More

    ಸಿಎಂ ವಿರುದ್ಧ ಗರಂ ಆದ ವಾಟಾಳ್ ನಾಗರಾಜ್ ಡಿ.5ರಂದು ಕರ್ನಾಟಕ ಬಂದ್ ಆಗ್ಲೆಬೇಕ್ ಅಂದ್ರು!

    ಹಾಸನ: ಮರಾಠ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ರದ್ದುಮಾಡಬೇಕು ಎಂದು ಆಗ್ರಹಿಸಿ ಡಿ.5 ರಂದು ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಕರ್ನಾಟಕ ಬಂದ್ ಮಾಡುವ ಕರೆಗೆ ಎಲ್ಲ ಕನ್ನಡಿಗರೂ ಬೆಂಬಲ ನೀಡಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರಾದ ವಾಟಾಳ್ ನಾಗರಾಜ್ ಮತ್ತು ಸಾ.ರಾ. ಗೋವಿಂದ್ ಮನವಿ ಮಾಡಿದರು.

    ಮರಾಠ ಅಭಿವೃದ್ಧಿ ನಿಗಮವನ್ನು ಇಂದು ರದ್ದು ಮಾಡದಿದ್ದರೆ ನಾಳೆ ಕೇರಳಿಗರು, ತಮಿಳರು ನಿಗಮ ಸ್ಥಾಪಿಸುವಂತೆ ಕೇಳುತ್ತಾರೆ. ಆಗ ಎಲ್ಲರಿಗೂ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೀರ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಾಟಾಳ್ ನಾಗರಾಜ್ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

    ಗೋವಾ ಜನಸಂಖ್ಯೆಯ ಶೇ. 40 ಕನ್ನಡಿಗರಿದ್ದಾರೆ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಕನ್ನಡಿಗರಿದ್ದಾರೆ. ಅವರಿಗೆ ಈ ರೀತಿ ಸೌಲಭ್ಯಗಳನ್ನು ನೀಡಲಾಗಿದೆಯೇ? ಮರಾಠ ಅಭಿವೃದ್ಧಿ ನಿಗಮ ರಚಿಸಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ನಾವು ಜೈಲಿಗೂ ಹೋಗುತ್ತೇಗವೆ. ಡಿ. 5 ರಂದು ನೂರಕ್ಕೆ ನೂರು ಕರ್ನಾಟಕ ಬಂದ್ ಆಗಲೇಬೇಕು ಎಂದರು.

    ವಿವಿಧ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಹೋಟೆಲ್‌ಗಳ ಮಾಲೀಕರು, ಟ್ಯಾಕ್ಸಿ, ಆಟೋ, ತರಕಾರಿ ಮತ್ತು ಫುಟ್ ಪಾತ್ ವ್ಯಾಪಾರಿಗಳೂ ಸಹಕರಿಸುತ್ತಿದ್ದಾರೆ. ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಬರಬೇಡಿ. ವಕೀಲರು ಕನ್ನಡಿಗರ ಪರವಾಗಿ ನಿಂತಿದ್ದಾರೆ. ನಾವು ಜೈಲಿಗೆ ಹೋದರೂ ಚಿಂತೆಯಿಲ್ಲ ಹೋಟೆಲ್ ಮತ್ತು ಅಂಗಡಿಗಳ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿಸಬೇಕು ಎಂದು ಹೋರಾಟಗಾರರಿಗೆ ಕರೆ ನೀಡಿದರು.

    ಸಾ.ರಾ. ಗೋವಿಂದ್ ಮಾತನಾಡಿ, ಕೇವಲ ಎರಡು ವಿಧಾನಸಭಾ ಸ್ಥಾನ ಗೆಲ್ಲುವುದಕ್ಕಾಗಿ ಕನ್ನಡಿಗರ ಸ್ವಾಭಿಮಾನಕ್ಕೆ ಅಪಮಾನ ಮಾಡಲಾಗಿದೆ. ರಾಜ್ಯದಲ್ಲಿ ಕಾವೇರಿ ಸಮಸ್ಯೆ, ಮೇಕೆದಾಟು, ಮಹಾದಾಯಿ ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಸಿಎಂಗೆ ಕಾಳಜಿ ಇಲ್ಲ. ಆದರೆ, ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ಗೋಗರೆದರೂ ಕನ್ನಡಾಭಿವೃದ್ಧಿ ಪ್ರಾಧಿಕಾರಕ್ಕೆ 2 ಕೋಟಿ ರೂ. ಅನುದಾನ ಕೊಡುವುದಿಲ್ಲ. ಆದರೆ, ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ಮೀಸಲಿಡಲಾಗಿದೆ. ಬಿಜೆಪಿ ನಾಯಕರಲ್ಲೇ ಅದಕ್ಕೆ ವಿರೋಧವಿದೆ ಎಂದರು.

    ಮರಾಠ ಅಭಿವೃದ್ಧಿ ನಿಗಮ ರಚಿಸುವ ಮೊದಲು, ಆಡಳಿತ ಪಕ್ಷ, ವಿರೋಧ ಪಕ್ಷದ ನಾಯಕರು, ಸಾಹಿತಿಗಳು, ರೈತರು, ಕನ್ನಡ ಪರ ಹೋರಾಟಗಾರರು ಕರೆದು ಚರ್ಚೆ ಮಾಡಿದ್ದಾರೆಯೇ? ಹಿಂದೆ ಗೋಕಾಕ್ ಚಳುವಳಿಯನ್ನ ನೆನಪಿಸಿಕೊಳ್ಳಿ, 40 ವರ್ಷ ಅಧಿಕಾರ ಮಾಡಿದ ಪಕ್ಷವನ್ನೇ ಕನ್ನಡಿಗರು ಅಧಿಕಾರದಿಂದ ಕಿತ್ತೆಸದರು. ಮುಂದೆ ರಾಜ್ಯ ಸರ್ಕಾರಕ್ಕೂ ಅಂತಹ ಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

    ಡಿ.5 ರಂದು ಹೋರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಸಿಎಂ, ಸಚಿವರು ಎಂದು ಹೇಳಿಕೆ ನೀಡಿದ್ದಾರೆ. ಕಠಿಣ ಕ್ರಮ ಎಂದರೆ ಏನು, ಗುಂಡು ಹಾರಿಸುತ್ತಾರೋ ಅಥವಾ ಜೈಲಿಗೆ ಕಳಿಸುತ್ತಾರೋ. ಈ ಹಿಂದಿನ ಯಾವುದೇ ಮುಖ್ಯ ಮಂತ್ರಿಯೂ ಕನ್ನಡಪರ ಹೋರಾಟಗಾರರ ವಿರುದ್ಧ ಈ ರೀತಿ ಹೇಳಿಕೆ ನೀಡಿರಲಿಲ್ಲ. ಹೋರಾಟ ಪ್ರಜಾ ಪ್ರಭುತ್ವ ವ್ಯವಸ್ಥೆ ಪ್ರಜೆಗಳಿಗೆ ನೀಡಿರುವ ಹಕ್ಕು. ಡಿ.5 ರಂದು ಹೋರಾಟ ಮಾಡಿಯೇ ತೀರುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts