More

    ಭಕ್ತರ ಬಾಧೆಗಳ ನಿವಾರಕ ವೀರಭದ್ರೇಶ್ವರ

    ಮಳವಳ್ಳಿ: ಪವಾಡ ಪುರುಷ ಸಿದ್ದಪ್ಪಾಜಿಗೆ ಹರಸಿದ, ತಾಲೂಕಿನ ಹಲಗೂರಿನಲ್ಲಿ ನೆಲೆಸಿರುವ ನಡುಕೇರಿ ಶ್ರೀ ವೀರಭದ್ರೇಶ್ವರಸ್ವಾಮಿ ಸನ್ನಿಧಾನದಲ್ಲಿ ಭಕ್ತಿಯಿಂದ ಬೇಡುವ ಭಕ್ತರ ಕೋರಿಕೆಗೆ ಹೂವಿನ ರೂಪದಲ್ಲಿ ಪ್ರಸಾದವನ್ನು ನೀಡುತ್ತ ಭಕ್ತರ ಎಲ್ಲ ಬಾಧೆಗಳನ್ನು ನಿವಾರಿಸುವ ನಂಬುಗೆಯ ದೈವವಾಗಿದೆ.

    ಶ್ರೀ ವೀರಭದ್ರಸ್ವಾಮಿ ದೇವರ ನೆಲೆಯಿಂದಲೇ ಹಲಗೂರು ಎಂದು ಗ್ರಾಮದ ಹೆಸರು ಬರಲು ಕಾರಣ ಎಂಬುದಾಗಿಯೂ ಐತಿಹಾಸಿಕ ಹಿನ್ನೆಲೆ ಇದೆ. ವೀರಗಾಸೆ ನೃತ್ಯವನ್ನು ಮಾಡಬೇಕಾದರೆ ಹಲಗೆ ಅಂತ ಹೇಳಿ ಎದೆಭಾಗದಲ್ಲಿ ಕಟ್ಟಿ ವೀರಭದ್ರ ನೃತ್ಯವನ್ನು ಮಾಡುತ್ತಾರೆ. ಅದಕ್ಕೆ ಹಲಗೆ ಎಂದು ಮತ್ತು ಶ್ರೀ ವೀರಭದ್ರಸ್ವಾಮಿ ನೆಲೆಸಿರುವ ಕ್ಷೇತ್ರವಾದ್ದರಿಂದ ಈ ಊರಿಗೆ ಹಲಗೂರು ಎಂಬ ಹೆಸರು ಬಂದಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

    ಊರಿನ ಮಧ್ಯಭಾಗದಲ್ಲಿ ದೇವಾಲಯ ಇರುವುದರಿಂದ ನಡುಕೇರಿ ಶ್ರೀ ವೀರಭದ್ರೇಶ್ವರ ಎಂಬ ನಾಮಾಂಕಿತದಿಂದ ಪರಿಚಿತವಾಗಿದೆ. ವೀರಭದ್ರೇಶ್ವರಸ್ವಾಮಿಯ ಮುಖ್ಯವಾದ ಆಯುಧ ಕತ್ತಿ(ಹಲಗೆ)ಯನ್ನು ಈ ಗ್ರಾಮದಲ್ಲಿ ತಯಾರು ಮಾಡುತ್ತಿದ್ದರಂತೆ. ಹಿಂದೆ ಪವಾಡ ಪುರುಷ ಸಿದ್ದಪ್ಪಾಜಿ ತಮ್ಮ ಗುರು ಮಂಟೇಸ್ವಾಮಿ ಆಜ್ಞೆಯ ಮೇರೆಗೆ ಹಲಗೂರಿಗೆ ಕಬ್ಬಿಣದ ಭಿಕ್ಷೆಯನ್ನು ತೆಗೆದುಕೊಂಡು ಹೋಗಲು ಬಂದಿದ್ದರಂತೆ, ಆ ಸಂದರ್ಭದಲ್ಲಿ ಅವರಿಗೆ ಇಲ್ಲಿ ಐದು ವೃತ್ತಿಗಳನ್ನು ಮಾಡುತ್ತಿದ್ದ ಪಂಚಾಳರು ಸಿದ್ದಪ್ಪಾಜಿಗೆ ಭಿಕ್ಷೆ ಕೊಡದೆ ಹಿಂಸಿಸಿ ಹೊರದೂಡಿದಾಗ ಶ್ರೀ ವೀರಭದ್ರಸ್ವಾಮಿ ಸನ್ನಿಧಾನಕ್ಕೆ ಬಂದು ಭಗವಂತನ ಮೊರೆಹೋಗುತ್ತಾರೆ. ವೀರಭದ್ರಸ್ವಾಮಿಯು ಸಿದ್ದಪ್ಪಾಜಿಯ ಕಷ್ಟವನ್ನು ಅರಿತು ನಿನ್ನ ಕೊರಳಿನ ರುದ್ರಾಕ್ಷಿಯಲ್ಲಿ ರುದ್ರಾಂಶ ಸಂಭೂತನಾಗಿ ಬರುತ್ತೇನೆ. ನನ್ನ ಆಶೀರ್ವಾದ ನಿನಗೆ ಸದಾ ಇರುತ್ತದೆ ಎಂದು ಆಶೀರ್ವದಿಸಿದ ನಂತರ ಪಂಚಾಳರಿಂದ ಆಯುಧ ಮಾಡಿಸಿಕೊಂಡು ಸಿದ್ದಪ್ಪಾಜಿ ಬಂದು ವೀರಭದ್ರಸ್ವಾಮಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಮಾಡಿ ಹೋಗಿದ್ದಾರೆಂಬ ಪ್ರತೀತಿ ಈಗಲೂ ಇದೆ.

    ನಡುಕೇರಿ ವೀರಭದ್ರೇಶ್ವರಸ್ವಾಮಿ ವಿಶೇಷ: ರಾಜ್ಯದಲ್ಲಿ ಹಲವಾರು ವೀರಭದ್ರೇಶ್ವರಸ್ವಾಮಿ ದೇವಾಲಯಗಳಿದ್ದು, ಎಲ್ಲ ದೇವಾಲಯಗಳಲ್ಲಿ ಐದು ಕೈಗಳ ವೀರಭದ್ರೇಶ್ವರಸ್ವಾಮಿ ವಿಗ್ರಹಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ಚಾಮರಾಜನಗರ ಜಿಲ್ಲೆ ಚನ್ನಪ್ಪನಪುರದಲ್ಲಿ 32 ಕೈ ಹೊಂದಿರುವ ಶ್ರೀ ವೀರಭದ್ರೇಶ್ವರ ಮೂರ್ತಿಯನ್ನು ಹೊರತುಪಡಿಸಿದರೆ ಹಲಗೂರಿನ ಶ್ರೀವೀರಭದ್ರೇಶ್ವರ ಸ್ವಾಮಿ ಆರು ಕೈಗಳನ್ನು ಹೊಂದಿದೆ. ಕತ್ತಿ, ಡಮರುಗ, ಬಿಲ್ಲು, ಬಾಣ, ತ್ರಿಶೂಲವನ್ನು ಹಿಡಿದಿರುವುದು ವಿಶೇಷವಾಗಿದೆ.
    ಪ್ರತಿದಿನ ಪ್ರಾತಃಕಾಲದಲ್ಲಿ ಪೂಜೆ ನಡೆಯುತ್ತದೆ. ರಾಜ್ಯ ಹಾಗೂ ಹೊರ ರಾಜ್ಯದ ಹಲವು ಕಡೆಗಳಲ್ಲಿ ಇಲ್ಲಿನ ದೇವರಿಗೆ ಭಕ್ತರಿದ್ದು, ಮನೆಯಲ್ಲಿ ಯಾವುದೇ ಶುಭಕಾರ್ಯ ಮಾಡುವ ಮೊದಲು ಶ್ರೀ ವೀರಭದ್ರೇಶ್ವರಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.

    ಪೂಜಾ ಕಾರ್ಯಗಳು: ಪ್ರತಿ ಹಬ್ಬಗಳಲ್ಲಿ ರುದ್ರಾಭಿಷೇಕ ಮತ್ತು ವಿಶೇಷ ಪೂಜೆಗಳು ಇರುತ್ತದೆ. ವರ್ಷಕೊಮ್ಮೆ ಊರಿನ ಜನರು ಸೇರಿ ಯುಗಾದಿ ನಂತರ ಗ್ರಾಮದೇವತೆಯಾದ ವೀರಭದ್ರೇಶ್ವರಸ್ವಾಮಿ ಸಹೋದರಿ ಪಟ್ಟಲದಮ್ಮನ ಹಬ್ಬವನ್ನು ಆಚರಿಸಲಾಗುತ್ತದೆ. ಉತ್ಸವ, ಕೊಂಡೋತ್ಸವ ಜರುಗಲಿದೆ. ಮೊದಲ ಪೂಜೆ ವೀರಭದ್ರಸ್ವಾಮಿಗೆ ಸಲ್ಲಿಸಿದ ನಂತರ ಕೊಂಡೋತ್ಸವಕ್ಕೆ ಹೊಂಬಾಳೆ ಮಾಡತಕ್ಕಂಥ ಎಲ್ಲವನ್ನೂ ವೀರಭದ್ರೇಶ್ವರಸ್ವಾಮಿ ಮುಂದಿಟ್ಟು ಪಟ್ಟಲದಮ್ಮ ದೇವಿಗೆ ಮೂರು ದಿನ ಜಾತ್ರೆ ಆಚರಿಸುವುದರ ಜತೆಗೆ ಊರಿನ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗುತ್ತದೆ.

    ಅಮಾವಾಸ್ಯೆ ದಿನ ವಿಶೇಷ ಪೂಜೆ ನಡೆಯಲಿದ್ದು, ಶತ್ರುದೋಷ, ದೃಷ್ಟಿದೋಷ ನಿವಾರಣೆಗೆ ವಿಶೇಷವಾದ ಪೂಜೆ ಮತ್ತು ಆರೋಗ್ಯ ಸಮಸ್ಯೆಗೆ ದೇಹ ಪುಷ್ಪಾಂಜಲಿ ಪೂಜೆಗಳನ್ನು ಭಕ್ತರು ಮಾಡಿಸುತ್ತಾರೆ. ವಿವಿಧ ಹೋಮ, ಪೂಜಾ ಕಾರ್ಯ ನಡೆಯುತ್ತವೆ.
    ಇಲ್ಲಿ ಶೈವ ಸಂಪ್ರದಾಯದಂತೆ ಪೂಜೆಯನ್ನು ಮಾಡಲಾಗುತ್ತದೆ. ಭಾದ್ರಪದ ಮಾಸದ ಗೌರಿ ಹಬ್ಬವಾದ ನಂತರ ಬರುವ ಮೊದಲ ಮಂಗಳವಾರ ವೀರಭದ್ರೇಶ್ವರಸ್ವಾಮಿಯ ಜಯಂತ್ಯುತ್ಸವವನ್ನು 5 ವರ್ಷಗಳಿಂದ ಆಚರಿಸಲಾಗುತ್ತಿದೆ.

    ಶುಭ ಸಮಾರಂಭಗಳಲ್ಲಿ, ಗೃಹಪ್ರವೇಶ, ವಿವಾಹ ಕಾರ್ಯಗಳಲ್ಲಿ ಹಾಗೂ ಊರಿನ ಉತ್ಸವಗಳಲ್ಲಿ ಶ್ರೀ ವೀರಭದ್ರೇಶ್ವರ ವೀರಗಾಸೆಯನ್ನು ಮಾಡುವುದರ ಮೂಲಕ ಹಾಗೂ ಉತ್ಸವಮೂರ್ತಿಯನ್ನು ಮನೆಗಳಿಗೆ ಕೊಂಡೊಯ್ದು ಆರಾಧನೆ ಮಾಡುವಂತಹ ಪರಂಪರೆ ದೇವಸ್ಥಾನದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

    ಪ್ರತಿ ಸೋಮವಾರ, ಶುಕ್ರವಾರ ಕಷ್ಟಗಳನ್ನು ಹೊತ್ತು ಬರುವ ಭಕ್ತಾದಿಗಳು ದೇವರ ಸನ್ನಿಧಾನದಲ್ಲಿ ಕುಳಿತು ಭಕ್ತಿಯಿಂದ ಕೋರಿಕೊಳ್ಳುವ ಬೇಡಿಕೆಗಳಿಗೆ ಸ್ವಾಮಿಯ ವಿಗ್ರಹದಲ್ಲಿ ಅಲಂಕೃತಗೊಂಡ ಹೂ ಕಳಚಿ ಬೀಳುವ ಮೂಲಕ ಶುಭ ಹಾಗೂ ಅಶುಭ ಸೂಚನೆಯನ್ನು ನೀಡುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

    ಮುಜರಾಯಿ ಇಲಾಖೆ ಅಧೀನದಲ್ಲಿರುವ ಚೋಳರ ಕಾಲದ ದೇವಸ್ಥಾನವನ್ನು ಗ್ರಾಮಸ್ಥರು ಕಮಿಟಿ ಮಾಡಿಕೊಂಡು ಸರ್ಕಾರದ ಸಹಯೋಗದಲ್ಲಿ 13 ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರೆ. ಜಡೆ ಮಾದಪ್ಪ ಹಾಗೂ ರುದ್ರ ಮಾದಪ್ಪ ಅರ್ಚಕ ಕುಟುಂಬದವರು ದೇವರ ಪೂಜಾ ಕೈಂಕರ್ಯ ನಡೆಸುತ್ತಿದ್ದು, ಪ್ರಸ್ತುತ ಎಸ್.ಎಂ.ಪ್ರಸಾದಶಾಸ್ತ್ರಿ ಸೇವೆ ಮುಂದುವರಿಸಿದ್ದಾರೆ.

    ದೇಗುಲಕ್ಕೆ ಹೋಗುವುದು ಹೇಗೆ?: ದೇವಸ್ಥಾನಕ್ಕೆ ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-209ರಲ್ಲಿ ಹಾಗೂ ಮೈಸೂರಿನಿಂದ ಮಳವಳ್ಳಿ ಪಟ್ಟಣದಿಂದ 20 ಕಿ.ಮೀ. ದೂರ ಕ್ರಮಿಸಿದರೆ ಹಲಗೂರು ಗ್ರಾಮದ ಸಾರಿಗೆ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಅನತಿ ದೂರ ಕ್ರಮಿಸಿದರೆ ಶ್ರೀ ವೀರಭದ್ರಸ್ವಾಮಿ ದೇವಾಲಯವಿದೆ. ಎಲ್ಲ ಕಡೆಗಳಿಂದ ಬಸ್ ಸೌಕರ್ಯ ಇದೆ.

    ಅಮಾವಾಸ್ಯೆ ದಿನ ವಿಶೇಷ ಪೂಜೆ ನಡೆಯಲಿದ್ದು, ಶತ್ರುದೋಷ ಹಾಗೂ ದೃಷ್ಟಿದೋಷ ನಿವಾರಣೆ, ಆರೋಗ್ಯ ಸಮಸ್ಯೆಗೆ ದೇಹ ಪುಷ್ಪಾಂಜಲಿ ಪೂಜೆಗಳನ್ನು ಭಕ್ತರು ಮಾಡಿಸುವ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ದೇವರ ಸನ್ನಿಧಾನದಲ್ಲಿ ಕುಳಿತು ಭಕ್ತಿಯಿಂದ ಕೋರಿಕೊಳ್ಳುವ ಪ್ರಶ್ನೆಗೆ ಸೂಕ್ತವಾದ ಪರಿಹಾರವನ್ನು ಸ್ವಾಮಿಯ ವಿಗ್ರಹದಲ್ಲಿ ಅಲಂಕೃತಗೊಂಡ ಹೂ ಕಳಚಿ ಬೀಳುವ ಮೂಲಕ ಶುಭ ಹಾಗೂ ಅಶುಭ ಸೂಚನೆಯನ್ನು ನೀಡುತ್ತದೆ.
    ಎಸ್.ಎಂ.ಪ್ರಸಾದಶಾಸ್ತ್ರಿ ಪ್ರಧಾನ ಅರ್ಚಕ ಹಲಗೂರು

    ಶ್ರೀ ವೀರಭದ್ರಸ್ವಾಮಿ ನೆಲೆಸಿದ ಹಿನ್ನೆಲೆಯಲ್ಲಿ ನಮ್ಮೂರಿಗೆ ಹಲಗೂರು ಎಂದು ಹೆಸರು ಬಂದಿದೆ ಎಂಬುದನ್ನು ಹಿರಿಯರಿಂದ ತಿಳಿದುಕೊಂಡಿದ್ದೇನೆ. ದೇವಸ್ಥಾನಕ್ಕೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಭಕ್ತಿಯಿಂದ ಬೇಡಿಕೊಂಡರೆ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬುದು ನನ್ನ ಬದುಕಿನಲ್ಲಿ ನಡೆದಿರುವ ಹಲವು ಘಟನೆಗಳಿಗೆ ಪರಿಹಾರ ದೊರೆತಿರುವುದೇ ಸಾಕ್ಷಿಯಾಗಿದೆ.
    ಬಸವರಾಜಸ್ವಾಮಿ ಭಕ್ತ ಹಲಗೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts