More

    ಮಾಜಿ ಸಿಎಂ ಗುಣಗಾನ ಮಾಡಿದ ವರ್ತೂರ್ ; ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ ಹೇಳಿಕೆ

    ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳಿದರೆ ಉರಿದು ಬೀಳುತ್ತಿದ್ದ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಈಗ ಅವರನ್ನು ಹಾಡಿ ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಕಾಂಗ್ರೆಸ್ ಸೇರಿಕೊಳ್ಳಲು ಸಹಕಾರ ನೀಡಲಿಲ್ಲವೆಂಬ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಕುರುಬ ಸಮಾಜಕ್ಕೆ ಹೀರೋ ಆಗಲು ಯತ್ನಿಸಿದ್ದ ವರ್ತೂರ್ ಈಗ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಹೊಲಿಕೆ ಮಾಡಿರುವುದು ಅಹಿಂದ ವರ್ಗದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ಕಳೆದ ಚುನಾವಣೆಯಲ್ಲಿ ಸೋತ ನಂತರ ಮೌನಕ್ಕೆ ಜಾರಿದ್ದ ವರ್ತೂರ್, ನಗರದ ಹಳೇ ಬಸ್ ನಿಲ್ದಾಣದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತಿಯಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಮಾನಿಗಳಲ್ಲಿದ್ದ ಅನುಮಾನಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.

    ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಡ ಮಕ್ಕಳಿಗೆ ಅನ್ನಭಾಗ್ಯ ಕಲ್ಪಿಸಿದರು, ಬಡವರ ಪರ ಕೆಲಸ ಮಾಡಿರುವುದರಿಂದ ಅವರನ್ನು ಸ್ಮರಿಸುತ್ತಿರುವೆ ಎಂದು ಹೇಳಿಕೊಂಡಿದ್ದು, ಈ ಮಾತಿನಿಂದ ಸಿದ್ದು ಕರಗುವರೇ, ಕಾಂಗ್ರೆಸ್‌ಗೆ ಹತ್ತಿರವಾಗಲು ಅನುಕೂಲವಾಗುವುದೇ ಕಾದು ನೋಡಬೇಕಿದೆ.

    ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವರ್ತೂರ್ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರಾದರೂ ಶಾಸಕ ರಮೇಶ್ ಕುಮಾರ್, ಎಂಎಲ್‌ಸಿ ನಜೀರ್ ಅಹಮ್ಮದ್ ಸೇರಿ ಕೆಲ ಮುಖಂಡರು ಒಪ್ಪದಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸುವ ಗುರಿಯೊಂದಿಗೆ ‘ನಮ್ಮ ಕಾಂಗ್ರೆಸ್’ ಸ್ಥಾಪಿಸಿದ್ದರಾದರೂ ತಮ್ಮ ಕ್ಷೇತ್ರದಲ್ಲೇ ಗೆಲುವು ಸಾಧಿಸಲಾಗದೆ ಪೇಚಿಗೆ ಸಿಲುಕಿದ್ದರು.

    ಮತಗಳ ಬೇಟೆಗೆ ತಂತ್ರ?: ಕೋಲಾರ ನಗರಸಭೆ ಮತ್ತು ಜಿಪಂನಲ್ಲಿ ನಮ್ಮ ಬೆಂಬಲಿಗರು ಇರುವುದನ್ನೇ ದೊಡ್ಡ ಬಂಡವಾಳ ಎಂದುಕೊಂಡಿರುವ ವರ್ತೂರ್ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ, ವಿಧಾನಪರಿಷತ್ ಚುನಾವಣೆ ಹಾಗೂ ಶೀಘ್ರದಲ್ಲೇ ಗ್ರಾಪಂಗಳಿಗೆ ಚುನಾವಣೆ ನಡೆಯುವುದರಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡು ಸಿದ್ದರಾಮಯ್ಯ ಅವರನ್ನು ಹೊಗಳುವ ಮೂಲಕ ಅಹಿಂದ ಮತಗಳ ಬೇಟೆಗೆ ತಂತ್ರ ರೂಪಿಸುತ್ತಿರಬಹುದು ಎನ್ನಲಾಗಿದೆ. ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಭಾರತ ಸೇವಾ ದಳದ ಅಧ್ಯಕ್ಷ ಕೆ.ಎಸ್.ಗಣೇಶ್, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆ.ಎಂ.ಸಂದೇಶ್, ಪದಾಧಿಕಾರಿಗಳಾದ ಕೆ.ಶ್ರೀನಿವಾಸಯ್ಯ, ಪಿ.ಎನ್.ದಾಸ್, ಸಕ್ಕನಹಳ್ಳಿ ಬಿ.ಕುಪೇಂದ್ರ, ಅರಳೇರಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ, ಪಿಯನಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

    ಶಾಸಕರ ವಿರುದ್ಧ ಭೂ ಕಬಳಿಕೆ ಆರೋಪ:ಕಾರ್ಯಕ್ರಮದ ವೇದಿಕೆಯಲ್ಲಿ ವರ್ತೂರ್ ಅವರು ಶಾಸಕ ಕೆ.ಶ್ರೀನಿವಾಸಗೌಡರ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದರಲ್ಲದೆ, ತಮ್ಮ ಬಳಿ ಸಾಕ್ಷಿಗಳಿವೆ. ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಚೆಕ್ ಡ್ಯಾಂ ಅನ್ನು ಶ್ರೀನಿವಾಸಗೌಡ ಅವರು ತಮ್ಮ ಗ್ರಾಮಕ್ಕೆ ಹಾಕಿಸಿಕೊಂಡಿದ್ದಾರೆಂದು ದೂರಿದರು. ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ವೇಮಗಲ್‌ನಲ್ಲಿ ಕಾಮಗಾರಿಗೆ ಭೂಮಿ ಪೂಜೆ ಮಾಡಿರುವ ಶಾಸಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸದಿದ್ದರೆ ಡಿಸಿ ವಿರುದ್ಧ ಉಸ್ತುವಾರಿ ಕಾರ್ಯದರ್ಶಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts