂವರೆ ಕೋಟಿಗೂ ಹೆಚ್ಚಾಗಿದೆ. ಈ ಸಂಖ್ಯೆಯನ್ನು ಕಡಿಮೆ ತೋರಿಸುವುದು ಹಗಲುಗನಸು. ಹೊಸದಾಗಿ ಜಾತಿಗಣತಿ ಮಾಡಬೇಕು. ಒಳ ಪಂಗಡಗಳೆಲ್ಲ ಒಂದಾಗಬೇಕು. ದಾವಣಗೆರೆಯ ಅಧಿವೇಶನದಿಂದ ಸಮಾಜಕ್ಕೆ ಹೊಸ ಚೈತನ್ಯ ಬರಲಿದೆ.

    | ಜಿ.ಎಂ. ಸಿದ್ದೇಶ್ವರ ದಾವಣಗೆರೆ ಸಂಸದ

    ಹೆಚ್ಚಾಗಲಿದೆ ಜೆಎನ್​.1 ಪ್ರಕರಣಗಳ ಸಂಖ್ಯೆ, ಹೆದರುವ ಅಗತ್ಯವಿಲ್ಲ: ಹೀಗೆಂದು ಹೇಳಿದೆ ಉನ್ನತ ವೈದ್ಯಕೀಯ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts