More

    ವೀರಭದ್ರ ನಗರದಲ್ಲಿ ಸೌಕರ್ಯ ಅಭದ್ರ!

    ಬೆಳಗಾವಿ: ಮಹಾನಗರದ ಹೃದಯ ಭಾಗದಲ್ಲಿರುವ, ನೌಕರರು, ವ್ಯಾಪಾರಿಗಳು, ಬಾಡಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ‘ವೀರಭದ್ರ ನಗರ’ ಮೂಲ ಸೌಕರ್ಯಗಳಲ್ಲಿದೆ ತತ್ತರಿಸಿದೆ. ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗುತ್ತಿಲ್ಲ.

    ನಗರದ ಕೋಟೆ ಕೆರೆಗೆ ಹೊಂದಿಕೊಂಡಿರುವ ವೀರಭದ್ರನಗರದಲ್ಲಿ 10 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಬಾಡಿಗೆದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಕುಡಿಯುವ ನೀರು, ರಸ್ತೆ, ಬೀದಿ ದೀಪ ಹಾಗೂ ಚರಂಡಿ ಸಮಸ್ಯೆಗಳಿಂದ ಜನರು ಬೇಸತ್ತಿದ್ದಾರೆ. ಮೇಲ್ನೋಟಕ್ಕೆ ಚರಂಡಿಗಳಿದ್ದರೂ ಕಲ್ಲು, ಮಣ್ಣುಗಳಿಂದ ಭರ್ತಿಯಾಗಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಹರಿದು ಸಮಸ್ಯೆ ಸೃಷ್ಟಿಸುತ್ತಿದೆ. ಇನ್ನೂ ಕೆಲ ಭಾಗದಲ್ಲಿ ಚರಂಡಿಗಳನ್ನೇ ಮುಚ್ಚಿ ಹಾಕಿದ್ದರಿಂದ ನೀರು ಹರಿಯದೆ ಅಲ್ಲಲ್ಲಿ ಮಡುಗಟ್ಟಿ ನಿಂತುಕೊಂಡಿದೆ.

    ಪಾಲಿಕೆಯವರು ವೀರಭದ್ರ ನಗರದಲ್ಲಿ 2010ರಿಂದ ಇಲ್ಲಿಯವರೆಗೆ ಮೂಲ ಸೌಕರ್ಯ ಹೆಸರಿನಲ್ಲಿ ಕೋಟ್ಯಂತರ ರೂ. ಅನುದಾನ ವೆಚ್ಚ ಮಾಡಲಾಗಿದೆ. ಆದರೆ, ಸಮಸ್ಯೆಗಳು ಮಾತ್ರ ಹಾಗೆ ಉಳಿದುಕೊಂಡಿವೆ. ಅಲ್ಲದೆ, ಶಿವಾಜಿ ನಗರ ಮತ್ತು ವೀರಭದ್ರ ನಗರದ ನಿವಾಸಿಗಳ ನಡುವಿನ ಕಿತ್ತಾಟದಿಂದಾಗಿ ಎರಡು ನಗರಗಳ ಗಡಿಯಲ್ಲಿರುವ ಜೀರೋ ಕ್ರಾಸ್ ಪ್ರದೇಶ ಸೌಲಭ್ಯಗಳಿಂದ ವಂಚಿತವಾಗಿದೆ. ವೀರಭದ್ರ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿತ್ಯ ಲಕ್ಷಾಂತರ ರೂ. ವಹಿವಾಟು ನಡೆಯುತ್ತದೆ. ಪಾಲಿಕೆಗೆ ಸಾಕಷ್ಟು ತೆರಿಗೆ ರೂಪದಲ್ಲಿ ಆದಾಯ ಬರುತ್ತದೆ. ಆದರೆ, ಈ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಸಮರ್ಪಕ ಅನುದಾನ ನೀಡುತ್ತಿಲ್ಲ. ಪ್ರತಿ ವರ್ಷ ಸಮಯಕ್ಕೆ ಸರಿಯಾಗಿ ತೆರಿಗೆ ಕಟ್ಟುತ್ತಿದ್ದೇವೆ. ಸಮಸ್ಯೆಗಳ ಕುರಿತು ದೂರು ಕೊಟ್ಟರೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಚರಂಡಿ, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಕುರಿತು ನಿರಂತರವಾಗಿ ಮಾಹಿತಿ ನೀಡಿದರೂ ಸಮಸ್ಯೆ ಪರಿಹರಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ.

    ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ವಿರಭದ್ರ ನಗರವೂ ಒಂದಾಗಿದೆ. ಮೇಲ್ನೋಟಕ್ಕೆ ಎಲ್ಲವನ್ನೂ ಅಭಿವೃದ್ಧಿ ಮಾಡಲಾಗಿದೆ ಎಂಬಂತೆ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ವಾಸ್ತವದಲ್ಲಿ ನಿತ್ಯ ನಾವು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

    ನಿತ್ಯ ಕುಡಿಯುವ ನೀರಿಗೆ ಪರದಾಟ

    ವೀರಭದ್ರ ನಗರ ಜೀರೋ ಕ್ರಾಸ್ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು ನಿತ್ಯ ಕುಡಿಯುವ ನೀರಿನ ಸಮಸ್ಯೆ ಎದುರಿಸಿಕೊಂಡು ಬರುತ್ತಿದ್ದಾರೆ. ಈ ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಅಲ್ಲಲ್ಲಿ ಕೊಳವೆ ಬಾವಿ ಕೊರೆಯಿಸಿ ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ, ಕೆಲವರು ಕೊಳವೆ ಬಾವಿಯಿಂದ ನೇರವಾಗಿ ಮನೆಗಳಿಗೆ ಪೈಪ್ ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಅರ್ಧ ಪ್ರದೇಶದ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ. ಆದರೆ, ಅಕ್ರಮದಾರರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ಖಾಲಿ ಪ್ರದೇಶಗಳಿಂದ ಸಮಸ್ಯೆ ಸೃಷ್ಟಿ

    ವೀರಭದ್ರ ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ ಹಸಿ, ಒಣ ತ್ಯಾಜ್ಯ ಹಾಕುತ್ತಿದ್ದಾರೆ. ಇದರಿಂದ ವಾತಾವರಣ ಗಬ್ಬೆದ್ದು ನಾರುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ವಾಸಿಸುವುದು ಕಷ್ಟವಾಗುತ್ತಿದೆ. ಅಲ್ಲದೆ, ಖಾಲಿ ನಿವೇಶನಗಲ್ಲಿ ಗಿಡಗಂಟಿ ಬೆಳೆದಿದ್ದು, ರಾತ್ರಿ ಸಮಯದಲ್ಲಿ ಓಡಾಡುವುದು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ನೀರು ಮಡುಗಟ್ಟಿ ನಿಲ್ಲುತ್ತಿದೆ. ಈ ಪ್ರದೇಶಗಳಲ್ಲಿ ಖಾಲಿ ನಿವೇಶನಗಳೂ ಸಮಸ್ಯೆ ಸೃಷ್ಟಿಸುತ್ತಿವೆ.

    ಬೆಳಗಾವಿ ಮಹಾನಗರ ಪಾಲಿಕೆಯ ಅಧೀನದಲ್ಲಿರುವ ವೀರಭದ್ರನಗರ ಜೀರೋ ಕ್ರಾಸ್ ಪ್ರದೇಶದಲ್ಲಿ ಚರಂಡಿ, ಕುಡಿಯುವ ನೀರು, ರಸ್ತೆ ಸಮಸ್ಯೆ ಇದೆ. ಆದರೆ, ಪಾಲಿಕೆಯವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.
    | ಸೋಮಶೇಖರ ಆರದಿಮಠ, ಸ್ಥಳೀಯ ನಿವಾಸಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts