More

    ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ಬಿರುಸಿನ ಪ್ರಚಾರ

    ಪ್ರತಿಷ್ಠಿತ ಕ್ಷೇತ್ರವಾದ ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಶುಕ್ರವಾರ ಬಿರುಸಿನ ಪ್ರಚಾರ ಮಾಡಿದರು.

    ಕ್ಷೇತ್ರ ವ್ಯಾಪ್ತಿಯ ಗೋಣಳ್ಳಿ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದ ಅವರು, ಮಾಡಹಳ್ಳಿ, ಅಳಗಂಚಿ, ದೇವನೂರು, ವರಹಳ್ಳಿ, ಕಕ್ಕರಹಟ್ಟಿ, ಚುಂಚನಹಳ್ಳಿ, ಹನುಮನಪುರ, ಕೊಣನೂರು, ಕೊಣನೂರು ಪುರ, ದಾಸನೂರು, ಪಣ್ಯದ ಹುಂಡಿ, ಮೇಲಾಜಿಪುರ, ಮರಳ್ಳಿಪುರ, ಕಾರೇಮೋಳೆ, ದೊಡ್ಡಹೊಮ್ಮ, ಔತಳಪುರ, ಚಿಕ್ಕಹೊಮ್ಮ, ಅಂಕುಶರಾಯನಪುರ, ಚಿಕ್ಕಹೊಮ್ಮದ ಮೋಳೆ, ತೊರಳ್ಳಿ ಮೋಳೆ, ತೊರಳ್ಳಿ, ಈಶ್ವರಗೌಡನಹಳ್ಳಿ, ಕೊಟ್ಟರಾಯನಹುಂಡಿ, ತಾಯೂರು, ವಡ್ಡರಹುಂಡಿ, ಹಾರೋಪುರ, ಸಾಲುಂಡಿ, ಗೆಜ್ಜನಗಹಳ್ಳಿ, ಕಾಹಳ್ಳಿ, ಬಳುಗಲಿ ಹಾಗೂ ಸುತ್ತೂರು ಗ್ರಾಮಗಳಲ್ಲಿ ಮಿಂಚಿನ ಸಂಚಾರ ನಡೆಸಿದರು.

    ಸೋಮಣ್ಣ ಪ್ರಚಾರಕ್ಕೆ ಸಾಗಿದ ಮಾರ್ಗದುದ್ದಕ್ಕೂ ಗ್ರಾಮಗಳ ಗಡಿಭಾಗದಿಂದ ಊರಿನಾದ್ಯಂತ ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಕಿವಿಗಡಚಿಕ್ಕುವ ಪಟಾಕಿ ಶಬ್ದದೊಂದಿಗೆ ತಮಟೆ, ಡೋಲು, ಭಾಜಾ ಭಜಂತ್ರಿ ಮೇಳೈಸಿತ್ತು. ಗ್ರಾಮಗಳ ಹೆಂಗೆಳೆಯರು ಸೋಮಣ್ಣ ಅವರಿಗೆ ದೀಪದಾರತಿ ಬೆಳಗಿ, ಹಣೆಗೆ ತಿಲಕ ಇಟ್ಟು, ದೃಷ್ಟಿ ತಾಕದಂತೆ ಅರಿಶಿಣ, ಕುಂಕುಮ ಮಿಶ್ರಿತ ನೀರಿನಲ್ಲಿ ಇಳಿ ತೆಗೆದು ಗ್ರಾಮದಿಂದ ಬೀಳ್ಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ಗ್ರಾಮಗಳಲ್ಲಿ ಮಾತ್ರವಲ್ಲದೆ, ಸೋಮಣ್ಣ ಸಾಗುತ್ತಿದ್ದ ಹಾದಿಯುದ್ದಕ್ಕೂ ಇಕ್ಕೆಲಗಳಲ್ಲಿನ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತ ಸಮುದಾಯ ಕಾರಿನ ಸಮೀಪಕ್ಕೆ ಆಗಮಿಸಿ ಜಯಶೀಲರಾಗಿ ಬನ್ನಿ ಎಂದು ಹರಸುತ್ತಿದ್ದುದು ಕಂಡುಬಂತು.

    ಎಲ್ಲ ಸಮುದಾಯ ಹಾಗೂ ಜನಾಂಗಗಳ ಇಡೀ ಕ್ಷೇತ್ರದ ಜನತೆ ಸೋಮಣ್ಣ ಅವರ ಪರ ಜೈಕಾರ ಕೂಗಿದ್ದು ವಿಶೇಷವಾಗಿತ್ತು. ಸೋಮಣ್ಣ ಅವರು ಗ್ರಾಮ ಪ್ರವೇಶಿಸುತ್ತಿದ್ದಂತೆ ಗ್ರಾಮದ ಮಕ್ಕಳ ಜೈಕಾರ ಮುಗಿಲು ಮುಟ್ಟಿದ್ದರೆ, ಸೋಮಣ್ಣ ಅವರ ಕೈ ಕುಲುಕಲು ಪೈಪೋಟಿಯೇ ನಡೆದಿತ್ತು. ಮತ್ತೊಂದೆಡೆ ಕೆಲ ಗ್ರಾಮಗಳಲ್ಲಿ ಸೋಮಣ್ಣ ಅವರ ಮೇಲೆ ಬಗೆ ಬಗೆಯ ಹೂಗಳ ಸುರಿಮಳೆ ಸುರಿಸಿದರು.
    ತೆರೆದ ವಾಹನದಲ್ಲಿ ನಿಂತು ಸೋಮಣ್ಣ ರೋಡ್ ಶೋ ಮೂಲಕ ಎಲ್ಲೆಡೆ ಪ್ರಚಾರ ನಡೆಸಿದರು. ಎಲ್ಲ ಕಡೆಗಳಲ್ಲಿ ಕಾರ್ಯಕರ್ತರು ಕಮಲದ ಗುರುತು ಇರುವ ಶಲ್ಯಗಳನ್ನು ಧರಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ವಿ.ಶ್ರೀನಿವಾಸಪ್ರಸಾದ್, ಸಚಿವ ಶ್ರೀರಾಮುಲು, ಬಿ.ವೈ.ವಿಜಯೇಂದ್ರ, ವಿ.ಸೋಮಣ್ಣ ಮತ್ತು ಬಿಜೆಪಿ ಪರ ಜೈಕಾರಗಳು ಮೊಳಗಿದವು. ಪ್ರತಿ ಗ್ರಾಮದಲ್ಲೂ ರೋಡ್ ಶೋ ಮಾರ್ಗದಲ್ಲಿ ಸಿಗುವ ದೇವಾಲಯಗಳಿಗೆ ತೆರಳಿ ಸೋಮಣ್ಣ ನಮಸ್ಕರಿಸಿದರು.

    ಪ್ರತಿ ಗ್ರಾಮದಲ್ಲೂ ಡಬಲ್ ಇಂಜಿನ್ ಸರ್ಕಾರದ ಸಾಧನೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಮತಯಾಚಿಸಲಾಯಿತು. ಮೀಸಲಾತಿ ಮರುಹಂಚಿಕೆ, ತಳವಾರ, ಪರಿವಾರ ಎಸ್ಟಿಗೆ ಸೇರ್ಪಡೆ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ತಿಳಿಸುವ ಮೂಲಕ ಮತಯಾಚಿಸಲಾಯಿತು.

    ವರುಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕಲ್ಮಹಳ್ಳಿ ವಿಜಯಕುಮಾರ್, ಮುಖಂಡರಾದ ರೇವಣಸಿದ್ದಯ್ಯ, ಸದಾನಂದ, ಅಶೋಕ್, ಎಲ್. ಆರ್.ಮಹದೇವಸ್ವಾಮಿ, ರಾಜೀವ್, ಯು.ಎ.ಶೇಖರ, ಅಪ್ಪಣ್ಣ, ಸಿದ್ದವೀರಪ್ಪ, ಚಂದ್ರಪ್ಪ, ಎಲ್.ಮಾದಪ್ಪ, ಗುರುಸ್ವಾಮಿ ಇತರರು ಇದ್ದರು.
    ಪ್ರಚಾರದ ವೇಳೆ ಸಚಿವ ವಿ.ಸೋಮಣ್ಣ ದೇವನೂರು ಗ್ರಾಮದ ಶ್ರೀ ಗುರುಮಲ್ಲೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಕುಶಲೋಪರಿ ವಿಚಾರಿಸಿದರು. ಬಳಿಕ ಶ್ರೀಗಳಿಂದ ಆಶೀರ್ವಾದ ಪಡೆದು ಫಲತಾಂಬೂಲ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts